ಪೆಟ್ರೋಲಿಯಂ ವಸ್ತುಗಳ ಬೆಲೆ ಹೆಚ್ಚಳ ಖಂಡಿಸಿ ಬಿಜೆಪಿ ಪ್ರತಿಭಟನೆ

KannadaprabhaNewsNetwork | Published : Jun 26, 2024 12:31 AM

ಸಾರಾಂಶ

ತೈಲ ಬೆಲೆ ಹೆಚ್ಚಿಸಿದ್ದನ್ನು ಖಂಡಿಸಿ ಮಂಗಳವಾರ ಬಿಜೆಪಿ ಕಾರ್ಯಕರ್ತರು ಶಾಸಕ ಡಾ. ಚಂದ್ರು ಲಮಾಣಿ ಅವರ ನೇತೃತ್ವದಲ್ಲಿ ಲಕ್ಷ್ಮೇಶ್ವರದ ಬಸ್ ನಿಲ್ದಾಣದ ಎದುರು ರಸ್ತೆ ತಡೆ ನಡೆಸಿದರು.

ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ

ರಾಜ್ಯದ ಕಾಂಗ್ರೆಸ್ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ತೆರಿಗೆ ಹಾಕುವ ಮೂಲಕ ಜನರ ಜೇಬಿಗೆ ಕತ್ತರಿ ಹಾಕುವ ಕಾರ್ಯ ಮಾಡುತ್ತಿರುವುದು ಖಂಡನಾರ್ಹ. ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡುವ ಮೂಲಕ ಜನರಿಗೆ ಹೊರೆ ಹಾಕುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಆಕ್ರೋಶ ವ್ಯಕ್ತಪಡಿಸಿದರು.

ತೈಲ ಬೆಲೆ ಹೆಚ್ಚಿಸಿದ್ದನ್ನು ಖಂಡಿಸಿ ಮಂಗಳವಾರ ಬಿಜೆಪಿ ಕಾರ್ಯಕರ್ತರು ಶಾಸಕ ಡಾ. ಚಂದ್ರು ಲಮಾಣಿ ಅವರ ನೇತೃತ್ವದಲ್ಲಿ ಲಕ್ಷ್ಮೇಶ್ವರದ ಬಸ್ ನಿಲ್ದಾಣದ ಎದುರು ರಸ್ತೆ ತಡೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ಘೋಷಣೆ ಕೂಗಿದರು.''''ಗ್ಯಾರಂಟಿಗಳ ನೆಪದಲ್ಲಿ ಸರ್ಕಾರ ರಾಜ್ಯದ ಖಜಾನೆಯನ್ನು ಲೂಟಿ ಮಾಡುತ್ತಿದೆ. ಜನತೆಗೆ ಸರಿಯಾಗಿ ಗ್ಯಾರಂಟಿ ಯೋಜನೆಗಳೂ ತಲುಪುತ್ತಿಲ್ಲ. ಇದರಿಂದಾಗಿ ಜನರು ನಿರಾಶರಾಗಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಜನರಿಗೆ ಸುಳ್ಳು ಹೇಳುವ ಮೂಲಕ ಮೋಸ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಆಗದೇ ಹೋದರೆ ರಾಜಿನಾಮೆ ಕೊಟ್ಟು ಮನೆಗೆ ಹೋಗುವುದು ಸೂಕ್ತ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು ಬಹಿರಂಗವಾಗಿದೆ. ಅದರಂತೆ ಎಲ್ಲ ನಿಗಮಗಳಲ್ಲೂ ಇದೇ ರೀತಿಯ ಭ್ರಷ್ಟಾಚಾರ ನಡೆದಿದೆ ಎಂಬ ಸಂಶಯ ಕಾಡುತ್ತಿದೆ’ಎಂದ ಅವರು ‘ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಮಕ್ಕಳಿಗೆ ಶಾಲಾ ಕಾಲೇಜುಗಳಿಗೆ ಹೋಗಿ ಬರಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಹಣ ಕೊಟ್ಟು ಪ್ರಯಾಣಿಸುವ ಪುರುಷ ಪ್ರಯಾಣಿಕರೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟೆಲ್ಲ ತೊಂದರೆ ಮಧ್ಯೆ ಇದೀಗ ಸರ್ಕಾರ ತೈಲ ಬೆಲೆಯನ್ನು ಹೆಚ್ಚಿಸಿ ಜನರಿಗೆ ಗಾಯದ ಮೇಲೆ ಬರೆ ಎಳೆದಿದೆ. ತೈಲ ಬೆಲೆ ಹೆಚ್ಚಾದರೆ ಇತರೇ ವಸ್ತುಗಳ ಬೆಲೆಯೂ ಏರುತ್ತದೆ. ಇದು ರಾಜ್ಯದ ಜನರಿಗೆ ಹೊರೆಯಾಗಿ ಪರಿಣಮಿಸಿದೆ’ಎಂದು ಆರೋಪಿಸಿದರು.

ಶಿರಹಟ್ಟಿ ಮಂಡಲದ ಬಿಜೆಪಿ ಅಧ್ಯಕ್ಷ ಸುನಿಲ ಮಹಾಂತಶೆಟ್ಟರ್‌ ಮಾತನಾಡಿ ‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಸರ್ಕಾರ ರೈತರಿಗೆ ಕೊಡುತ್ತಿದ್ದ ಪ್ರೋತ್ಸಾಹ ಧನ ಬಂದ್ ಮಾಡಿ ಅವರಿಗೆ ಅನ್ಯಾಯ ಮಾಡಿದೆ. ಅಲ್ಲದೆ ಬಡ ಮಕ್ಕಳ ವಿದ್ಯಾರ್ಥಿ ವೇತನ ಕಡಿತ ಮಾಡುವುದರೊಂದಿಗೆ ಶಿಕ್ಷಣದಿಂದ ಅವರನ್ನು ವಂಚಿತರನ್ನಾಗಿ ಮಾಡಿದೆ'''' ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ನವೀನ ಬೆಳ್ಳಟ್ಟಿ, ಅಶೋಕ ಪಲ್ಲೇದ, ಗಂಗಾಧರ ಮೆಣಸಿನಕಾಯಿ, ಡಿ.ವೈ. ಹುನಗುಂದ, ಮಂಜನಗೌಡ ಕೆಂಚನಗೌಡ್ರ, ದುಂಡೇಶ ಕೊಟಗಿ, ಎಂ.ಆರ್. ಪಾಟೀಲ, ಅಶೋಕ ಶಿರಹಟ್ಟಿ, ಅನಿಲ ಮುಳಗುಂದ ಮಾತನಾಡಿದರು.

ಈ ವೇಳೆ ಶಿವಯೋಗಿ ಅಂಕಲಕೋಟಿ, ನಿಂಗಪ್ಪ ಬನ್ನಿ, ಭೀಮಣ್ಣ ಯಂಗಾಡಿ, ಹನುಮಂತಪ್ಪ ಜಾಲಿಮರದ, ಜಗದೀಶಗೌಡ ಪಾಟೀಲ, ಪರಶುರಾಮ ಇಮ್ಮಡಿ, ಪ್ರಕಾಶ ಬೆಂತೂರ, ಪ್ರಕಾಶ ಮಾದನೂರ, ರಮೇಶ ಹಾಳದೋಟದ, ರುದ್ರಪ್ಪ ಲಮಾಣಿ, ಆರ್.ವಿ. ವೆರ್ಣೇಕರ್, ಗಿರೀಶ ಚೌರೆಡ್ಡಿ,

ಎನ್.ಎನ್. ನೆಗಳೂರ, ಮುತ್ತಣ್ಣ ಚೋಟಗಲ್ಲ, ಅಶೋಕ ನೀರಾಲೋಟಿ, ಶಂಭು ಹುನಗುಂದ, ವಿಶಾಲ ಬಟಗುರ್ಕಿ, ಶಕ್ತಿ ಕತ್ತಿ, ರಾಜಶೇಖರ ಶಿರಹಟ್ಟಿ ಸೇರಿದಂತೆ ಮತ್ತಿತರರು ಇದ್ದರು. ಗ್ರೇಡ್-೨ ತಹಸೀಲ್ದಾರ್ ಮಂಜುನಾಥ ಅಮಾಸಿ ಮನವಿ ಸ್ವೀಕರಿಸಿದರು.

Share this article