ಹುಬ್ಬಳ್ಳಿ: ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ 24ನೆಯ ಅವಧಿಯ ಮೇಯರ್ ಆಗಿ ಧಾರವಾಡದ ಜ್ಯೋತಿ ಪಾಟೀಲ, ಉಪಮೇಯರ್ ಆಗಿ ಹುಬ್ಬಳ್ಳಿಯ ಸಂತೋಷ ಚವ್ಹಾಣ ಆಯ್ಕೆಯಾಗಿದ್ದಾರೆ.
ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ, ಉಪಮೇಯರ್ ಸ್ಥಾನ ಹಿಂದುಳಿದ ಬ ವರ್ಗಕ್ಕೆ ಮೀಸಲಾಗಿತ್ತು. ಸದಸ್ಯರು ಕೈ ಎತ್ತುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದರು.ಪಾಲಿಕೆ ಸಭಾ ಭವನದಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಮೇಯರ್ ಸ್ಥಾನಕ್ಕೆ ಬಿಜೆಪಿಯ ಜ್ಯೋತಿ ಪಾಟೀಲ 47 ಮತ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಸುವರ್ಣ ಕಲ್ಲಕುಂಟ್ಲಾ 37 ಮತಗಳನ್ನು ಪಡೆದರು. ಇನ್ನು ಎಐಎಂಐಎಂನ ವಹೀದಾಖಾನಂ ಕಿತ್ತೂರು ಬರೀ ಮೂರು ಮತ ಪಡೆದರು. ಅತ್ಯಧಿಕ ಮತ ಪಡೆದ ಜ್ಯೋತಿ ಪಾಟೀಲ ಮೇಯರ್ ಆಗಿ ಚುನಾಯಿತರಾದರು.
ಉಪಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಸಂತೋಷ ಚವ್ಹಾಣ 47 ಮತಗಳನ್ನು ಪಡೆದು ಜಯಶಾಲಿಯಾದರೆ, ಕಾಂಗ್ರೆಸ್‌ನ ಶಂಭುಗೌಡ ಸಾಲ್ಮನಿ 37 ಮತ ಪಡೆದು ಪರಾಭವಗೊಂಡರು. ಎಐಎಂಐಎಂನಿಂದ ಉಪಮೇಯರ್ ಸ್ಥಾನಕ್ಕೆ ಯಾರೊಬ್ಬರು ಸ್ಪರ್ಧಿಸಿರಲಿಲ್ಲ.ಹೊರಟ್ಟಿ, ಶೆಟ್ಟರ್ ಗೈರು: ಮತದಾನ ಪ್ರಕ್ರಿಯೆಯಲ್ಲಿ ಪಾಲಿಕೆಯ 82 ಸದಸ್ಯರು ಸೇರಿದಂತೆ ಜನಪ್ರತಿನಿಧಿಗಳೆಲ್ಲ ಸೇರಿ 90 ಜನ ಮತದಾರರು. ಕೇಂದ್ರ ಸಚಿವರೂ ಆದ ಸಂಸದ ಪ್ರಹ್ಲಾದ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ವಿಪ ಸದಸ್ಯ ಎಸ್.ವಿ. ಸಂಕನೂರ ಭಾಗವಹಿಸಿದ್ದರು.
ಶಾಸಕ ವಿನಯ ಕುಲಕರ್ಣಿ ಜಿಲ್ಲೆಗೆ ಪ್ರವೇಶ ನಿಷಿದ್ಧ ಇರುವ ಕಾರಣ ಗೈರಾಗಿದ್ದರೆ, ಸಭಾಪತಿ ಬಸವರಾಜ ಹೊರಟ್ಟಿ, ವಿಪ ಸದಸ್ಯ ಪ್ರದೀಪ ಶೆಟ್ಟರ್ ಗೈರಾಗಿದ್ದರು.ಮೇಯರ್‌ಗಿರಿ ಧಾರವಾಡಕ್ಕೆ ಕೊಟ್ಟರೆ ಉಪಮೇಯರ್ ಸ್ಥಾನ ಹುಬ್ಬಳ್ಳಿಗೆ ಕೊಡುವುದು ವಾಡಿಕೆ. ಅದರಂತೆ ಮೇಯರ್‌ಗಿರಿ ಧಾರವಾಡಕ್ಕೆ ಹೋಗಿದ್ದ ಪರಿಣಾಮ ಹುಬ್ಬಳ್ಳಿಯ ಸೆಂಟ್ರಲ್ ಕ್ಷೇತ್ರದ 41ನೆಯ ವಾರ್ಡ್‌ನ ಸಂತೋಷ ಚವ್ಹಾಣ್‌ಗೆ ಸಲೀಸಾಗಿ ಒಲಿದು ಬಂದಿತು.
ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆಣ್ಣವರ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಎಸ್.ಎಸ್. ಬಿರಾದಾರ, ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಮತದಾನ ಪ್ರಕ್ರಿಯೆ ನಡೆಸಿದರು.ಬಳಿಕ ಮೇಯರ್- ಉಪಮೇಯರ್ ಅವರನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ಸೇರಿದಂತೆ ಪಕ್ಷದ ಮುಖಂಡರೆಲ್ಲರೂ ಅಭಿನಂದಿಸಿದರು.
ವಿಜಯೋತ್ಸವ: ಮೇಯರ್ ಹಾಗೂ ಉಪಮೇಯರ್ ಹೆಸರು ಘೋಷಣೆಯಾಗುತ್ತಿದ್ದಂತೆ ಪಾಲಿಕೆ ಪ್ರಾಂಗಣದಲ್ಲಿ ಅವರ ಬೆಂಬಲಿಗರು ಪಟಾಕಿ ಸಿಡಿಸಿ, ಗುಲಾಲು ಎರಚಿ ಸಂಭ್ರಮಿಸಿದರು. ಇಬ್ಬರಿಗೂ ಸಿಹಿ ತಿನ್ನಿಸುವ ಮೂಲಕ ಅಭಿನಂದಿಸಿದರು.ಪೂರ್ವ ಕ್ಷೇತ್ರಕ್ಕೆ ತಪ್ಪಿದ ಮೇಯರ್‌ಗಿರಿ: ಹಾಗೆ ನೋಡಿದರೆ ಈ ಅವಧಿಯಲ್ಲಿ ಮೂವರು ಮೇಯರ್ ಆಗಿದ್ದರು. ಈರೇಶ ಅಂಚಟಗೇರಿ ಧಾರವಾಡ ಗ್ರಾಮೀಣ, ವೀಣಾ ಬರದ್ವಾಡ ಸೆಂಟ್ರಲ್, ರಾಮಪ್ಪ ಬಡಿಗೇರ ಪಶ್ಚಿಮ ಕ್ಷೇತ್ರಕ್ಕೆ ಸೇರಿದವರು. ಈ ಸಲ ಪೂರ್ವ ಕ್ಷೇತ್ರಕ್ಕೆ ಕೊಡಿ ಎಂಬ ಬೇಡಿಕೆ ಇತ್ತು. ಈ ಹಿನ್ನೆಲೆಯಲ್ಲಿ ಪೂರ್ವ ಕ್ಷೇತ್ರದಿಂದ ಲಾಬಿಯೂ ಜೋರಾಗಿತ್ತು. ಮುಂದಿನ ಸಲದ ಮೇಯರ್‌ಗಿರಿ ಎಸ್ಸಿ ಮಹಿಳೆಗೆ ಮೀಸಲಾಗಿದೆ. ಆಗ ಪೂರ್ವ ಕ್ಷೇತ್ರಕ್ಕೆ ಕೊಡಬಹುದು. ಈಗ ಪಶ್ಚಿಮ ಕೊಡಿ ಎಂದು ಇಲ್ಲಿನ ಜನಪ್ರತಿನಿಧಿಗಳು ಒತ್ತಡ ಹೇರಿದ್ದರು. ಈ ಹಿನ್ನೆಲೆಯಲ್ಲಿ ಪಶ್ಚಿಮ ಕ್ಷೇತ್ರಕ್ಕೆ ಸೇರಿದ 19ನೆಯ ವಾರ್ಡ್‌ನ ಜ್ಯೋತಿ ಪಾಟೀಲ ಅವರಿಗೆ ಮೇಯರ್‌ಗಿರಿ ಒಲಿದು ಬಂತು. ಇನ್ನು ಮೇಯರ್‌ಗಿರಿ ತಪ್ಪಿದ ಹಿನ್ನೆಲೆಯಲ್ಲಿ ಆಕಾಂಕ್ಷಿಗಳಿಗೆ ಸ್ಥಾಯಿ ಸಮಿತಿ, ಸಭಾನಾಯಕ ಸ್ಥಾನಗಳನ್ನು ನೀಡಲು ಪಕ್ಷದ ಮುಖಂಡರು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇಬ್ಬರೂ ಪದವೀಧರರು: ಮೇಯರ್ ಜ್ಯೋತಿ ಪಾಟೀಲ ಎಂಬಿಎ ಪದವೀಧರೆ. ಉಪಮೇಯರ್ ಆಗಿರುವ ಸಂತೋಷ ಚವ್ಹಾಣ ಬಿಎಸ್ಸಿ ಪದವೀಧರ. ಹೀಗಾಗಿ ಈ ಸಲ ಮೇಯರ್- ಉಪಮೇಯರ್ ಇಬ್ಬರು ಪದವೀಧರರಾಗಿದ್ದಾರೆ.ಪಾಲಿಕೆಯ ಎಂಟನೆಯ ಮಹಿಳೆಯ ಮೇಯರ್ ಹುದ್ದೆ ಅಲಂಕರಿಸಿದವರು. ಇಷ್ಟೊಂದು ವಿದ್ಯಾಭ್ಯಾಸ ಮಾಡಿದ ಮಹಿಳಾ ಮೇಯರ್ ಆಗಿರುವುದು ಇದೇ ಮೊದಲು.