ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಬುಧವಾರ ಮುಂಜಾನೆಯಿಂದಲೇ ಶಿವನ ದೇವಾಲಯಗಳಲ್ಲಿ ದೇವರಿಗೆ ಜೇನುತುಪ್ಪ, ಎಳೆನೀರು, ಗಂಗಾಜಲ ಮತ್ತು ಬಿಲ್ವ ಪತ್ರೆಯನ್ನು, ಬಿಲ್ವ ಹಣ್ಣು, ದಾತುರ ಅರ್ಪಿಸಿ ಶಿವನನ್ನು ಪೂಜಿಸಿಲಾಯಿತು. ಭಕ್ತಾದಿಗಳು ಬೆಳಗ್ಗೆಯಿಂದ ಸಂಜೆವರೆವಿಗೂ ಸರತಿ ಸಾಲಿನಲ್ಲಿ ನಿಂತು ಹೂ, ಹಣ್ಣು-ಕಾಯಿ ಅರ್ಪಿಸಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದುಕೊಂಡರು.
ಅನೇಕ ದೇವಾಲಯಗಳಲ್ಲಿ ಹಾಲು, ಮೊಸರು, ಜೇನು, ತುಪ್ಪ, ಸಕ್ಕರೆ, ಗಂಗಾಜಲ ಸೇರಿದಂತೆ ವಿವಿಧ ಅಭಿಷೇಕಗಳನ್ನು ಅರ್ಚನೆಗಳನ್ನು ಭಕ್ತರ ಇಷ್ಟಾರ್ಥ ಸಿದ್ದಿಗೆ ದೇವರಲ್ಲಿ ಪ್ರಾರ್ಥಿನೆ ಸಲ್ಲಿಸಲಾಯಿತು.ಹಲವು ದೇವಾಲಯಗಳಲ್ಲಿ ಭಕ್ತರಿಗೆ ಹಣ್ಣು ಮತ್ತ ಹಣ್ಣಿನ ರಸವನ್ನು ಪ್ರಸಾದದ ರೂಪವಾಗಿ ನೀಡಲಾಯಿತು. ಶಿವಲಿಂಗವನ್ನು ಬಿಲ್ವಪತ್ರೆಗಳಿಂದ ಅಲಕಂರಿಸಲಾಗಿತ್ತು. ಚಂದನ ಮತ್ತು ವಿಭೂತಿ ಭಸ್ಮವನ್ನು ಅರ್ಪಿಸಿ ಅದನ್ನು ಭಕ್ತರಿಗೆ ಹಣೆಗೆ ಹಚ್ಚಿಕೊಳ್ಳಲು ನೀಡಲಾಯಿತು. ದೇವಾಲಯಕ್ಕೆ ತೆರಳಿದ ಭಕ್ತರು ನಮಃ ಶಿವಾಯ, ಓಂ ನಮಃ ಶಿವಾಯ ಎಂದು ಶಿವನನ್ನು ಜಪಿಸುತ್ತಾ ಪೂಜೆ ಸಲ್ಲಿಸಿ ತಮ್ಮ ಭಕ್ತಿ-ಭಾವ ಪ್ರದರ್ಶನ ಮಾಡಿದರು.
ಶಾಸಕ ಎಚ್.ಟಿ.ಮಂಜು, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಆರ್‌ಟಿಒ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್, ಮನ್ಮುಲ್ ನಿರ್ದೇಶಕರಾದ ಡಾಲು ರವಿ, ಎಂ.ಬಿ.ಹರೀಶ್, ಮಿತ್ರ ಫೌಂಡೇಷನ್ ಅಧ್ಯಕ್ಷ ವಿಜಯ್ ರಾಮೇಗೌಡ, ಸೇರಿದಂತೆ ವಿವಿಧ ಗಣ್ಯರು ಹಲವು ಶಿವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.