ಕನ್ನಡಪ್ರಭ ವಾರ್ತೆ ಬೆಂಗಳೂರು
ಯಶವಂತಪುರದಲ್ಲಿ ಕೆ-ರೈಡ್‌ನಿಂದ ನಡೆದ ‘ಕೌಶಲ್ಯ ಅಭಿವೃದ್ಧಿ ಮತ್ತು ಜೀವನೋಪಾಯ ಪುನರ್ ಸ್ಥಾಪನೆ’ ಕಾರ್ಯಕ್ರಮದಲ್ಲಿ ಕೆ-ರೈಡ್ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಸಿಂಗ್ ವಿಮೆ ಪತ್ರ ವಿತರಣೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಯೋಜನೆಯಿಂದ ಬಾಧಿತರಾಗುವ ಸಮುದಾಯಗಳಿಗೆ ನ್ಯಾಯಸಮ್ಮತ ಪರಿಹಾರ, ಸಾಮಾಜಿಕ ಭದ್ರತಾ ವ್ಯಾಪ್ತಿ ಮತ್ತು ಜೀವನೋಪಾಯ ಒದಗಿಸುವುದು ಸರ್ಕಾರದ ಉದ್ದೇಶ. ಜತೆಗೆ, ಬೆಂಗಳೂರಿಗರ ಹಿತದೃಷ್ಟಿಯಿಂದ ಯೋಜನೆಯನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದಾಗಿ ಅವರು ಭರವಸೆ ನೀಡಿದರು.ಯೋಜನೆಯ ತಯಾರಿ ಹಂತದಲ್ಲಿ ಪುನರ್ವಸತಿ ಕಾರ್ಯಯೋಜನೆ (ಆರ್‌ಎಪಿ) ಅಡಿಯಲ್ಲಿ ಸಮಗ್ರ ಜನಗಣತಿ ಮತ್ತು ಸಾಮಾಜಿಕ ಆರ್ಥಿಕ ಸಮೀಕ್ಷೆ ನಡೆಸಲಾಗಿದೆ. ಲಿಂಗರಾಜಪುರಂ ಮತ್ತು ಬಾಣಸವಾಡಿ ಪ್ರದೇಶಗಳಲ್ಲಿ ಕಾರಿಡಾರ್-2 ಮಾರ್ಗಸೂಚಿಯ 1,2 ವ್ಯಾಪ್ತಿಯಲ್ಲಿ 263 ಯೋಜನೆಯಿಂದ ಬಾಧಿತರಾಗುವ ವ್ಯಕ್ತಿಗಳನ್ನು ಗುರುತಿಸಲಾಗಿದೆ. ಇದರಲ್ಲಿ 100 ಅಧಿಸೂಚಿತ ಸ್ಲಂ ನಿವಾಸಿಗಳು ಮತ್ತು 163 ಅಕ್ರಮ ವಾಸಿಗಳು ಸೇರಿದ್ದಾರೆ. ಕರ್ನಾಟಕ ಸ್ಲಂ ಅಭಿವೃದ್ಧಿ ಮಂಡಳಿ ಸಹಕಾರದಲ್ಲಿ ಅರ್ಹರಿಗೆ ಆರ್ಥಿಕ ನೆರವು ಒದಗಿಸಲಾಗಿದೆ. ಅಗತ್ಯ ಸಹಾಯ ಪಡೆದ ಬಳಿಕ, ಅವರು ಸ್ವಯಂಪ್ರೇರಿತವಾಗಿ ಸ್ಥಳಾಂತರಗೊಂಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ ಸಂಸ್ಥೆ ಸಂಪನ್ಮೂಲ ವ್ಯಕ್ತಿಗಳು, ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿ ಸದಸ್ಯರು ಭಾಗವಹಿಸಿದ್ದರು.ಆರ್‌ಎಪಿ ಅಡಿಯಲ್ಲಿ ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿಯ ಸಂಯೋಜಕರು ಯೋಜನೆಯ ಕಾರ್ಮಿಕರಿಗೆ ಪ್ರಧಾನಮಂತ್ರಿ ಜನಧನ್ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಮತ್ತು ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಗಳಿಗೆ ಸಂಪರ್ಕಿಸಲಾಗಿದ್ದು, ಪ್ರತಿ ವ್ಯಕ್ತಿಗೆ ₹6 ಲಕ್ಷದವರೆಗೆ ವಿಮಾ ರಕ್ಷಣೆ ಒದಗಿಸಲಾಗಿದೆ ಎಂದು ಕೆ-ರೈಡ್ ತಿಳಿಸಿದೆ.