ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿರಿಯರಾದ ಕೆ.ಎಸ್. ಈಶ್ವರಪ್ಪನವರು ಕೇವಲ ರಾಜಕಾರಣವಲ್ಲದೆ, ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯ ಕ್ಷೇತ್ರವೂ ಸೇರಿ ಎಲ್ಲಾ ರಂಗಗಳಲ್ಲೂ ತಮ್ಮದೆ ಕೊಡುಗೆ ನೀಡಿರುವ ಹಿನ್ನೆಲೆಯಲ್ಲಿ ಎಲ್ಲರೂ ಸೇರಿ ಕೆ.ಎಸ್. ಈಶ್ವರಪ್ಪನವರ ಹುಟ್ಟು ಹಬ್ಬವನ್ನು ವಿನೋಬನಗರದ ಶುಭಮಂಗಳ ಕಲ್ಯಾಣ ಮಂಟಪದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಈಶ್ವರಪ್ಪ ನವರ ಹುಟ್ಟು ಹಬ್ಬದ ಅಂಗವಾಗಿ ಜೂ.10 ರಂದು ನಡೆಯುವ ಶತ ಚಂಡಿಕಾ ಯಾಗದ ಕುರಿತು ಶನೈಶ್ವರ ದೇವಸ್ಥಾನದ ಪ್ರಧಾನ ಆರ್ಚಕ ಸಂದೇಶ್ ಉಪಾಧ್ಯ ಅವರು ಮಾಹಿತಿ ನೀಡಿದರು. ಜೂ.10ರಂದು ಮಂಗಳವಾರ ಬೆಳಿಗ್ಗೆ ೮ ಗಂಟೆಯಿಂದ ಶುಭಮಂಗಳ ಸಮುದಾಯ ಭವನದಲ್ಲಿ ಶ್ರೀ ಲಲಿತಾ ಸಹಸ್ರನಾಮ ಪಾರಾಯಣ, ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ, ಸಹಸ್ರ ಚಂಡಿಕಾ ಯಾಗ, ಮಹಾರುದ್ರ ಹೋಮಗಳು ನಡೆಯಲಿವೆ. ಸಹಸ್ರ ಚಂಡಿಕಾ ಯಾಗದಲ್ಲಿ 100 ಪಾರಾಯಣ, ಸಾವಿರ ಲೀಟರ್ ಹಾಲಿನ ಅಭಿಷೇಕ, 35 ಕೆ.ಜಿ. ತುಪ್ಪ, 1 ಕ್ವಿಂಟಾಲ್ ಪರಮಾನ್ನ, 1 ಟನ್ ಹಲಸಿನ ಚಕ್ಕೆ ಬಳಕೆ ಮಾಡಲಾಗುವುದು. ಹಾಗೆಯೇ ಅತೀರುದ್ರ ಯಾಗವನ್ನು ೨೦೦ ಮಂದಿ ಪುರೋಹಿತರು ನಡೆಸಿಕೊಡಲಿದ್ದಾರೆ. ಇದಾದ ಬಳಿಕ ಬೆಳಗ್ಗೆ 10 ಗಂಟೆಗೆ ಪೂರ್ಣಾಹುತಿ ಇರುತ್ತದೆ. ಇದೇ ವೇಳೆ ೧೦೦೮ ಮಹಿಳೆಯರಿಗೆ ಬಾಗಿನ ಅರ್ಪಣೆ ಕಾರ್ಯಕ್ರಮವಿದೆ ಎಂದು ವಿವರಿಸಿದರು.ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ನಟರಾಜ್ ಭಾಗವತ್ ಮಾತನಾಡಿ, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ, ಕೂಡ್ಲಿ ಶ್ರೀ ಶೃಂಗೇರಿ ಶಂಕರ ಮಠದ ಶ್ರೀ ಅಭಿನವ ಶಂಕರ ಭಾರತಿ ಮಹಾಸ್ವಾಮೀಜಿ, ಚಿತ್ರದುರ್ಗದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಮಹಾಸ್ವಾಮೀಜಿ, ಹೊಸದುರ್ಗ ಕಾಗಿನೆಲೆ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಹಾಗೂ ಶಿವಮೊಗ್ಗದ ಆದಿಚುಂಚನಗಿರಿ ಮಠದ ಶ್ರೀ ಸಾಯಿನಾಥ ಸ್ವಾಮೀಜಿಗಳು ಈ ಧಾರ್ಮಿಕ ಸಭೆಯ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆಂದರು.
ಶ್ರೀಗಂಧ ಸಂಸ್ಥೆಯ ಪದಾಧಿಕಾರಿ ವಿನಯ್ ಮಾತನಾಡಿ,ಅದೇ ದಿನ ಸಂಜೆ 6 ಗಂಟೆಗೆ ಸ್ವಾಭಿಮಾನಿ ಕಾರ್ಯಕ್ರಮ ನಡೆಯಲಿದೆ.ಅಂದು ಸಂಜೆ 6 ಗಂಟೆಗೆ ಸ್ವಾಭಿಮಾನಿ ಭಾರತ ಎಂಬ ವಿಷಯವಾಗಿ ವಿಶೇಷ ದಿಕ್ಸೂಚಿ ಭಾಷಣ ಕಾರ್ಯಕ್ರಮವಿದ್ದು, ಖ್ಯಾತ ವಾಗ್ಮಿ ಹಾಗೂ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರು ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರ ಮರಿ ಮಗ ಹಾಗೂ ಕೇಸರಿ ಪತ್ರಿಕೆ ಸಂಪಾದಕ ಶೈಲೇಶ್ ತಿಲಕ್ ಆಗಮಿಸುವರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಸ್. ಈಶ್ವರಪ್ಪ ವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೂ ಪ್ರಹ್ಲಾದ ದೀಕ್ಷಿತ್, ಗುರುಗುಹ ನಾಗರಾಜ್ ಹಾಗೂ ಅರುಣ ಇವರ ತಂಡದವರಿಂದ ದೇಶಭಕ್ತಿ ಗೀತೆ ಗಾಯನ ಕಾರ್ಯಕ್ರಮ ಇರುತ್ತದೆ ಎಂದರು.
ಶ್ರೀಗಂಧ ಸಂಸ್ಥೆಯ ರಾಜು ಮಾತನಾಡಿ, ಜೂ.11ರಂದು ಬುಧವಾರ ಸಂಜೆ 6 ಗಂಟೆಗೆ 2024-25ನೇ ಸಾಲಿನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಸುಮಾರು 1500 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತಲಾ 1000 ರು. ದಂತೆ ವಿದ್ಯಾ ಪ್ರೋತ್ಸಾಹ ನಿಧಿ ನೀಡಿ ಸನ್ಮಾನಿಸಲಾಗುವುದು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಸ್. ಈಶ್ವರಪ್ಪನವರು ವಹಿಸಲಿದ್ದು, ದಿವ್ಯ ಸಾನ್ನಿಧ್ಯವನ್ನು ವಹಿಸಿ ಆಶೀರ್ವಚನ ನೀಡಲು ಮಹಾರಾಷ್ಟ್ರ ಕೊಲ್ಲಾಪುರದ ಸಿದ್ದಗಿರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಗಳು ಹಾಗೂ ಕವಲಗುಡ್ಡ ಗುರುಪೀಠದ ಶ್ರೀ ಅಮರೇಶ್ವರ ಮಹಾಸ್ವಾಮಿಗಳು ಆಗಮಿಸಲಿದ್ದಾರೆ. ಮೂಡಬಿದರೆಯ ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಡಾ. ಮೋಹನ ಆಳ್ವ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು. ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಶ್ರೀಗಂಧ ಸಂಸ್ಥೆಯ ಪದಾಧಿಕಾರಿಗಳೆಲ್ಲರೂ ಮನವಿ ಮಾಡಿದರು.
--------------------
- ಕೆ.ಈ. ಕಾಂತೇಶ್, ಶ್ರೀಗಂಧ ಸಂಸ್ಥೆಯ ಕಾರ್ಯದರ್ಶಿ.