ಕನ್ನಡಪ್ರಭ ವಾರ್ತೆ ಮಂಡ್ಯ
ಕಳೆದ ವರ್ಷ ಸಾಮಾಜಿಕ ಸೇವೆಯಲ್ಲಿ ಸಕ್ಕರೆ ನಾಡು ಲಯನ್ಸ್ ಕ್ಲಬ್‌ನ ಅಧ್ಯಕ್ಷರಾದ ಕೆ.ಎಸ್.ಮೋಹನ್ ಕಂಪಲಾಪುರ ನೇತೃತ್ವದಲ್ಲಿ ₹10 ಲಕ್ಷಕ್ಕೂ ಹೆಚ್ಚಿನ ಮೊತ್ತದ ಸೇವೆ ಮಾಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಮಲ್ಟಿಪಲ್ ಕೌನ್ಸಿಲ್ ಮಾಜಿ ಅಧ್ಯಕ್ಷ ಲಯನ್ ಡಾ.ನಾಗರಾಜು ವಿ.ಭೈರಿ ಮೆಚ್ಚುಗೆ ವ್ಯಕ್ತಪಡಿಸಿದರು.ಮಂಡ್ಯ ನಗರದಲ್ಲಿ ಶುಕ್ರವಾರ ನಡೆದ ಮಂಡ್ಯ ಸಕ್ಕರೆನಾಡು ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಶಿಕ್ಷಕರ, ಎಂಜಿನಿಯರ್ ಹಾಗೂ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೆ.ಎಸ್.ಮೋಹನ್ ಕಂಪಲಾಪುರ ನೇತೃತ್ವದಲ್ಲಿ ಉತ್ತಮ ಸೇವಾ ಚಟುವಟಿಕೆ ನಡೆಸಿದ ಕಾರಣ ಮತ್ತೊಮ್ಮೆ ಅಧ್ಯಕ್ಷರಾಗಿದ್ದಾರೆ. ಈ ವರ್ಷವೂ ಅಗತ್ಯದ ಜನರಿಗೆ ನೆರವಾಗಿರಿ ಎಂದು ಪ್ರಮಾಣವಚನ ಬೋಧಿಸಿದರು. ದೇಶ ಕಟ್ಟುವಲ್ಲಿ ಶಿಕ್ಷಕರು ಮತ್ತು ಎಂಜಿನಿಯರ್‌ಗಳ ಪಾತ್ರ ಅಮೂಲ್ಯವಾದುದು ಎಂದರು.
ಬಳಿಕ ಎಂ.ಎಂ.ಫೌಂಡೇಷನ್ ಅಧ್ಯಕ್ಷ ಮಹಾಲಿಂಗೇಗೌಡ ಮುದ್ದನಘಟ್ಟ ಮಾತನಾಡಿ, ಅಗತ್ಯವುಳ್ಳ ಜನರಿಗೆ ಸೇವೆ ಮಾಡಲು ನಾವು ಕಟಿಬದ್ಧರಾಗಿದ್ದು ಸಕ್ಕರೆನಾಡು ಲಯನ್ಸ್ ಕ್ಲಬ್ ಜತೆಗೆ ಎಂ.ಎಂ.ಫೌಂಡೇಶನ್ ಹೆಚ್ಚಿನ ಸೇವಾ ಕಾರ್ಯಕ್ರಮ ನಡೆಸಲಾಗುವುದು ಎಂದರು.ಬಳಿಕ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕೆ.ಎಸ್.ಮೋಹನ್ ಕಂಪಲಾಪುರ ಮಾತನಾಡಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯನ್ನು ಮಾದರಿ ಶಾಲೆ ನಿರ್ಮಾಣ ಮಾಡಲು ದತ್ತು ತೆಗೆದುಕೊಳ್ಳಲಾಗಿದೆ ಎಂದರು. ಶಿಕ್ಷಕರ, ಎಂಜಿನಿಯರ್ ಹಾಗೂ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕುರಿತು ಶಿಕ್ಷಕ ಕೆ.ಆರ್.ಶಶಿಧರ ಈಚಗೆರೆ ಮಾತನಾಡಿದರು.
ಇದೇ ವೇಳೆ ಆದರ್ಶ ಸರ್ ಎಂ.ವಿ ಎಂಜಿನಿಯರ್ ಪ್ರಶಸ್ತಿಯನ್ನು ಮೈಸೂರಿನ ಸಣ್ಣ ನೀರಾವರಿ ಇಲಾಖೆ ಸಹಾಯಕ ಅಭಿಯಂತರರಾದ ಶಿವಕುಮಾರ ನಾಯಕರಿಗೆ, ದ್ರೋಣಾಚಾರ್ಯ ಪ್ರಶಸ್ತಿಯನ್ನು ಮಂಡ್ಯ ಉತ್ತರವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಎಂ.ಎಸ್.ವಿಜಯಕುಮಾರ್ ಹಾಗೂ ಆದರ್ಶ ಶಿಕ್ಷಕ ಎಸ್ ರಾಧಾಕೃಷ್ಣನ್ ಪ್ರಶಸ್ತಿಯನ್ನು ಮುತ್ತೇಗೆರೆ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ತಜಮ್ಮುಲ್ ತನ್ವೀರ್ ಪಾಷಾ, ಚಿಕ್ಕಮಂಡ್ಯ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕ ಬಸವರಾಜು, ವಿ.ಸಿ.ಫಾರಂ ಪ್ರೌಢಶಾಲೆ ಸಹ ಶಿಕ್ಷಕಿ ಮಮತ ಹಾಗೂ ಬಿ.ಹೊಸೂರು ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ ಎನ್.ಪವಿತ್ರ ಅವರಿಗೆ ಪ್ರದಾನ ಮಾಡಲಾಯಿತು.ಕಾರ್ಯಕ್ರಮದಲ್ಲಿ ಕ್ಲಬ್ ಅಧ್ಯಕ್ಷ ಕೆ.ಎಸ್.ಮೋಹನ್ ಕಂಪಲಾಪುರ, ನಿರ್ದೇಶಕರಾದ ಕೆ.ಪ್ರಸನ್ನಕುಮಾರ್, ನಿವೃತ್ತ ಮುಖ್ಯ ಶಿಕ್ಷಕ ಶಿವರಾಮು, ಎಚ್.ಚಂದ್ರಶೇಖರ್, ಬಿ.ಎನ್.ಚಂದ್ರಶೇಖರ್, ಎಸ್.ನಂದೀಶ್, ಸಿದ್ದರಾಜು, ಸಿದ್ದೇಗೌಡ, ಉಮೇಶ್ ಸೇರಿದಂತೆ ಹಲವರು ಇದ್ದರು.