ಕೆ. ಅಪ್ಪಣ್ಣಾಚಾರ್ಯರಿಗೆ ಸಂಯುತಾ-ಪುರಂದರ ಪ್ರಶಸ್ತಿ

KannadaprabhaNewsNetwork |  
Published : Dec 18, 2024, 12:46 AM IST
454456 | Kannada Prabha

ಸಾರಾಂಶ

ಗುರುಜಗನ್ನಾಥದಾಸರ ಮರಿಮೊಮ್ಮಗ ಕೋಶಿಗಿ ಅಪ್ಪಣ್ಣಾಚಾರ್ಯರು ತಮ್ಮ ಜೀವನವನ್ನೇ ದಾಸ ಸಾಹಿತ್ಯದ ಅನುಸಂಧಾನದಲ್ಲಿಯೇ ಕಳೆದವರು. ತಿರುಪತಿ ಎಸ್.ವಿ. ಯುನಿವರ್ಸಿಸಿಯಲ್ಲಿ ಸಾಹಿತ್ಯ ಶಿರೋಮಣಿಯಾಗಿ ಹೊರ ಹೊಮ್ಮಿದವರು.

ಹುಬ್ಬಳ್ಳಿ:

ಸಂಯುತಾ ಪ್ರತಿಷ್ಠಾನದಿಂದ ಕನಕ-ಪುರಂದರೋತ್ಸವದ ನಿಮಿತ್ತ ನೀಡಲಾಗುವ ರಾಜ್ಯಮಟ್ಟದ "ಸಂಯುತಾ ಪುರಂದರ " ಪ್ರಶಸ್ತಿಗೆ ತಿರುಮಲ ತಿರುಪತಿ ದಾಸಸಾಹಿತ್ಯ ಪ್ರೊಜೆಕ್ಟ್‌ನ ವಿಶ್ರಾಂತ ಯೋಜನಾಧಿಕಾರಿ ಕೆ. ಅಪ್ಪಣ್ಣಾಚಾರ್ಯ ಭಾಜನರಾಗಿದ್ದಾರೆ.

ಎ.ಸಿ. ಗೋಪಾಲ ಗೌರವಾಧ್ಯಕ್ಷತೆ ಹಾಗೂ ಪಿ.ಎಸ್. ಪರ್ವತಿ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ ನಡೆದ ಸಭೆಯಲ್ಲಿ ಇವರ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ₹ 10 ಸಾವಿರ ನಗದು ಹಾಗೂ ಸಮ್ಮಾನ ಪತ್ರ ಮತ್ತು ಫಲತಾಂಬೂಲ ಗೌರವ ಹೊಂದಿದೆ. ಜ. 30ರಂದು ಇಲ್ಲಿನ ಭವಾನಿನಗರ ನಂಜನಗೂಡು ರಾಯರಮಠದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಪ್ರತಿವರ್ಷ ಒಂದು ದಿನ ಪುರಂದರೋತ್ಸವ ಆಚರಿಸಲಾಗುತ್ತದೆ. ಆದರೆ ಈ ವರ್ಷ "ದಾಸ ಸಪ್ತಾಹ " ಆಯೋಜಿಸಲಾಗುತ್ತಿದೆ. ಅಮಾವಾಸ್ಯೆ ಪೂರ್ವದ ಏಳು ದಿನಗಳಿಂದ ಮಹಿಳಾ ಮಂಡಳಗಳಿಂದ ಭಜನೆ, ವಿದ್ವಾಂಸರಿಂದ ದಾಸ ಸಾಹಿತ್ಯದ ಕುರಿತಂತೆ ಪ್ರವಚನ, ಇತರ ಕಾರ್ಯಕ್ರಮ ನಡೆಸುವುದಾಗಿ ಸಭೆ ತೀರ್ಮಾನ ಕೈಗೊಂಡಿತು.

ರಾಯರ ಮಠದ ವ್ಯವಸ್ಥಾಪಕ ವೇಣು ಗೋಪಾಲಾಚಾರ್ಯ, ಎಕೆಬಿಎಂಎಸ್‌ನ ಧಾರವಾಡ ಜಿಲ್ಲಾ ಸಂಚಾಲಕ, ಬಿಂದುಮಾಧವ ಪುರೋಹಿತ, ಮನೋಹರ ಪರ್ವತಿ, ವಿ.ಎಸ್. ಕುಲಕರ್ಣಿ, ಗುರುರಾಜ ಕೌಜಲಗಿ, ಅರುಣ ಬಂಡಿವಾಡ, ರಾಜೇಂದ್ರ ಬಿಜಾಪುರ, ಸಂಯುತಾ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಜನಮೇಜಯ ಉಮ್ಮರ್ಜಿ, ಖಜಾಂಚಿ ಸುಶೀಲೇಂದ್ರ ಕುಂದರಗಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.ಅಪ್ಪಣ್ಣಾಚಾರ್ಯರ ಕಿರು ಪರಿಚಯ

ಗುರುಜಗನ್ನಾಥದಾಸರ ಮರಿಮೊಮ್ಮಗ ಕೋಶಿಗಿ ಅಪ್ಪಣ್ಣಾಚಾರ್ಯರು ತಮ್ಮ ಜೀವನವನ್ನೇ ದಾಸ ಸಾಹಿತ್ಯದ ಅನುಸಂಧಾನದಲ್ಲಿಯೇ ಕಳೆದವರು.

ತಿರುಪತಿ ಎಸ್.ವಿ. ಯುನಿವರ್ಸಿಸಿಯಲ್ಲಿ ಸಾಹಿತ್ಯ ಶಿರೋಮಣಿಯಾಗಿ ಹೊರ ಹೊಮ್ಮಿದವರು. 1970ರಿಂದ 1979ರ ವರೆಗೆ ಉಪನ್ಯಾಸಕರಾಗಿದ್ದ ಅಪ್ಪಣ್ಣಾಚಾರ್ಯ, ನಂತರ ತಿರುಪತಿ ತಿರುಮಲ ದೇವಸ್ಥಾನ, ತಿರುಪತಿಯಿಂದ ದಾಸಸಾಹಿತ್ಯ ಪ್ರಾಜೆಕ್ಟ್‌ ವಿಶೇಷಾಧಿಕಾರಿಗಳಾಗಿದ್ದರು. ಸ್ವತಃ ಬರಹಗಾರರು ಆದ ಅಪ್ಪಣ್ಣಾಚಾರ್ಯರು ಗುರುಜಗನ್ನಾಥದಾಸ ಸೇವಾ ಸಮಿತಿಯಿಂದ ಹರಿಕಥಾಮೃತಸಾರವು ಮೋಕ್ಷಪ್ರದ ಗುರುಜಗನ್ನಾಥದಾಸರ ಕೃತಿ ರತ್ನಮಾಲಾ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಪುಸ್ತಕ ಪ್ರಕಟಿಸಿದ್ದಾರೆ. ದಾಸ ಸಾಹಿತ್ಯ ಪ್ರೊಜೆಕ್ಟ್‌ನಡಿಯಲ್ಲಿ ಅತಿ ಮೌಲಿಕ ಕೃತಿಗಳನ್ನು ಪ್ರಕಟಿಸಿದ ಕೀರ್ತಿ ಇವರದು. ಇದಲ್ಲದೇ ದಾಸಸಾಹಿತ್ಯವನ್ನು ಆದರಿಸಿ ನಿರ್ಮಿಸಿದ ತೈಲವರ್ಣ ಚಿತ್ರಗಳಿಗೆ ರೂಪಕಲ್ಪನೆ ನೀಡಿದವರಲ್ಲಿ ಇವರೇ ಮೊದಲಿಗರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ