ಎಂ.ಅಫ್ರೋಜ್ ಖಾನ್
ಸಾಮಾನ್ಯವಾಗಿ ಒಂದು ವರ್ಷ ಅಧಿಕಾರ ಪೂರೈಸಿದರೆ ಗುಂಡು ತುಂಡಿನ ಪಾರ್ಟಿ ಮಾಡಿ ಸಂಭ್ರಮಿಸುವ ಜನಪ್ರತಿನಿಧಿಗಳೇ ಹೆಚ್ಚಾಗಿರುತ್ತಾರೆ. ಆದರೆ, ಇದಕ್ಕೆ ಭಿನ್ನವಾಗಿರುವ ಇಲ್ಲಿನ ನಗರಸಭೆ ಅಧ್ಯಕ್ಷರಾದ ಕೆ.ಶೇಷಾದ್ರಿ (ಶಶಿ)ರವರು ಉಳಿದ ಅಧಿಕಾರವಧಿಯಲ್ಲಿ ಮಾಡಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತು ಸಲಹೆ ಮತ್ತು ಮಾರ್ಗದರ್ಶನ ಪಡೆಯಲು ಮುಂದಾಗಿದ್ದಾರೆ.
ಜಿಲ್ಲಾ ಕೇಂದ್ರ ರಾಮನಗರ ನಗರಸಭೆ ಅಧ್ಯಕ್ಷರಾಗಿ ಕೆ.ಶೇಷಾದ್ರಿ (ಶಶಿ)ರವರು ಒಂದು ವರ್ಷ ಅಧಿಕಾರ ಪೂರ್ಣಗೊಳಿಸಿದ್ದಾರೆ. ಈ ಘಳಿಗೆಯನ್ನು ಸ್ಮರಣೀಯವಾಗಿಸಲು ಜ.21ರಂದು ಸಾರ್ಥಕ ಸೇವೆಯ ಸಮರ್ಪಣೆ, ಕೃತಜ್ಞತಾ ಹಾಗೂ ಗೌರವಾರ್ಪಣೆ ಸಮಾರಂಭ ಆಯೋಜಿಸಿದ್ದು, ಇದರಲ್ಲಿ ಭಾಗಿಯಾಗಲಿರುವ ಸಾಹಿತಿಗಳು, ಸಾಮಾಜಿಕ ಹೋರಾಟಗಾರರು ಹಾಗೂ ಹಿರಿಯ ರಾಜಕಾರಣಿಗಳು ಮಾರ್ಗದರ್ಶನ ಮಾಡಲಿದ್ದಾರೆ.ನಗರಸಭೆಗೆ ನಾಲ್ಕು ಬಾರಿ ಸದಸ್ಯರಾಗಿ ಆಯ್ಕೆಯಾದ ಅವರು, ಎರಡು ಬಾರಿ ಅಧ್ಯಕ್ಷರಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ನಗರದ ಅಭಿವೃದ್ಧಿ ಮಾತ್ರವಲ್ಲದೆ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್ ಗಳ ಪರೀಕ್ಷೆಗಳಿಗೆ ತರಬೇತಿ, 3ಡಿ ರೂಪದಲ್ಲಿ ಸಂವಿಧಾನ ಪೀಠಿಕೆ ಅನಾವರಣ, ಪೌರ ಸನ್ಮಾನದಂತಹ ಕಾರ್ಯಕ್ರಮಗಳ ಮೂಲಕ ರಾಮನಗರ ನಗರಸಭೆ ಹಲವು ಪ್ರಥಮಗಳಿಗೆ ಸಾಕ್ಷಿಯಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಮಾದರಿ ನಗರ ನಿರ್ಮಾಣಕ್ಕೆ ಹೊಸ ಪರಿಕಲ್ಪನೆ:ಒಂದು ವರ್ಷದ ಅವಧಿ ಮತ್ತು ಉಳಿದ ಅಧಿಕಾರಾವಧಿಯಲ್ಲಿ ಮಾಡಲಿರುವ ಕಾರ್ಯ ಯೋಜನೆಗಳ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ, ನಗರದ ಸುತ್ತಲೂ ರಿಂಗ್ (ಹೊರ ವರ್ತುಲ) ರಸ್ತೆ ನಿರ್ಮಾಣ ಮಾಡಬೇಕಿದೆ. ಅಲ್ಲದೆ, ನಗರ ವೇಗವಾಗಿ ಬೆಳೆಯುತ್ತಿದ್ದು, ಅದಕ್ಕೆ ತಕ್ಕಂತೆ ನಗರಸಭೆಯನ್ನು ಗ್ರೇಡ್ -2 ಹಂತದಿಂದ ಗ್ರೇಡ್ -1 ಆಗಿ ಮೇಲ್ದರ್ಜೆಗೇರಿಸಿ ಪರಿಮಿತಿಯನ್ನು ವಿಸ್ತರಿಸುವುದು. ರಸ್ತೆಗಳ ಬದಿಯಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ನಗರವನ್ನು ಹಸಿರೀಕರಣ ಮಾಡಬೇಕಿದೆ. ಅಲ್ಲದೆ, ಸ್ವಚ್ಛ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಇಂಧೋರ್ ಗೆ ಅಧ್ಯಯನ ಪ್ರವಾಸ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಸಾಹಿತ್ಯ- ಸಾಂಸ್ಕೃತಿಕ ಸಮಾರಂಭಗಳ ಆಯೋಜನೆಗೆ ಸೂಕ್ತ ಭವನ ಇಲ್ಲ. ಆದ್ದರಿಂದ ಜಿಲ್ಲಾ ಕೇಂದ್ರದಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣ ಅತ್ಯಗತ್ಯವಿದೆ. ನಗರದ ಜೀವನಾಡಿಯಾದ ಅರ್ಕಾವತಿ ನದಿ ಶುದ್ಧೀಕರಣವಾಗಬೇಕು. ನಗರ ವ್ಯಾಪ್ತಿಯಲ್ಲಿರುವ ಕೆರೆಗಳಿಗೆ ಕಾಯಕಲ್ಪ ನೀಡುವ ಜೊತೆಗೆ ಸರ್ವೀಸ್ ರಸ್ತೆಗಳ ದುರಸ್ತಿ ಮಾಡಬೇಕಿದೆ. ನಗರದ ರಸ್ತೆಗಳಲ್ಲಿ ವಾಹನಗಳಿಗೆ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ, ಪಾದಚಾರಿ ಮಾರ್ಗ ನಿರ್ಮಾಣ ಹಾಗೂ ಇ - ಖಾತಾ ಅಭಿಯಾನ ಮುಂದುವರಿಸಿ ನಾಗರಿಕರ ಸ್ಥಿರಾಸ್ತಿಗೆ ಕಾನೂನಿನ ರಕ್ಷೆ ಒದಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವುದಾಗಿ ಹೇಳಿದರು.ಹೊಸ ಮೈಲುಗಲ್ಲು ಸ್ಥಾಪನೆ:
ನಗರದ ನಾಗರಿಕರಿಗೆ ಪರಿಶುದ್ಧ ನೀರು, ಉತ್ತಮ ರಸ್ತೆ, ಪ್ಲಾಸ್ಟಿಕ್ ಮುಕ್ತ ನಗರ ನಿರ್ಮಾಣ, ಬಡಾವಣೆಗಳ ಸ್ವಚ್ಛತೆ , ಕೆರೆಗಳ ಅಭಿವೃದ್ಧಿ, ಉದ್ಯಾನವನ ನಿರ್ಮಾಣ, ಖಾಲಿ ನಿವೇಶನಗಳಲ್ಲಿ ಬೆಳೆದ ಗಿಡಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಲಾಗಿದೆ. ಇದೀಗ ಬ್ಲ್ಯಾಕ್ ಸ್ಪಾಟ್ ಗಳಲ್ಲಿ ನಾಗರಿಕರು ತ್ಯಾಜ್ಯ ವಿಲೇವಾರಿ ಮಾಡುವುದಕ್ಕೆ ಕಡಿವಾಣ ಹಾಕಲು ನಗರಸಭೆ ವೇಸ್ಟ್ ಟು ಆರ್ಟ್, ವೇಸ್ಟ್ ಟು ವಂಡರ್ ಎಂಬ ವಿನೂತನ ಕಾರ್ಯಕ್ಕೂ ಮುಂದಾಗಿದ್ದೇವೆ.ನಗರದಲ್ಲಿ 100 ಕಿಮೀ.ಗೂ ಹೆಚ್ಚು ಉದ್ದದ ರಸ್ತೆ ನಿರ್ಮಾಣದ ಜೊತೆಗೆ ಹದಗೆಟ್ಟ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗಿದೆ. ಮುಖ್ಯರಸ್ತೆಗಳನ್ನು ಧೂಳು ಮುಕ್ತಗೊಳಿಸಲು ನೀರು ಸಿಂಪಡಿಸುವುದು, ಎಲ್ಲೆಂದರಲ್ಲಿ ಕಸ ಎಸೆಯುವವರ ಮೇಲೆ ನಿಗಾ ಇಡಲು ಸಿಸಿ ಕ್ಯಾಮೆರಾ, ಕಮ್ಯುನಿಟಿ ಮೊಬಿಲೈಸರ್ ಗಳ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಬೀದಿ ಬದಿ ವ್ಯಾಪಾರಿಗಳಿಗೆ ಛತ್ರಿ, ವೃತ್ತಿ ನಿರತ ಸವಿತಾ ಸಮಾಜ ಮತ್ತು ಮಡಿವಾಳ ಸಮುದಾಯಕ್ಕೆ ಟೂಲ್ ಕಿಟ್ ನೀಡಲಾಗಿದೆ. ಪೌರ ಕಾರ್ಮಿಕರ ಮನೆ ದುರಸ್ತಿಗೆ ಸಹಾಯಧನ, ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ ಸೇರಿ ಹಲವು ಸೌಲಭ್ಯ ವಿತರಿಸಲಾಗಿದೆ. ಮನೆ ಮನೆಗೆ ಇ - ಖಾತಾ ಅಭಿಯಾನ ಯಶಸ್ವಿಯಾಗಿ ಮುಂದುವರಿದಿದೆ. ನಗರಸಭೆ ಆವರಣದಲ್ಲಿ 3ಡಿ ರೂಪದಲ್ಲಿ ಸಂವಿಧಾನದ ಪೀಠಿಕೆ ಅನಾವರಣ ಮಾಡಿದ್ದೇವೆ. ಕನ್ನಡ ರಾಜ್ಯೋತ್ಸವ ಪ್ರಯುಕ್ತ ರೇಷ್ಮೆನಾಡ ಕನ್ನಡ ಹಬ್ಬದಲ್ಲಿ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಅವರಿಗೆ ನಾಗರಿಕ ಸನ್ಮಾನ ಹಾಗೂ 17 ಮಂದಿ ಸಾಧಕರಿಗೆ ಶ್ರೀ ಕೆಂಗಲ್ ಹನುಮಂತಯ್ಯ ಪ್ರಶಸ್ತಿ ನೀಡಿ ಗೌರವಿಸಿರುವುದು ಐತಿಹಾಸಿಕ ದಾಖಲೆಯಾಗಿದೆ. ಇದನ್ನು ಮುಂದುವರಿಸಿಕೊಂಡು ಹೋಗಲು ನಿರ್ಧರಿಸಲಾಗಿದೆ ಎಂದರು.ಯುವಜನರಿಗೆ ವೃತ್ತಿಪರ ಶಿಕ್ಷಣಕ್ಕೆ ನೆರವಾಗಲು ವೃತ್ತಿಪರ ಕೋರ್ಸ್ ಗಳ ಪರೀಕ್ಷೆಗಳಾದ ಸಿಇಟಿ, ಜೆಇಇ, ನೀಟ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿ ನೀಡಲಾಗಿದೆ. ಕೋಮು ಸಾಮರಸ್ಯವನ್ನು ಮತ್ತಷ್ಟು ಬೆಸೆದು ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಶ್ರೀ ಚಾಮುಂಡೇಶ್ವರಿ ಕರಗ ಮಹೋತ್ಸವ ಆಯೋಜನೆ ಮಾಡಿದ್ದೇವೆ. ನಾಗರಿಕರಿಗೆ ಮೂಲ ಸೌಕರ್ಯ ಕಲ್ಪಿಸುವುದು ಸೇರಿದಂತೆ ಹಲವು ವಿಷಯಗಳಲ್ಲಿ ಮೈಲುಗಲ್ಲು ಸ್ಥಾಪಿಸಿದ್ದೇವೆ ಎಂದು ಕೆ.ಶೇಷಾದ್ರಿ ಸಾರ್ಥಕ ಭಾವ ವ್ಯಕ್ತಪಡಿಸಿದರು.
-----ಕಳೆದೊಂದು ವರ್ಷದಲ್ಲಿ ನಗರಸಭೆಯ ಬಜೆಟ್ ನಲ್ಲಿ ಘೋಷಣೆ ಮಾಡಿದ್ದ ಕಾರ್ಯಕ್ರಮಗಳಲ್ಲಿ ಶೇಕಡ 70ರಷ್ಟನ್ನು ಕಾರ್ಯಗತಗೊಳಿಸಿದ್ದೇವೆ. ಇದಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಂಸದ ಡಿ.ಕೆ.ಸುರೇಶ್ , ಶಾಸಕ ಇಕ್ಬಾಲ್ ಹುಸೇನ್ , ನಗರದ ನಾಗರಿಕರು, ನಗರಸಭಾ ಸದಸ್ಯರು ಹಾಗೂ ಅಧಿಕಾರಿ ವರ್ಗ ಕಾರಣ. ಇದೀಗ ಮಾದರಿ ನಗರವಾಗಿ ರೂಪಿಸುವ ಕನಸಿನೊಂದಿಗೆ ಹೊಸ ಹೆಜ್ಜೆ ಇಡುತ್ತಿದ್ದೇವೆ.
- ಕೆ.ಶೇಷಾದ್ರಿ (ಶಶಿ), ಅಧ್ಯಕ್ಷರು, ನಗರಸಭೆ , ರಾಮನಗರ.-----
ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿರವರು ಕ್ರಿಯಾಶೀಲವಾಗಿ ಕೆಲಸ ಮಾಡುವ ಮೂಲಕ ರಾಮನಗರ ನಗರಸಭೆಯನ್ನು ರಾಜ್ಯದಲ್ಲಿಯೇ ಮಾದರಿಯನ್ನಾಗಿ ಮಾಡಿದ್ದಾರೆ. ನಗರದ ಅಭಿವೃದ್ಧಿ ಮಾತ್ರವಲ್ಲದೆ ನಾಗರಿಕರಿಗೆ ಮೂಲಸೌಲಭ್ಯ ಕಲ್ಪಿಸುವ ಜೊತೆಗೆ ಎಲ್ಲ ಸಮುದಾಯದ ಜನರಿಗೂ ಹಲವು ಸವಲತ್ತುಗಳು ತಲುಪುವಂತೆ ಮಾಡಿರುವ ಕಾರ್ಯ ಶ್ಲಾಘನೀಯ.- ಪಿ.ನಾಗರಾಜು, ನಿರ್ದೇಶಕರು, ಕೆಎಂಎಫ್ .