ಕಬಡ್ಡಿ ಕ್ರೀಡಾಪಟುಗಳು ಭಾರತದ ಸಾಂಸ್ಕೃತಿಕ ರಾಯಭಾರಿಗಳಿದ್ದಂತೆ: ಸಚಿವ ಮಧು ಬಂಗಾರಪ್ಪ

KannadaprabhaNewsNetwork | Published : Jan 25, 2024 2:03 AM

ಸಾರಾಂಶ

ಕಬಡ್ಡಿ ಒಂದು ಸಾಂಸ್ಕೃತಿಕ ಕ್ರೀಡೆ ಇದ್ದಂತೆ. ಇಂತಹ ಕ್ರೀಡೆಯನ್ನು ಪ್ರೀತಿಸುವ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. 8 ವರ್ಷಗಳ ನಂತರ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿ ನಮ್ಮ ರಾಜ್ಯದಲ್ಲಿ ಆಯೋಜಿಸಲು ಸಾಧ್ಯವಾಗಿರುವುದು ಅತ್ಯಂತ ಸಂತಸ ತಂದಿದೆ. ಶಿವಮೊಗ್ಗದಲ್ಲಿ ಜ.29ರಂದು ರಾಷ್ಟ್ರ ಮಟ್ಟದ ವಾಲಿಬಲ್ ಪಂದ್ಯಾವಳಿ ನಡೆಯಲಿದೆ. ಈ ಮೂಲಕ ಎರಡು ರಾಷ್ಟ್ರೀಯ ಕ್ರೀಡೆಗಳನ್ನು ರಾಜ್ಯದಲ್ಲಿ ಆಯೋಜಿಸಿರುವುದು ಸಾಕ್ಷಿಯಾಗಲಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ದೇಶಿಯ ಕ್ರೀಡೆ ಕಬಡ್ಡಿ ಆಟದಲ್ಲಿ ತೊಡಗಿರುವ ಕ್ರೀಡಾಪಟುಗಳು ಭಾರತದ ಸಾಂಸ್ಕೃತಿಕ ರಾಯಭಾರಿಗಳಿದ್ದಂತೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.

ತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಬಿಜಿಎಸ್ ಕ್ರೀಡಾಂಗಣದಲ್ಲಿ ರಾಜ್ಯ ಸರ್ಕಾರ ಹಾಗೂ ಶಾಲಾ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ಸಹಭಾಗಿತ್ವದಲ್ಲಿ 4 ದಿನಗಳ ಕಾಲ ನಡೆಯುವ ಸ್ಕೂಲ್‌ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ 67ನೇ ರಾಷ್ಟ್ರಮಟ್ಟದ 19 ವರ್ಷದೊಳಗಿನ ಬಾಲಕ- ಬಾಲಕಿಯರ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.

ಕಬಡ್ಡಿ ಒಂದು ಸಾಂಸ್ಕೃತಿಕ ಕ್ರೀಡೆ ಇದ್ದಂತೆ. ಇಂತಹ ಕ್ರೀಡೆಯನ್ನು ಪ್ರೀತಿಸುವ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. 8 ವರ್ಷಗಳ ನಂತರ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿ ನಮ್ಮ ರಾಜ್ಯದಲ್ಲಿ ಆಯೋಜಿಸಲು ಸಾಧ್ಯವಾಗಿರುವುದು ಅತ್ಯಂತ ಸಂತಸ ತಂದಿದೆ ಎಂದರು.

ಶಿವಮೊಗ್ಗದಲ್ಲಿ ಜ.29ರಂದು ರಾಷ್ಟ್ರ ಮಟ್ಟದ ವಾಲಿಬಲ್ ಪಂದ್ಯಾವಳಿ ನಡೆಯಲಿದೆ. ಈ ಮೂಲಕ ಎರಡು ರಾಷ್ಟ್ರೀಯ ಕ್ರೀಡೆಗಳನ್ನು ರಾಜ್ಯದಲ್ಲಿ ಆಯೋಜಿಸಿರುವುದು ಸಾಕ್ಷಿಯಾಗಲಿದೆ ಎಂದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಕೇವಲ ಆಧ್ಯಾತ್ಮಿಕ ಕೇಂದ್ರಕ್ಕಷ್ಟೇ ಸೀಮಿತವಾಗದೆ ಅನ್ನ, ಅಕ್ಷರ, ಆರೋಗ್ಯ ದಾಸೋಹದ ಜೊತೆಗೆ ಒಂದು ಚಿಕ್ಕ ಸರ್ಕಾರದ ರೀತಿಯಲ್ಲಿ ಸರ್ಕಾರದ ಎಲ್ಲ ಕಾರ್ಯಕ್ರಗಳಿಗೆ ಸಹಕಾರ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಶ್ರೀಮಠದ ಕಾರ್ಯಕ್ಕೆ ನಾನು ಆಭಾರಿಯಾಗಿದ್ದೇನೆ ಎಂದರು.

ಮಕ್ಕಳು ಚಿಕ್ಕವಯಸ್ಸಿನಲ್ಲಿಯೇ ಎಲ್ಲ ಕ್ರೀಡೆಗಳಲ್ಲೂ ಭಾಗವಹಿಸಬೇಕು. ದೇಶಿ ಕ್ರೀಡೆ ಕಬಡ್ಡಿಯಲ್ಲಿ ಭಾಗವಹಿಸಿ ದೊಡ್ಡ ಕ್ರೀಡಾಪಟುಗಳಾಗಿ ರಾಜ್ಯ ಹಾಗೂ ದೇಶದ ಕೀರ್ತಿ ಹೆಚ್ಚಿಸಬೇಕು ಎಂದರು.

ಬೆಂಗಳೂರಿನ ಶಾಲಾ ಶಿಕ್ಷಣ ಇಲಾಖೆಯ ಪದವಿ ಪೂರ್ವ ವಿಭಾಗದ ನಿರ್ದೇಶಕಿ ಸಿಂಧು ಬಿ.ರೂಪೇಶ್ ಮತ್ತು ಕ್ರೀಡಾ ವಿಭಾಗದ ಸಹಾಯಕ ನಿರ್ದೇಶಕ ಡಾ.ಗುಬ್ಬಿಗೂಡು ರಮೇಶ್ ಮಾತನಾಡಿದರು.

ಇದಕ್ಕೂ ಮುನ್ನ ಕ್ಷೇತ್ರದ ವಿದ್ಯಾರ್ಥಿಗಳ ವೀರಗಾಸೆ ಕುಣಿತ ಮತ್ತು ಪೂರ್ಣಕುಂಭ ಸ್ವಾಗತದೊಂದಿಗೆ ನಿರ್ಮಲಾನಂದನಾಥ ಶ್ರೀಗಳು, ಪ್ರಸನ್ನನಾಥ ಸ್ವಾಮೀಜಿ ಮತ್ತು ಸಚಿವ ಮಧು ಬಂಗಾರಪ್ಪ ಅವರನ್ನು ಕ್ರೀಡಾಂಗಣಕ್ಕೆ ಬರಮಾಡಿಕೊಳ್ಳಲಾಯಿತು. ನಂತರ ತೆರೆದ ವಾಹನದಲ್ಲಿ ಸಂಚರಿಸಿದ ಶ್ರೀಗಳು ಮತ್ತು ಗಣ್ಯರು ಕ್ರೀಡಾಪಟುಗಳಿಂದ ಗೌರವ ವಂದನೆ ಸ್ವೀಕರಿಸಿದರು.

ವೇದಿಕೆಯಲ್ಲಿ ಕ್ರೀಡಾಪಟುಗಳಿಂದ ಕ್ರೀಡಾ ಜ್ಯೋತಿ ಸ್ವೀಕರಿಸಿದ ಸಚಿವ ಮಧು ಬಂಗಾರಪ್ಪ ಬಲೂನ್ ಹಾರಿಬಿಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು. ನಂತರ ಕರ್ನಾಟಕ - ಮಹಾರಾಷ್ಟ್ರ ಬಾಲಕರ ತಂಡ, ಗುಜರಾತ್ - ತೆಲಂಗಾಣ ಬಾಲಕಿಯರ ತಂಡದಿಂದ ಪಂದ್ಯ ಆರಂಭಗೊಂಡಿತು.

ಸಮಾರಂಭದಲ್ಲಿ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಆಡಳಿತ ವಿಭಾಗದ ಉಪನಿರ್ದೇಶಕ ಶಿವರಾಮೇಗೌಡ, ಪದವಿ ಪೂರ್ವ ವಿಭಾಗದ ಉಪನಿರ್ದೇಶಕ ಸಿ.ಚಲುವಯ್ಯ, ಹಿರಿಯ ಕಬಡ್ಡಿ ಕ್ರೀಡಾಪಟು ಪಂಕಜ್‌ಕುಮಾರ್, ಡಿವೈಎಸ್ಪಿ ಲಕ್ಷ್ಮೀನಾರಾಯಣಪ್ರಸಾದ್, ಸಿಪಿಐ ನಿರಂಜನ್, ಬಿಇಒ ಸುರೇಶ್, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮು ಸೇರಿದಂತೆ ಹಲವರು ಇದ್ದರು.

680ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗಿ

ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಬಿಹಾರ್, ಚಂಡೀಘಡ್, ಛತ್ತೀಸ್‌ಘಡ, ದೆಹಲಿ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ, ಜಾರ್ಕಂಡ್, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಸ್ಸಾ, ಪುದುಚೇರಿ, ಪಂಜಾಬ್, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ, ಉತ್ತರಾಖಂಡ್, ಪಶ್ಚಿಮಬಂಗಾಳ ಸೇರಿದಂತೆ ಒಟ್ಟು 29 ರಾಜ್ಯಗಳಿಂದ 29 ಬಾಲಕರ ತಂಡ ಮತ್ತು 28 ಬಾಲಕಿಯರ ತಂಡಗಳಿಂದ ಒಟ್ಟು 680ಕ್ಕೂ ಹೆಚ್ಚು ಕಬ್ಬಡಿ ಆಟಗಾರರು ಭಾಗವಹಿಸಿದ್ದರು. 200ಕ್ಕೂ ಹೆಚ್ಚು ಕ್ರೀಡಾಧಿಕಾರಿಗಳು ಮತ್ತು ಕ್ರೀಡಾ ವ್ಯವಸ್ಥಾಪಕರು ಪಂದ್ಯಾವಳಿಯ ಮೇಲುಸ್ತುವಾರಿ ವಹಿಸಿದ್ದರು.

Share this article