ಕಬ್ಬಳಿ ಬಸವೇಶ್ವರಸ್ವಾಮಿಯ ಜಾತ್ರಾ ಮಹೋತ್ಸವ

KannadaprabhaNewsNetwork |  
Published : Nov 14, 2024, 12:50 AM IST
13ಎಚ್ಎಸ್ಎನ್11 : ಶ್ರೀ ಕ್ಷೇತ್ರ ಕಬ್ಬಳಿಯಲ್ಲಿ  ಕಾರ್ತಿಕ ಮಾಸದಲ್ಲಿನ ೫ ದಿನಗಳ ಜಾತ್ರೆ ಮಹೋತ್ಸವದ ಅಂಗವಾಗಿ ಕಲ್ಯಾಣಿಯಲ್ಲಿ ತೆಪ್ಪೋತ್ಸವ ನಡೆಯಿತು. | Kannada Prabha

ಸಾರಾಂಶ

ಹಿರಿಸಾವೆ ಹೋಬಳಿಯ ಕಬ್ಬಳಿ ಬಸವೇಶ್ವರಸ್ವಾಮಿಯ ಜಾತ್ರಾ ಮಹೋತ್ಸವದ ಅಂಗವಾಗಿ ಕಾರ್ತಿಕ ಸೋಮವಾರದ ರಾತ್ರಿ ಸರ್ಪೋತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ ಮತ್ತು ಕಲ್ಯಾಣಿಯಲ್ಲಿ ತೆಪ್ಪೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಮುತ್ತಿನ ಪಲ್ಲಕ್ಕಿಯ ಮೆರವಣಿಗೆಯೂ ಮಂಗಳವಾದ್ಯ, ಮಹಿಳಾ ವೀರಗಾಸೆ, ಡೊಳ್ಳು ಕುಣಿತ, ಕೋಲಾಟ, ಚಂಡವಾದ್ಯ ಸೇರಿದಂತೆ ವಿವಿಧ ಕಲಾ ತಂಡಗಳೊಂದಿಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ತಾಲೂಕಿನ ಹಿರಿಸಾವೆ ಹೋಬಳಿಯ ಕಬ್ಬಳಿ ಬಸವೇಶ್ವರಸ್ವಾಮಿಯ ಜಾತ್ರಾ ಮಹೋತ್ಸವದ ಅಂಗವಾಗಿ ಕಾರ್ತಿಕ ಸೋಮವಾರದ ರಾತ್ರಿ ಸರ್ಪೋತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ ಮತ್ತು ಕಲ್ಯಾಣಿಯಲ್ಲಿ ತೆಪ್ಪೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ಶ್ರೀ ಕ್ಷೇತ್ರ ಕಬ್ಬಳಿಯಲ್ಲಿ ನಡೆಯುತ್ತಿರುವ ಕಾರ್ತಿಕ ಮಾಸದಲ್ಲಿನ ೫ ದಿನಗಳ ಜಾತ್ರೆ ಮಹೋತ್ಸವದಲ್ಲಿ ಬಸವೇಶ್ವರಸ್ವಾಮಿಯ ಸರ್ಪೋತ್ಸವ ಹಾಗೂ ದಸರಿಘಟ್ಟದ ಚೌಡೇಶ್ವರಿ ದೇವಿ ಮತ್ತು ಶ್ರೀ ಆದಿಚುಂಚನಗಿರಿ ಮಠ ಹಿಂದಿನ ಪೀಠಾಧ್ಯಕ್ಷರಾಗಿದ್ದ ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರು ಪುತ್ಥಳಿ ಮತ್ತು ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರು ಮುತ್ತಿನ ಪಲ್ಲಕ್ಕಿಯ ಮೆರವಣಿಗೆಯೂ ಮಂಗಳವಾದ್ಯ, ಮಹಿಳಾ ವೀರಗಾಸೆ, ಡೊಳ್ಳು ಕುಣಿತ, ಕೋಲಾಟ, ಚಂಡವಾದ್ಯ ಸೇರಿದಂತೆ ವಿವಿಧ ಕಲಾ ತಂಡಗಳೊಂದಿಗೆ ನಡೆಯಿತು.

ನಂತರ ನಡೆದ ಧಾರ್ಮಿಕ ಸಭೆಯಲ್ಲಿ ನೆರೆದಿದ್ದ ಭಕ್ತರನ್ನು ಕುರಿತು ಆಶೀರ್ವಚನ ನೀಡಿದ ಶ್ರೀ ನಿರ್ಮಲನಂದನಾಥ ಸ್ವಾಮೀಜಿಗಳು, ಮಾನವ ಜನ್ಮ ಇರುವುದು ಭೋಗಕ್ಕಾಗಿ ಅಲ್ಲ ಯೋಗಕ್ಕಾಗಿ ಇರುವುದು. ವಿಜ್ಞಾನ, ತಂತ್ರಜ್ಞಾನ ಬೆಳೆದಷ್ಟು, ಪ್ರಕೃತಿಯ ಆಳಅಗಲವನ್ನು ತಿಳಿದಷ್ಟು, ದೈವದ ಅಗಾಧತೆ ನಮ್ಮ ಅರಿವಿಗೆ ಬರುತ್ತದೆ. ಬುದ್ಧಿಯ ಕೈಗೆ ಮನಸ್ಸು ಕೊಟ್ಟರೆ, ಉತ್ತಮವಾದ ಜೀವನವನ್ನು ನಡೆಸಬಹುದು. ಮನಸ್ಸನ್ನು ಉತ್ತಮ ಮಾರ್ಗದಲ್ಲಿ ಕರೆದುಕೊಂಡು ಹೋಗುವ ಶಕ್ತಿ ಇರುವುದು ದೇವರ ಭಕ್ತಿಗೆ ಮಾತ್ರ. ಆದ್ದರಿಂದ ನಾವು ಉಪಸಾನೆ, ಆಧ್ಯಾತ್ಮಿಕದಲ್ಲಿ ಭಾಗವಹಿಸಬೇಕು ಎಂದರು.ಪ್ರಾಸ್ತವಿಕವಾಗಿ ಮಾತನಾಡಿದ ಹಾಸನ-ಕೊಡಗು ಮಠದ ಕಾರ್ಯದರ್ಶಿ ಶಂಭುನಾಥ ಸ್ವಾಮೀಜಿ, ಈ ಭಾಗದ ಹಲವು ವರ್ಷಗಳ ಕನಸಾದ ಕೆರೆಗೆ ಹೇಮಾವತಿ ನೀರು ತುಂಬಿಸುವ ಯೋಜನೆ ಈ ವರ್ಷ ಆದಿಚುಂಚನಗಿರಿ ಮಠವು ನನಸು ಮಾಡಿದೆ ಎಂದರು.ದೇವಸ್ಥಾನದ ಆವರಣದ ಸುತ್ತ ಮೆರವಣಿಗೆ ನಡೆದು ದೇವಸ್ಥಾನದ ಸಮೀಪವಿದ್ದ ಕಲ್ಯಾಣಿ ಬಳಿಗೆ ಉತ್ಸವವು ಆಗಮಿಸಿತ್ತು. ವಿದ್ಯುತ್ ದೀಪಾಲಂಕಾರದೊಂದಿಗೆ ಸಿದ್ಧಗೊಂಡಿದ್ದ ತೆಪ್ಪದಲ್ಲಿ ಬಸವೇಶ್ವರಸ್ವಾಮಿ, ಧಸರಿಘಟ್ಟದ ಚೌಡೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಲಾಯಿತು. ಬಾಲಗಂಗಾಧರನಾಥ ಸ್ವಾಮೀಜಿಯವರ ಪುತ್ಥಳಿ ಹಾಗೂ ನಿರ್ಮಲಾನಂದನಾಥ ಸ್ವಾಮೀಜಿಯವರು ಪುಷ್ಪ ಸಿಂಹಾಸನದ ಮೇಲೆ ಅಲಂಕೃತರಾದ ತಕ್ಷಣ ತೆಪ್ಪೋತ್ಸವಕ್ಕೆ ಚಾಲನೆ ದೊರೆಯಿತು. ಭಕ್ತರ ಜಯಘೋಷದೊಂದಿಗೆ, ಪಟಾಕಿಗಳ ಸಿಡಿತದೊಂದಿಗೆ ಮೂರು ಸುತ್ತು ತೆಪ್ಪೋತ್ಸವ ನಡೆಸಲಾಯಿತು.ಸಭೆಯಲ್ಲಿ ಚೈತನ್ಯನಾಥ ಸ್ವಾಮೀಜಿ, ಮಠದ ಶಿವಪುತ್ರನಾಥ ಸ್ವಾಮೀಜಿ, ಶ್ರೀಶೈಲದ ಬಸವರಾಜೇಂದ್ರ ಸ್ವಾಮೀಜಿ, ಹೊಸಕೊಪ್ಪಲು ಮಠದ ಬಸವೇಶ್ವರ ಚೈತ್ಯನ್ಯ ಸಾಮೀಜಿ, ಚಂದ್ರಶೇಖರ್‌, ಮುಖ್ಯಶಿಕ್ಷಕ ತಿಮ್ಮೇಗೌಡ, ಗ್ರಾಮ ಪಂಚಾಯಿತಿ ಸದಸ್ಯ ಶಿವನಂಜೇಗೌಡ, ಮುಖಂಡರಾದ ಶ್ರೀಕಂಠು, ಪ್ರಕಾಶ್, ಹೊನ್ನೇಗೌಡ ವೇದಿಕೆಯಲ್ಲಿ ಇದ್ದರು. ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರಿಗೆ ಭಕ್ತರು ಪುಷ್ಪವೃಷ್ಟಿಯ ಮೂಲಕ ಅಭಿನಂದಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ