ಹೆಬ್ರಿ ತಾಲೂಕಿನ ಕಬ್ಬಿನಾಲೆ ಪರಿಸರವು ಜೀವ ವೈವಿಧ್ಯ, ದಟ್ಟ ಅರಣ್ಯ ಹಾಗೂ ನೈಸರ್ಗಿಕ ಜಲಮೂಲಗಳಿಂದ ಸಮೃದ್ಧವಾಗಿರುವ ಪರಿಸರ ಸೂಕ್ಷ್ಮ ಪ್ರದೇಶವಾಗಿದೆ. ಅಪರೂಪದ ವನ್ಯಜೀವಿಗಳ ಆಶ್ರಯ ತಾಣವಾಗಿರುವ ಈ ಪ್ರದೇಶದಲ್ಲಿ ಇತ್ತೀಚೆಗೆ ಕೆಲವು ಖಾಸಗಿ ಸಂಸ್ಥೆಗಳು ಹಾಗೂ ವ್ಲಾಗರ್ ತಂಡಗಳು ಸಾಮಾಜಿಕ ಜಾಲತಾಣಗಳಿಗಾಗಿ ಪ್ರಚಾರ ನಡೆಸುತ್ತಿರುವ ಪರಿಣಾಮ ಅನಗತ್ಯ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಕಾರ್ಕಳ: ಹೆಬ್ರಿ ತಾಲೂಕಿನ ಕಬ್ಬಿನಾಲೆ ಪರಿಸರವು ಜೀವ ವೈವಿಧ್ಯ, ದಟ್ಟ ಅರಣ್ಯ ಹಾಗೂ ನೈಸರ್ಗಿಕ ಜಲಮೂಲಗಳಿಂದ ಸಮೃದ್ಧವಾಗಿರುವ ಪರಿಸರ ಸೂಕ್ಷ್ಮ ಪ್ರದೇಶವಾಗಿದೆ. ಅಪರೂಪದ ವನ್ಯಜೀವಿಗಳ ಆಶ್ರಯ ತಾಣವಾಗಿರುವ ಈ ಪ್ರದೇಶದಲ್ಲಿ ಇತ್ತೀಚೆಗೆ ಕೆಲವು ಖಾಸಗಿ ಸಂಸ್ಥೆಗಳು ಹಾಗೂ ವ್ಲಾಗರ್ ತಂಡಗಳು ಸಾಮಾಜಿಕ ಜಾಲತಾಣಗಳಿಗಾಗಿ ಪ್ರಚಾರ ನಡೆಸುತ್ತಿರುವ ಪರಿಣಾಮ ಅನಗತ್ಯ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.ಪ್ರವಾಸಿ ತಾಣವಾಗಿ ಅಧಿಕೃತವಾಗಿ ಅಭಿವೃದ್ಧಿಪಡಿಸದ ಈ ಪ್ರದೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವ ಕೆಲವರು ಪ್ಲಾಸ್ಟಿಕ್ ಬಾಟಲಿ, ಮದ್ಯದ ಬಾಟಲಿ ಸೇರಿದಂತೆ ವಿವಿಧ ತ್ಯಾಜ್ಯಗಳನ್ನು ಎಸೆದು ಪರಿಸರ ಹಾಳು ಮಾಡುತ್ತಿದ್ದಾರೆ. ಇದರಿಂದ ಪರಿಸರ ಮಾಲಿನ್ಯ ಜೊತೆಗೆ ಸ್ಥಳೀಯರ ನೆಮ್ಮದಿಗೂ ಧಕ್ಕೆಯಾಗುತ್ತಿದೆ.
ಪ್ರವಾಸಿಗರು ಮತ್ತು ಗ್ರಾಮಸ್ಥರ ನಡುವೆ ವಾಗ್ವಾದಗಳು ನಡೆಯುತ್ತಿರುವ ಘಟನೆಗಳೂ ವರದಿಯಾಗುತ್ತಿವೆ. ಅಪಾಯದ ಅರಿವಿಲ್ಲದೆ ಜಲಪಾತ ಹಾಗೂ ನೀರಿನ ಪ್ರದೇಶಗಳಲ್ಲಿ ಸಾಹಸಕ್ಕೆ ಮುಂದಾಗುವ ಕೆಲವರು ಅಪಘಾತಕ್ಕೀಡಾಗುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಕಬ್ಬಿನಾಲೆ ಪ್ರದೇಶದಲ್ಲಿ ನೀರಿನಲ್ಲಿ ಮುಳುಗಿ ನಾಲ್ವರು ಮೃತಪಟ್ಟ ಘಟನೆಗಳು ವರದಿಯಾಗಿವೆ. ಅಪಘಾತ ಸಂಭವಿಸಿದಾಗ ರಕ್ಷಣಾ ಕಾರ್ಯ ಹಾಗೂ ಮೃತದೇಹಗಳನ್ನು ಹೊರ ತೆಗೆದು ತರುವ ಜವಾಬ್ದಾರಿಯೂ ಸ್ಥಳೀಯರ ಮೇಲೆಯೇ ಬೀಳುತ್ತಿದೆ. ಇದರಿಂದ ಅವರ ಜೀವಕ್ಕೂ ಅಪಾಯ ಎದುರಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ‘ರೀಲ್ಸ್’ ಮಾಡುವ ಉದ್ದೇಶದಿಂದ ನಿರ್ಲಕ್ಷ್ಯವಾಗಿ ವರ್ತಿಸುವ ಕೆಲ ಪ್ರವಾಸಿಗರ ನಡೆ ಸ್ಥಳೀಯರಲ್ಲಿ ಅಸಮಾಧಾನ ಮೂಡಿಸಿದೆ.ಇತ್ತ ಜೀವ ವೈವಿಧ್ಯ ಸಂರಕ್ಷಣೆಗಾಗಿ ಅರಣ್ಯ ಇಲಾಖೆ ನಿರಂತರವಾಗಿ ಶ್ರಮಿಸುತ್ತಿದ್ದರೂ ನಿಯಮ ಉಲ್ಲಂಘಿಸಿ ಪ್ರವೇಶಿಸುವ ಪ್ರವಾಸಿಗರಿಂದ ಪರಿಸರ ಸಂರಕ್ಷಣೆಗೆ ಅಡ್ಡಿಯಾಗುತ್ತಿದೆ. ಕಬ್ಬಿನಾಲೆಯಂತಹ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ರಕ್ಷಿಸಲು ಪ್ರವಾಸಿಗರು ಜವಾಬ್ದಾರಿಯಿಂದ ವರ್ತಿಸಬೇಕು ಹಾಗೂ ಅಗತ್ಯ ನಿಯಂತ್ರಣ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.ಪ್ರವಾಸಿಗರ ಲೂಟಿ: ಸ್ಥಳೀಯರ ಆರೋಪದ ಪ್ರಕಾರ ಕೆಲವು ಖಾಸಗಿ ಸಂಸ್ಥೆಗಳು ಪರಿಸರ ಸಂರಕ್ಷಣೆ ಹೆಸರಿನಲ್ಲಿ ಚಾರಣ, ರ್‍ಯಾಲಿ ಹಾಗೂ ಕಾಡಿನತ್ತ ನಡಿಗೆ ಕಾರ್ಯಕ್ರಮಗಳನ್ನು ಆಯೋಜಿಸಿ ಅಕ್ರಮವಾಗಿ ಅರಣ್ಯ ಪ್ರದೇಶಗಳಿಗೆ ಪ್ರವೇಶಿಸುತ್ತಿವೆ. ದೂರದ ನಗರಗಳಿಂದ ಪ್ರವಾಸಿಗರನ್ನು ಕರೆತಂದು ದುಬಾರಿ ಶುಲ್ಕ ವಸೂಲಿ ಮಾಡುವ ಮೂಲಕ ಕಬ್ಬಿನಾಲೆ ಪರಿಸರವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಸಂಬಂಧಿತ ಇಲಾಖೆಗಳ ಪೂರ್ವಾನುಮತಿ ಇಲ್ಲದೆ ಕಾರ್ಯಕ್ರಮಗಳನ್ನು ಆಯೋಜಿಸಿ, ಪ್ರವಾಸಿಗರಿಂದ ಶುಲ್ಕ ಸಂಗ್ರಹಿಸುವುದು ಖಂಡನೀಯ. ಇಂತಹ ವಾಣಿಜ್ಯ ಚಟುವಟಿಕೆಗಳು ಪರಿಸರ ಹಾಗೂ ವನ್ಯಜೀವಿಗಳಿಗೆ ಹಾನಿಕಾರಕವಾಗಿದ್ದು, ಅನಧಿಕೃತ ಟ್ರಕ್ಕಿಂಗ್, ಜಲಪಾತಗಳಿಗೆ ಪ್ರವೇಶ ಮತ್ತು ವನ್ಯಜೀವಿಗಳಿಗೆ ತೊಂದರೆ ಉಂಟುಮಾಡುವ ಚಟುವಟಿಕೆಗಳನ್ನು ಅರಣ್ಯ ಇಲಾಖೆ ಕಟ್ಟುನಿಟ್ಟಾಗಿ ತಡೆಯಬೇಕು. -ನಾಗರಾಜ ಕೂವೆ, ಪರಿಸರವಾದಿ
ವನ್ಯಜೀವಿ ಪ್ರದೇಶದಲ್ಲಿ ಸಧ್ಯ ಯಾವುದೇ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ಇಲ್ಲ. ಯಾವುದೇ ಕಾರ್ಯಕ್ರಮ ನಡೆದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು.
-ರೂಪೇಶ್ ಚೌಹಾಣ್ ಪ್ರಭಾರ ಆರ್‌ಎಫ್‌ಒ. ಹೆಬ್ರಿ ವಲಯ, ಕುದುರೆಮುಖ ವನ್ಯಜೀವಿ ವಿಭಾಗವನ್ಯಜೀವಿ ವಿಭಾಗದಲ್ಲಿ ಅರಣ್ಯಾಧಿಕಾರಿಗಳು ಯಾವುದೇ ಕಾರ್ಯಕ್ರಮಗಳಿಗೆ ಅನುಮತಿ ನೀಡಬಾರದು. ಪರಿಸರವನ್ನು ಉಳಿಸಬೇಕು. ಪರಿಸರದ ಹೆಸರಿನಲ್ಲಿ ಯಾವುದಾದರೂ ಕಾರ್ಯಕ್ರಮಗಳು ನಡೆದರೆ ಕಾನೂನು ಕ್ರಮ ಜರುಗಿಸಲಿ. -ಆರತಿ ಅಶೋಕ್ ಮಾಳ, ಪರಿಸರವಾದಿ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.