ಕಬಿನಿ ನೀರಿನ ಸಮಸ್ಯೆ ಬಗ್ಗೆ ನಿರಂತರ ವರದಿ ಪ್ರಕಟ । ಕನ್ನಡಪ್ರಭ ವರದಿಗೆ ಜನರ ಮೆಚ್ಚುಗೆಯ ಮಹಾಪೂರರಂಗೂಪುರ ಶಿವಕುಮಾರ್
ಕನ್ನಡಪ್ರಭದ ನಿರಂತರ ವರದಿ ಮೂಲಕ ಜಿಲ್ಲಾಡಳಿತ ಗಮನ ಸೆಳೆದ ಪರಿಣಾಮ ಹಾಗೂ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಕೊನೆಯಲ್ಲಿ ಖಡಕ್ ಸೂಚನೆ ನೀಡಿದ ಬೆನ್ನಲ್ಲೆ 50 ದಿನ ಪೂರೈಸಿದ ಬಳಿಕ ಕೊನೆಗೂ ಗುಂಡ್ಲುಪೇಟೆಗೆ ಕಬಿನಿ ಕುಡಿಯುವ ನೀರು ಗುಡ್ ಪ್ರೈಡೆಗೆ (ಶುಭ ಶುಕ್ರವಾರ) ಬಂದಿದೆ!
ಗುಂಡ್ಲುಪೇಟೆ ಹಾಗೂ ಸುಮಾರು 15 ಹಳ್ಳಿಗೆ ಸರಬರಾಜಾಗುವ ಕಬಿನಿ ನೀರು ಕಳೆದ ಒಂದೂವರೆ ತಿಂಗಳಿನಿಂದ ಬಂದಿರಲಿಲ್ಲ. ಸಿಂಧುವಳ್ಳಿ ಶುದ್ಧೀಕರಣ ಘಟಕ ಹಾಗೂ ತಗ್ಗಲೂರು ಪಂಪ್ ಹೌಸ್‌ನ ಡಿಜಿಟಲ್ ಸ್ಟಾರ್ಟರ್ ಕೆಟ್ಟಿದ ಕಾರಣ ಕಬಿನಿ ನೀರು ಬಂದಿರಲಿಲ್ಲ. ನೀರಿನ ಹಾಹಾಕಾರ ಗುಂಡ್ಲುಪೇಟೆ ಪಟ್ಟಣದ ಜನತೆಗೆ ಹಾಗೂ 15 ಹಳ್ಳಿಗಳಿಗೂ ತಟ್ಟಿತ್ತು. ಕುಡಿಯುವ ನೀರಿನ ಹಾಹಾಕಾರ ಭುಗಿಲೆದ್ದರೂ ಪುರಸಭೆಯ ಸದಸ್ಯರು ಪುರಸಭೆ ಆಡಳಿತಾಧಿಕಾರಿ ವಿರುದ್ಧ ತುಟಿ ಬಿಚ್ಚಲಿಲ್ಲ. ದುರಂತ ಎಂದರೆ ಬಿಜೆಪಿ ಕೂಡ ಸೊಲ್ಲು ಎತ್ತಲೇ ಇಲ್ಲ.ಕಬಿನಿ ಕುಡಿಯುವ ನೀರಿನ ಸಂಬಂಧ ಮೊದಲಿಗೆ ಕನ್ನಡಪ್ರಭ ಮಾ.13ರಂದು ಗುಂಡ್ಲುಪೇಟೆಗೆ 15 ದಿನಗಳಿಂದ ಕಬಿನಿ ನೀರಿಲ್ಲ ಎಂದು ವರದಿ ಪ್ರಕಟಿಸಿ ಜಿಲ್ಲಾಡಳಿತ ಗಮನ ಸೆಳೆದರೂ ಡಿಜಿಟಲ್ ಸ್ಟಾರ್ಟರ್ ರಿಪೇರಿ ಮಾಡಿಸಲು ಪುರಸಭೆಯಿಂದ ಸಾಧ್ಯವಾಗಲಿಲ್ಲ. ಮಾ.17 ರಂದು ಶಾಸಕ ಗಣೇಶ್ ಪ್ರಸಾದ್ ಗುಂಡ್ಲುಪೇಟೆಯಲ್ಲಿ ಕುಡಿವ ನೀರಿನ ಹಾಹಾಕಾರ ಕಂಡು ಪಟ್ಟಣಕ್ಕೆ 10 ಬೋರ್‌ವೆಲ್ ಕೊರೆಸಲು ಸೂಚನೆ ನೀಡಿದರು. ಆದರೂ ನೀರಿನ ಸಮಸ್ಯೆಯಿತ್ತು. ಮಾ.16ರಂದು ಗುಂಡ್ಲುಪೇಟೇಲಿ ನೀರಿಗಾಗಿ ನಿಲ್ಲದ ಹಾಹಾಕಾರ, ಮಾ.21 ರಂದು ಸ್ಟಾರ್ಟರ್ ರಿಪೇರಿಯಾದ್ರೂ ನೀರು ಬಂದಿಲ್ಲ, ಮಾ.25 ರಂದು ಗುಂಡ್ಲುಪೇಟೆಗೆ ಕಬಿನಿ ನೀರು ಬರಂಗೆ ಕಾಣ್ತಿಲ್ಲ, ಮಾ.26 ರಂದು ನೀರಿಲ್ಲ, ನೀರಿಲ್ಲ, ತಿಂಗಳಾದ್ರು ಗುಂಡ್ಲುಪೇಟೆಗೆ ಕಬಿನಿ ನೀರಿಲ್ಲ ಎಂದು ನಿರಂತರ ವರದಿ ಪ್ರಕಟಿಸಿ ಜಿಲ್ಲಾಡಳಿತ ವಿರುದ್ಧ ಕನ್ನಡಪ್ರಭ ಸಮರವನ್ನೇ ಸಾರಿತ್ತು.
ಕಬಿನಿ ಕುಡಿಯುವ ನೀರಿನ ಸಮಸ್ಯೆಗೆ ಕೃತಕ ಸಮಸ್ಯೆ ಒಡ್ಡಿದ್ದಾರೆ ಎಂದು ಕನ್ನಡಪ್ರಭ ಮೊದಲಿಗೆ ಅನುಮಾನ ವ್ಯಕ್ತಪಡಿಸಿದ ಬಳಿಕ ಕ್ಷೇತ್ರದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಕೂಡ ಕಬಿನಿ ನೀರಿನ ಸಮಸ್ಯೆಗೆ ಕೃತಕ ಸಮಸ್ಯೆ ಕಾರಣ ಎಂದು ಹೇಳಿದ್ದ ಬಗ್ಗೆ ಕನ್ನಡಪ್ರಭ ಪತ್ರಿಕೆ ಮಾ.28 ರಂದು ವರದಿ ಪ್ರಕಟಿಸಿತ್ತು. ಕನ್ನಡಪ್ರಭದಲ್ಲಿ ಕಬಿನಿ ಸಮಸ್ಯೆ ಕೃತಕ: ಜಿಲ್ಲಾಡಳಿತ ತನಿಖೆ ನಡೆಸುತ್ತಾ? ಎಂದು ವರದಿ ಪ್ರಕಟಿಸುವ ಮೂಲಕ ಕನ್ನಡಪ್ರಭ ಬದ್ಧತೆ ಮೆರೆದಿತ್ತು. ಈ ವರದಿಯು ಜನರ ಮೆಚ್ಚುಗೆಗೆ ಕೂಡಾ ಪಾತ್ರವಾಗಿತ್ತು.