ಕನ್ನಡಪ್ರಭ ವಾರ್ತೆ ಸಾಗರ
15ನೇ ವರ್ಷಕ್ಕೆ ಕತ್ತಿ ಹಿಡಿದು ದೇಶ ಸಂರಕ್ಷಣೆ, ಧರ್ಮಜಾಗೃತಿಗಾಗಿ ತನ್ನ ಮುಡಿಪಾಗಿಟ್ಟ ಶಿವಾಜಿ ಮಹಾರಾಜರ ಜೀವನಗಾಥೆಯ ಸಮಾಜದ ತಾಯಂದಿರು ಮಕ್ಕಳಿಗೆ ಹೇಳಿ ಹುರಿದುಂಬಿಸಬೇಕು ಎಂದು ಧರ್ಮಸ್ಥಳ ಶ್ರೀರಾಮಕ್ಷೇತ್ರ ಮಹಾಸಂಸ್ಥಾನದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ವತಿಯಿಂದ ನಡೆದ ಹಿಂದೂ ಸಾಮ್ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ನಮಗೆ ದೇಶದ ಧರ್ಮ, ಸಂಸ್ಕೃತಿ ರಕ್ಷಿಸಿದವರು ಆದರ್ಶ ಹಾಗೂ ಮಾದರಿಯಾಗಬೇಕು. ಮಹಾಭಾರತ, ರಾಮಾಯಣ ಮೊದಲಾದ ಗ್ರಂಥಗಳು ದ್ವೇಷ ಬಿತ್ತುವ ಕೆಲಸ ಮಾಡಿಲ್ಲ. ಬದಲಾಗಿ ತನ್ನೊಂದಿಗೆ ಇರುವವರ ಸಮಾನತೆಯಿಂದ ನೋಡುವ, ಪ್ರೀತಿ, ವಿಶ್ವಾಸ, ಸಹೋದರತೆಗಳ ಬೆಳೆಸುವ ಕೆಲಸ ಮಾಡಿದರು. ನಾವು ಮತ್ತೊಬ್ಬರ ಬಗ್ಗೆ ದ್ವೇಷ, ಅಸೂಯೆ, ವಿರೋಧಗಳ ಇಟ್ಟುಕೊಂಡು ಬದುಕುವುದು ಬಿಟ್ಟು, ದೇಶಕಟ್ಟುವ, ಸಂಸ್ಕೃತಿ, ಆಚಾರ-ವಿಚಾರಗಳ ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ರಾಷ್ಟ್ರೀಯತೆ ಪ್ರತಿನಿಧಿಸುವ ಕೆಲಸ ಮಾಡಬೇಕು ಎಂದು ಹೇಳಿದರು.ನಮ್ಮದು ಮೃತ್ಯುಂಜಯ ಸಮಾಜ:
ದಿಕ್ಸೂಚಿ ಭಾಷಣ ಮಾಡಿದ ದಕ್ಷಿಣ ಪ್ರಾಂತ್ಯ ಗೋರಕ್ಷ ಪ್ರಮುಖ ಮುರಳಿಕೃಷ್ಣ ಭಟ್ ಅಸಂತಡ್ಕ, ಹಲವು ವಿದೇಶಿಗರಿಂದ ದೇಶದ ಮೇಲೆ ೮೦೦ಕ್ಕೂ ಹೆಚ್ಚು ವರ್ಷ ನಿರಂತರ ದಾಳಿ ನಡೆದು ನಮ್ಮತನ ಹಾಳು ಮಾಡುವ ಕೆಲಸ ನಡೆದಿತ್ತು. ಆದರೆ ನಮ್ಮದು ಮೃತ್ಯುಂಜಯ ಸಮಾಜವಾಗಿದ್ದು ಎಲ್ಲವನ್ನೂ ಮೆಟ್ಟಿ ನಿಂತಿದೆ. ಈಗ ಜಗತ್ತಿನ ಎಲ್ಲ ಇಸಂಗಳು, ಧರ್ಮಗಳು ಭಾರತದತ್ತ ನೋಡುತ್ತಿವೆ. ಹಿಂದೂಗಳನ್ನು ಖಾಫೀರರು ಎಂದು ಕರೆದ ದೇಶದಲ್ಲಿ ೨೭ ಎಕರೆ ಜಾಗದಲ್ಲಿ ದೇವಸ್ಥಾನ ಕಟ್ಟಿದ ಕಾಲವಿದು. ಇದು ಭೋಗ ಭೂಮಿಯಲ್ಲ, ಯೋಗ ಭೂಮಿ. ಜಗತ್ತಿನ ಏಕೈಕ ದೇವಭೂಮಿ ಭಾರತ ಮಾತ್ರ ಎಂದರು.ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷೆ ಪ್ರತಿಮಾ ಜೋಗಿ ಅಧ್ಯಕ್ಷತೆ ವಹಿಸಿದ್ದರು. ಬಜರಂಗದಳ ಜಿಲ್ಲಾ ಸಂಚಾಲಕ ಸಂತೋಷ್ ಶಿವಾಜಿ, ಪ್ರಮುಖರಾದ ರಾಜೇಶ್ ಗೌಡ, ರವೀಶ್ ಕುಮಾರ್, ಐ.ವಿ.ಹೆಗಡೆ, ಅ.ಪು.ನಾರಾಯಣಪ್ಪ, ಕಿರಣ್ ಗೌಡ, ಮಾಜಿ ಸಚಿವ ಎಚ್.ಹಾಲಪ್ಪ, ಆರ್ ಎಸ್ಎಸ್ ಸೇರಿ ಹಿಂದೂಪರ ಸಂಘಟನೆಗಳ ಪ್ರಮುಖರು ಹಾಜರಿದ್ದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಶ್ರೀಮಹಾಗಣಪತಿ ದೇವಸ್ಥಾನದಿಂದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಶೋಭಾಯಾತ್ರೆ ನಡೆಯಿತು. ಸಂಸದ ಬಿ.ವೈ.ರಾಘವೇಂದ್ರ, ಬಿಜೆಪಿ ಬಂಡಾಯ ಅಭ್ಯರ್ಥಿ ಈಶ್ವರಪ್ಪ ಆಗಮಿಸಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.