ಕಾಡಾ ಸಭೆ, ನೀರು ಹರಿಸುವ ವೇಳಾಪಟ್ಟಿ ಪ್ರಕಟಿಸಿ: ಹರಿಹರ ಶಾಸಕ ಬಿ.ಪಿ.ಹರೀಶ

KannadaprabhaNewsNetwork |  
Published : Jan 03, 2024, 01:45 AM IST
2ಕೆಡಿವಿಜಿ64-ದಾವಣಗೆರೆಯಲ್ಲಿ ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು 7 ತಿಂಗಳಾದರೂ ನೀರಾವರಿ ಸಮಿತಿ ಸಭೆ ಕರೆಯದೇ, ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಸಂಬಂಧವೇ ಇಲ್ಲದ ಸಚಿವ ಮಧು ಬಂಗಾರಪ್ಪನವರ ತಾತ್ಕಾಲಿತ ಅಧ್ಯಕ್ಷರಾಗಿ ಮಾಡಿದ್ದು, ಅಚ್ಚುಕಟ್ಟು ರೈತರ ಹಿತ ಕಾಯುವವರು ಯಾರು?

ರೈತರ ಸಂಕಷ್ಟ ಅರಿವು ಇರುವವರ ಕಾಡಾ ಅಧ್ಯಕ್ಷರಾಗಿ ನೇಮಿಸಿ

ಕನ್ನಡಪ್ರಭ ವಾರ್ತೆ ದಾವಣಗೆರೆ

ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ತಕ್ಷಣವೇ ಕರೆದು, ಭದ್ರಾ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಹರಿಸುವ ವೇಳಾಪಟ್ಟಿ ಪ್ರಕಟಿಸಲು ಹರಿಹರ ಶಾಸಕ, ಕಾಡಾ ಸಮಿತಿ ಸದಸ್ಯ ಬಿ.ಪಿ.ಹರೀಶ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು 7 ತಿಂಗಳಾದರೂ ನೀರಾವರಿ ಸಮಿತಿ ಸಭೆ ಕರೆಯದೇ, ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಸಂಬಂಧವೇ ಇಲ್ಲದ ಸಚಿವ ಮಧು ಬಂಗಾರಪ್ಪನವರ ತಾತ್ಕಾಲಿತ ಅಧ್ಯಕ್ಷರಾಗಿ ಮಾಡಿದ್ದು, ಅಚ್ಚುಕಟ್ಟು ರೈತರ ಹಿತ ಕಾಯುವವರು ಯಾರು? ಎಂದು ಪ್ರಶ್ನಿಸಿದರು.

ಅಚ್ಚುಕಟ್ಟು ಪ್ರದೇಶದ ಶಾಸಕರು ಸಮಿತಿ ಸದಸ್ಯರಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲೇ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಕರೆಯಬೇಕು. ಭದ್ರಾ ಅಚ್ಚುಕಟ್ಟು ಕೊನೆಯ ಭಾಗದ ರೈತರ ಸಂಕಷ್ಟಗಳ ಬಗ್ಗೆ ಕನಿಷ್ಟ ಅರಿವು ಇರುವವರ ಭದ್ರಾ ಕಾಡಾ ಸಮಿತಿ ಅಧ್ಯಕ್ಷರಾಗಿ ಸರ್ಕಾರ ನೇಮಿಸಬೇಕು. ಆದರೆ, ತಾತ್ಕಾಲಿಕ ಅಧ್ಯಕ್ಷರಾದವರು ಸಭೆಯನ್ನೇ ಕರೆಯುತ್ತಿಲ್ಲ ಎಂದು ದೂರಿದರು.

ಭದ್ರಾ ಜಲಾಶಯದಲ್ಲಿ ಪ್ರಸ್ತುತ 151.5 ಅಡಿ ನೀರು ಸಂಗ್ರಹವಿದೆ. 35.37 ಟಿಎಂಸಿನಷ್ಟು ನೀರು ಸಂಗ್ರಹವಿದ್ರೂ 13.83 ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿದೆ. ಉಳಿದ 21.54 ಟಿಎಂಸಿ ನೀರು ಬಳಕೆಗೆ ಲಭ್ಯವಿದೆ. 72 ದಿನ ಈ ನೀರನ್ನು ಭದ್ರಾ ಕಾಲುವೆಗಳ ಮೂಲಕ ಅಚ್ಚುಕಟ್ಟು ಪ್ರದೇಶಕ್ಕೆ ಹರಿಸಬಹುದು. ವೇಳಾಪಟ್ಟಿ ನಿಗದಿಯಾದರೆ ರೈತರು ಯಾವ ಬೆಳೆ ಬೆಳೆಯಬೇಕೆಂಬ ತೀರ್ಮಾನ ಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ನಾಲೆಗೆ ನೀರು ಬಿಟ್ಟರೆ ಕೆಲವು ರೈತರು ತೋಟ ಉಳಿಸಿಕೊಂಡರೆ, ಇನ್ನು ಕೆಲವರು ಅರೆ ನೀರಾವರಿ ಬೆಳೆ ಬೆಳೆದುಕೊಳ್ಳುತ್ತಾರೆ. ಹೆಚ್ಚುವರಿ ನೀರಿನ ಸೌಲಭ್ಯ ಹೊಂದಿರುವ ರೈತರು ಭತ್ತ ಬೆಳೆಯುತ್ತಾರೆ. ಭದ್ರಾ ನೀರನ್ನೇ ಅವಲಂಬಿಸಿದ ದಾವಣಗೆರೆ ಹಾಗೂ ಇತರೆ ನಗರಗಳಿಗೆ ಬೇಸಿಗೆಗೆ ಕುಡಿಯುವ ನೀರಿಗಾಗಿ ಕೆರೆಗಳ ತುಂಬಿಸಿಕೊಳ್ಳಲು ಅವಕಾಶ ಸಿಕ್ಕಂತಾಗುತ್ತದೆ ಎಂದರು.

ಸಚಿವ ಎಸ್ಸೆಸ್ಸೆಂ ಕಾಡಾ ಜವಾಬ್ದಾರಿ ಹೊರಲಿ:

ಕುಡಿಯುವ ನೀರಿನ ನೆಪವೊಡ್ಡಿ ನೀರಾವರಿ ಇಲಾಖೆ ಅಧಿಕಾರಿಗಳು ಭದ್ರಾ ಮೇಲ್ದಂಡೆಗೆ ನಾಲ್ಕು ದಿನ ಕಾಲ ನಿತ್ಯವೂ 700 ಟಿಎಂಸಿ ನೀರು ಹರಿಸಿದ್ದು, ರೈತರ ತೀವ್ರ ವಿರೋಧದ ನಂತರ ನಿಲ್ಲಿಸಿದ್ದಾರೆ. ನೀರು ಹರಿಸುವ ನಿರ್ಧಾರವನ್ನು ಅಚ್ಚುಕಟ್ಟು ಪ್ರದೇಶದ ಜಿಲ್ಲೆಗಳ ಸಚಿವರು, ಶಾಸಕರನ್ನೂ ಒಳಗೊಂಡ ಕಾಡಾ ಸಮಿತಿ ಸಭೆಯಲ್ಲಿ ತೀರ್ಮಾನಿಸಬೇಕು. ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್‌.ಮಲ್ಲಿಕಾರ್ಜುನ್‌ ಕಾಡಾ ಸಮಿತಿ ಜವಾಬ್ದಾರಿ ವಹಿಸಬೇಕು. ಮುಖ್ಯಮಂತ್ರಿ, ನೀರಾವರಿ ಸಚಿವರೊಂದಿಗೆ ಚರ್ಚಿಸಿ, ಜಿಲ್ಲೆಯ ಅಚ್ಚುಕಟ್ಟು ರೈತರ ಹಿತ ಕಾಯಬೇಕು ಎಂದು ಒತ್ತಾಯಿಸಿದರು.

ಭದ್ರಾ ಡ್ಯಾಂನಿಂದ ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಕೊಡುವುದಕ್ಕೆ ನಿಯಮಾನುಸಾರವಾಗಿ ತುಂಗಾ ಅಣೆಕಟ್ಟೆಯಿಂದ ಭದ್ರಾಗೆ ನೀರು ಲಿಫ್ಟ್ ಮಾಡಿ, ಆ ನಂತರವೇ ಮೇಲ್ದಂಡೆಗೆ ನೀರು ಹರಿಸಬೇಕು. ಸಭೆಯನ್ನೇ ನಡೆಸದೇ, ಅಧಿಕಾರಿಗಳು ಯಾರದ್ದೋ ಒತ್ತಡ, ಪ್ರಭಾವಕ್ಕೆ ಒಳಗಾಗಿ ನೀರಾವರಿ ಸಲಹಾ ಸಮಿತಿಯನ್ನೇ ಮೂಲೆಗುಂಪುಮಾಡಿ, ನೀರು ಹರಿಸುವ ಆದೇಶ ಹೊರಡಿಸುವ ಅಧಿಕಾರಿಗಳಿಗೆ ಸರ್ಕಾರ ಮೂಗುದಾರ ಹಾಕಲಿ ಎಂದು ಹರಿಹರ ಶಾಸಕ ಬಿ.ಪಿ.ಹರೀಶ ಒತ್ತಾಯಿಸಿದರು.

ರೈತ ಮುಖಂಡರಾದ ಶಾಬನೂರು ಎಚ್.ಆರ್‌.ಲಿಂಗರಾಜ, ಬಿ.ಎಂ.ಸತೀಶ ಕೊಳೇನಹಳ್ಳಿ, 6ನೇ ಮೈಲಿಕಲ್ಲು ವಿಜಯಕುಮಾರ, ಚಿಕ್ಕಬೂದಿಹಾಳ ಭಗತ್ ಸಿಂಹ, ಗುರುನಾಥ ಇತರರಿದ್ದರು.

...................

ನೀರು ಪೋಲಾಗುವುದು ತಕ್ಷಣ ನಿಯಂತ್ರಿಸಿ: ಹರೀಶ್

ಭದ್ರಾ ಡ್ಯಾಂನಿಂದ ನಿತ್ಯ ಸುಮಾರು 300-400 ಕ್ಯೂಸೆಕ್‌ ನೀರು ಪೋಲಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ, ಸೋರಿಕೆ ನಿಯಂತ್ರಿಸಬೇಕು. ಭದ್ರಾ ನಾಲೆಗೆ ನೀರು ಹರಿಸಿದಾಗ ಹಿರೇಕೋಗಲೂರು ಸೂಪರ್ ಪ್ಯಾಸೇಜ್‌ ಒಡೆದಿತ್ತು. ಬೆಳ್ಳಿಗನೂಡು, ಮತ್ತಿ, ಸಂತೇಬೆನ್ನೂರು ಮತ್ತಿತರೆ ಕಡೆ ಕಾಲುವೆಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆಗಳು ಶಿಥಿಲಗೊಂಡು ಅಪಾರ ಪ್ರಮಾಣದ ನೀರು ರಸ್ತೆಯಲ್ಲಿ ಹರಿದು ಪೋಲಾಗುತ್ತಿದೆ. ತಕ್ಷಣವೇ ನಾಲೆ ನೀರು ಪೋಲಾಗದಂತೆ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಬೇಕು ಎಂದು ಶಾಸಕ ಬಿ.ಪಿ.ಹರೀಶ್‌ ತಾಕೀತು ಮಾಡಿದರು.ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದೇನೆ

ದಾವಣಗೆರೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಬೇರೆ ಯಾರೆಲ್ಲಾ ಆಕಾಂಕ್ಷಿಗಳಿದ್ದಾರೋ ನನಗಂತೂ ಗೊತ್ತಿಲ್ಲ. ನಾನೂ ಕೂಡ ಜಿಲ್ಲಾಧ್ಯಕ್ಷ ಸ್ಥಾನ ಬಯಸಿ, ಅರ್ಜಿ ಸಲ್ಲಿಸಿದ್ದೇನೆ. ಪಕ್ಷದ ವರಿಷ್ಠರು ಜವಾಬ್ದಾರಿ ವಹಿಸಿದರೆ, ಜಿಲ್ಲಾದ್ಯಂತ ಪಕ್ಷ ಸಂಘಟನೆ, ಬಲವರ್ಧನೆಗೆ ನಿಸ್ವಾರ್ಥದಿಂದ ಶ್ರಮಿಸುವೆ.

ಬಿ.ಪಿ.ಹರೀಶ, ಹರಿಹರ ಬಿಜೆಪಿ ಶಾಸಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!