ಸಿಇಟಿ ಪರೀಕ್ಷೆ ಬರೆದ ಕಡಬ ಆಸಿಡ್‌ ದಾಳಿ ಸಂತ್ರಸ್ತ ವಿದ್ಯಾರ್ಥಿನಿ

KannadaprabhaNewsNetwork | Published : Apr 21, 2024 2:22 AM

ಸಾರಾಂಶ

ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಿಂದ ತನ್ನ ತಾಯಿಯೊಂದಿಗೆ ಆಂಬುಲೆನ್ಸ್‌ನಲ್ಲಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆ ಬರೆದು ವಾಪಸ್‌ ಆಸ್ಪತ್ರೆಗೆ ಮರಳಿದ್ದಾಳೆ. ದ್ವಿತೀಯ ಪಿಯುಸಿ ಪರೀಕ್ಷೆ ಬರೆಯದ ಈಕೆ, ಪೂರಕ ಪರೀಕ್ಷೆ ಬರೆದು ಉತ್ತೀರ್ಣಳಾಗುವ ನಿರೀಕ್ಷೆಯಲ್ಲಿ ಸಿಇಟಿ ಬರೆದಿದ್ದಾಳೆ.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಆಸಿಡ್ ದಾಳಿಗೆ ಒಳಗಾಗಿ ಗಂಭೀರ ಸ್ಪರೂಪದ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಡಬ ತಾಲೂಕಿನ ಕಡಬ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ, ಗುರುವಾರ ಮತ್ತು ಶುಕ್ರವಾರ ಮಂಗಳೂರಿನ ಪಿಯು ಕಾಲೇಜಿನಲ್ಲಿ ನಡೆದ ಸಿಇಟಿ ಪರೀಕ್ಷೆ ಬರೆದಿದ್ದಾಳೆ.

ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಿಂದ ತನ್ನ ತಾಯಿಯೊಂದಿಗೆ ಆಂಬುಲೆನ್ಸ್‌ನಲ್ಲಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆ ಬರೆದು ವಾಪಸ್‌ ಆಸ್ಪತ್ರೆಗೆ ಮರಳಿದ್ದಾಳೆ. ದ್ವಿತೀಯ ಪಿಯುಸಿ ಪರೀಕ್ಷೆ ಬರೆಯದ ಈಕೆ, ಪೂರಕ ಪರೀಕ್ಷೆ ಬರೆದು ಉತ್ತೀರ್ಣಳಾಗುವ ನಿರೀಕ್ಷೆಯಲ್ಲಿ ಸಿಇಟಿ ಬರೆದಿದ್ದಾಳೆ. ಮಾರ್ಚ್ ೪ರಂದು ಕಡಬ ಸರ್ಕಾರಿ ಕಾಲೇಜಿಗೆ ಗಣಿತ ಪರೀಕ್ಷೆ ಬರೆಯಲು ಆಗಮಿಸಿದ್ದಳು. ಪರೀಕ್ಷೆ ಇನ್ನೇನು ಆರಂಭವಾಗಬೇಕು ಎನ್ನುವ ಮೊದಲು ಕೊಠಡಿಯ ಮುಂಭಾಗದಲ್ಲಿ ತನ್ನ ಇಬ್ಬರು ಸಹಪಾಠಿಗಳೊಂದಿಗೆ ಬೆಂಚ್ ಮೇಲೆ ಕುಳಿತಿದ್ದ ಸಂದರ್ಭ, ಕೇರಳ ಮೂಲದ ಅಬಿನ್ ಎಂಬಾತ ಆಗಮಿಸಿ ಆಸಿಡ್ ಎರಚಿದ್ದ. ಘಟನೆಯಲ್ಲಿ ಮೂವರು ವಿದ್ಯಾರ್ಥಿನಿಯರಿಗೆ ಸುಟ್ಟ ಗಾಯವಾಗಿತ್ತು. ಈ ಪೈಕಿ ಇಬ್ಬರು ವಿದ್ಯಾರ್ಥಿನಿಯರಿಗೆ ಸುಟ್ಟ ಗಾಯದ ಪ್ರಮಾಣ ಕಡಿಮೆಯಾಗಿತ್ತು. ಇವರಿಬ್ಬರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಗಂಭೀರ ಗಾಯವಾಗಿರುವ ಈಕೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಮೂವರು ವಿದ್ಯಾರ್ಥಿನಿಯರೂ ಸಿಇಟಿ ಪರೀಕ್ಷೆ ಬರೆಯಲು ಅರ್ಜಿ ಸಲ್ಲಿಸಿದ್ದು, ಅವರಿಗಾಗಿ ಪುತ್ತೂರಿನಲ್ಲಿ ಪರೀಕ್ಷಾ ಕೇಂದ್ರ ನಿಗದಿಯಾಗಿತ್ತು, ಆದರೆ ಗಂಭೀರ ಸುಟ್ಟ ಗಾಯಗಳೊಂದಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತೆ ಪಡೆಯುತ್ತಿದ್ದ ಓರ್ವ ವಿದ್ಯಾರ್ಥಿನಿಗೆ ದೂರ ಪ್ರಯಾಣ ಸಮಸ್ಯೆಯಾಗಬಹುದು ಎಂದು ವೈದ್ಯರು ತಿಳಿಸಿದ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರವನ್ನು ಆಕೆಗೆ ಮಂಗಳೂರಿನ ಪದವಿ ಪೂರ್ವ ಕಾಲೇಜಿನಲ್ಲಿ ನಿಗದಿ ಪಡಿಸಲಾಗಿತ್ತು. ಅದರಂತೆ ಈಕೆಗೆ ಪಿ ಯು ಕಾಲೇಜಿನಲ್ಲಿ ಗುರುವಾರ ಪ್ರತ್ಯೇಕ ಕೊಠಡಿಯಲ್ಲಿ ಸಿಇಟಿಯಲ್ಲಿ ಜೀವಶಾಸ್ತ್ರ ಪರೀಕ್ಷೆ ಮತ್ತು ಶುಕ್ರವಾರ ಭತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪರೀಕ್ಷೆ ಬರೆದಳು.

ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಲ್ಲಿಯೇ ಸಿಇಟಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಈಕೆಗೆ ಚಿಕಿತ್ಸೆ ವೇಳೆ ದೂರ ಪ್ರಯಾಣ ಮಾಡದಂತೆ ಚಿಕಿತ್ಸೆ ನೀಡಿದ ವೈದ್ಯರು ಪದವಿ ಪೂರ್ವ ವಿಭಾಗದ ಉಪನಿರ್ದೇಶಕ ಸಿ.ಡಿ. ಜಯಣ್ಣ ಅವರಿಗೆ ತಿಳಿಸಿದ್ದರು. ಅದರಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಅವರ ಗಮನಕ್ಕೆ ತರಲಾಗಿದ್ದು ಅವರ ಮಾರ್ಗದರ್ಶನದಂತೆ ಆಸ್ಪತ್ರೆಯಿಂದ ಸುಮಾರು ಒಂದು ಕಿ.ಮೀ ದೂರದಲ್ಲಿರುವ ಪಡುವ ಕಾಲೇಜಿನಲ್ಲಿ ಪರೀಕ್ಷೆ ಅನುಮತಿ ನೀಡಲಾಯಿತು.

ಪಿಯು ಪೂರಕ ಪರೀಕ್ಷೆಗೆ ಅರ್ಜಿ: ಗಂಭೀರ ಗಾಯ ಪಡೆದ ಈ ಸಂತ್ರಸ್ತ ವಿದ್ಯಾರ್ಥಿನಿ ಮತ್ತು ಆಸಿಡ್ ದಾಳಿಗೊಳಗಾದ ಇನ್ನಿಬ್ಬರು ವಿದ್ಯಾರ್ಥಿನಿಯರು ಏಪ್ರಿಲ್ ೨೯ರಂದು ಪ್ರಾರಂಭವಾಗುವ ದ್ವಿತೀಯ ಪಿಯುಸಿ ಪರೀಕ್ಷೆಯ ಪೂರಕ ಪರೀಕ್ಷೆಗೆ ಅರ್ಜಿ ಹಾಕಿದ್ದಾರೆ. ಮೂವರಿಗೆ ಪರೀಕ್ಷೆ ಬರೆಯಲು ಅನುಕೂಲವಾಗುವ ಎಲ್ಲ ಸಿದ್ದತೆಗಳನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಮಾಡಿದೆ.

Share this article