ಅಧಿಕಾರ ವಿಕೇಂದ್ರಿಕರಣ, ಅಭಿವೃದ್ಧಿಗಾಗಿ ಕದಂಬ ಕನ್ನಡ ಜಿಲ್ಲೆ ಅನಿವಾರ್ಯ: ಅನಂತ ಮೂರ್ತಿ ಹೆಗಡೆ

KannadaprabhaNewsNetwork | Published : Jan 23, 2025 12:47 AM

ಸಾರಾಂಶ

ಈಗಿರುವಂತೆ ವಿಸ್ತಾರವಾದ ಜಿಲ್ಲೆಯಾದ ಕಾರಣ ಎಷ್ಟೋ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಪ್ರತಿ ಗ್ರಾಮ ತಲುಪಲು ಸಾಧ್ಯವೇ ಇಲ್ಲವಾಗಿದೆ. ಆಸ್ಪತ್ರೆ ಮಾತ್ರವಲ್ಲದೇ ಜನರಿಗಾಗಿ ಎಲ್ಲ ಇಲಾಖೆಗಳಲ್ಲಿ ಸುಧಾರಣೆ ಆಗಬೇಕಿದೆ.

ಯಲ್ಲಾಪುರ: ಅಭಿವೃದ್ಧಿಯ ಅನುಕೂಲದ ದೃಷ್ಟಿಯಿಂದ ಘಟ್ಟದ ಮೇಲಿನ ತಾಲೂಕುಗಳನ್ನು ಸೇರಿಸಿ ಕದಂಬ ಕನ್ನಡ ಜಿಲ್ಲೆಗಾಗಿ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಹಲವು ರೀತಿಯ ಅಭಿಪ್ರಾಯಗಳು ವ್ಯಕ್ತವಾದವು. ಪಟ್ಟಣದ ಅಡಿಕೆ ಭವನದಲ್ಲಿ ಜ. ೨೧ರಂದು ಹಮ್ಮಿಕೊಂಡಿದ್ದ ಜಿಲ್ಲೆಯ ವಿಭಜನೆ ಕುರಿತಾದ ಪೂರ್ವಭಾವಿ ಸಭೆಯಲ್ಲಿ ಹಲವು ಪ್ರಮುಖರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಕದಂಬ ಕನ್ನಡ ಜಿಲ್ಲೆಯ ಹೋರಾಟ ಸಮಿತಿ ಅಧ್ಯಕ್ಷ ಅನಂತ ಮೂರ್ತಿ ಹೆಗಡೆ ಮಾತನಾಡಿ, ಇದು ಜಿಲ್ಲೆಯ ವಿಭಜನೆ ಅಲ್ಲ. ಅಧಿಕಾರ ವಿಕೇಂದ್ರಿಕರಣ ಅಷ್ಟೇ. ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿಗೆ ಅನುಕೂಲವಾಗಲಿ ಎಂಬ ಉದ್ದೇಶ ಹೊಂದಿದ್ದೇವೆ. ಈಗಿರುವಂತೆ ವಿಸ್ತಾರವಾದ ಜಿಲ್ಲೆಯಾದ ಕಾರಣ ಎಷ್ಟೋ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಪ್ರತಿ ಗ್ರಾಮ ತಲುಪಲು ಸಾಧ್ಯವೇ ಇಲ್ಲವಾಗಿದೆ. ಆಸ್ಪತ್ರೆ ಮಾತ್ರವಲ್ಲದೇ ಜನರಿಗಾಗಿ ಎಲ್ಲ ಇಲಾಖೆಗಳಲ್ಲಿ ಸುಧಾರಣೆ ಆಗಬೇಕಿದೆ. ಇದಕ್ಕೆಲ್ಲ ಒಂದೇ ಉತ್ತರ ಜಿಲ್ಲೆ ವಿಭಜಿಸಿ ಹೊಸ ಜಿಲ್ಲೆಯ ರಚನೆ ಅನಿವಾರ್ಯ ಎಂದರು.ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಂಶುಪಾಲ ಶ್ರೀರಂಗ ಕಟ್ಟಿ ಮಾತನಾಡಿ, ಹೋರಾಟದ ಧುರೀಣರಲ್ಲಿ ವಿಶಾಲ ಮನೊಭಾವವಿದ್ದರೆ ಮಾತ್ರ ಹೋರಾಟಕ್ಕೆ ಯಶಸ್ಸು ಸಿಗಲು ಸಾಧ್ಯ. ಕೇವಲ ಶಿರಸಿಯನ್ನು ಕೇಂದ್ರೀಕರಿಸಿದರೆ ಹೋರಾಟದ ಶಕ್ತಿಗೆ ಬಲ ಬರುವುದಿಲ್ಲ. ಸ್ವಾರ್ಥವನ್ನು ಬದಿಗಿಟ್ಟು ಹೋರಾಟದ ರೂಪುರೇಷೆ ಮಾಡಿ ಎಂದರು.ಪ್ರಮುಖರು ಮಾತನಾಡಿ, ಜಿಲ್ಲೆ ಎರಡಾದರೆ ಕಳೆದುಕೊಳ್ಳುವುದೇನಿಲ್ಲ. ಏನಿದ್ದರೂ ಪಡೆದುಕೊಳ್ಳುವುದಾಗುತ್ತದೆ. ತಾಂತ್ರಿಕವಾಗಿ ಕಾಗದ ಪತ್ರದ ಕಾರಣಕ್ಕಾಗಿ ಜಿಲ್ಲೆ ಬೇರಾಗುತ್ತದೆಯೇ ಹೊರತು ಸಂಬಂಧಗಳು ದೂರಾಗಬಾರದು. ಭಾವನೆಗಳು ಬದಲಾಗವು. ಹೋರಾಟದ ಛಲವಿಲ್ಲದ ಕಾರಣ ಯಶಸ್ವಿಯಾಗಿಲ್ಲ. ಜಿಲ್ಲೆಯ ಘೋಷಣೆ ಮೊದಲು ಆಗಲಿ, ಜಿಲ್ಲಾ ಕೇಂದ್ರ ನಂತರ ತೀರ್ಮಾನಿಸೋಣ ಎಂದು ಬಹುತೇಕರು ಅಭಿಪ್ರಾಯ ವ್ಯಕ್ತಪಡಿಸಿದರು.ಪ್ರಮುಖರಾದ ಡಿ. ಶಂಕರ ಭಟ್ಟ, ಎಂ.ಆರ್. ಹೆಗಡೆ, ಆರ್.ಎನ್. ಭಟ್ಟ ದುಂಡಿ, ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ, ಉಮೇಶ ಭಾಗ್ವತ್, ಡಿ.ಎನ್. ಗಾಂವ್ಕರ್, ಗಣೇಶ ಹೆಗಡೆ, ರವಿ ಕೈಟ್ಕರ್, ಆರ್.ಜಿ. ಹೆಗಡೆ ಬೆದೆಹಕ್ಕಲು, ಗುರು ಭಟ್ಟ, ಗೋಪಾಲಕೃಷ್ಣ ಗಾಂವ್ಕರ್, ವೆಂಕಟ್ರಮಣ ಕಾರೆಮನೆ, ಪ್ರಸಾದ ಹೆಗಡೆ, ವಿ.ಎಂ. ಹೆಗಡೆ, ಮಹೇಶ ದೇಸಾಯಿ, ಫಕೀರಪ್ಪ ಭೋವಿವಡ್ಡರ್, ಶಿವಾನಂದ ದೇಶಹಳ್ಳಿ, ವಿಶ್ವೇಶ್ವರ ಜೋಶಿ, ಎಸ್.ವಿ. ಭಟ್ಟ, ರವಿ ಹೆಗಡೆ ಸಲಹೆ ಸೂಚನೆ ನೀಡಿದರು. ರಾಘವೇಂದ್ರ ಭಟ್ಟ ಹಾಸಣಗಿ ಸ್ವಾಗತಿಸಿದರು. ಎಂ.ಎಂ. ಭಟ್ಟ ಬಕ್ಕಳ ಪ್ರಾಸ್ತಾವಿಕವಾಗಿ ಮಾತನಾಡಿ, ನಿರೂಪಿಸಿದರು.ನಿರ್ಣಯಗಳುಕದಂಬ ಕನ್ನಡ ಜಿಲ್ಲೆಗಾಗಿ ಹೋರಾಟವನ್ನು ತೀವ್ರಗೊಳಿಸಬೇಕು

ಪ್ರತಿ ಗ್ರಾಮ ಮಟ್ಟದಲ್ಲಿ ಸಭೆ ನಡೆಸಿ ಸಂಘಟನೆ ಬಲಪಡಿಸಬೇಕು

ಮೆರವಣಿಗೆ, ಪ್ರತಿಭಟನೆಗಳ ಮೂಲಕ ಸರ್ಕಾರದ ಗಮನ ಸೆಳೆಯಬೇಕು

Share this article