ಕಡಿಯತ್ ನಾಡ್ ಕಪ್ ಹಾಕಿ: ಕಿರುಂದಾಡು ಚಾಂಪಿಯನ್‌

KannadaprabhaNewsNetwork |  
Published : Nov 25, 2024, 01:01 AM IST
*ಕರಡದಲ್ಲಿ ದ್ವಿತೀಯ ವರ್ಷದ ಕಡಿಯತ್ ನಾಡ್ ಕಪ್ ಹಾಕಿ ಪಂದ್ಯಾಟಕ್ಕೆ ವರ್ಣ ರಂಜಿತಾ ತೆರೆ**ಕಡಿಯತ್ ನಾಡ್ ಕಪ್ ಕಿರುಂದಾಡು ಚಾಂಪಿಯನ್**ಬಲಮುರಿ ರನ್ನರ್ಸ್* | Kannada Prabha

ಸಾರಾಂಶ

ಕಡಿಯತ್‌ನಾಡ್‌ ಕಪ್‌ ಹಾಕಿ ಪಂದ್ಯಾಟದ ಫೈನಲ್‌ನಲ್ಲಿ ಕಿರುಂದಾಡು ತಂಡ ಚಾಂಪಿಯನ್‌ ಪಟ್ಟ ಅಲಂಕರಿಸಿತು.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ಕೊಡವ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್ ಕರಡ ವತಿಯಿಂದ ಆಯೋಜಿಸಲಾದ ದ್ವಿತೀಯ ವರ್ಷದ ಕಡಿಯತ್ ನಾಡ್ ಕಪ್ ಹಾಕಿ ಪಂದ್ಯಾಟದ ಫೈನಲ್‌ನಲ್ಲಿ ಕಿರುಂದಾಡು ತಂಡ, ಬಲಮುರಿ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಸೋಲಿಸಿ ಚಾಂಪಿಯನ್‌ಪಟ್ಟ ಅಲಂಕರಿಸಿತು.

ಕರಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಫೈನಲ್ ಪಂದ್ಯ ಜಿದ್ದಾಜಿದ್ದಿನಲ್ಲಿ ಕೂಡಿತ್ತು. ಎರಡು ತಂಡಗಳು ಸಮಬಲದ ಹೋರಾಟ ನಡೆಸಿತು. ಮೊದಲಾರ್ಧ ಹಾಗೂ ದ್ವಿತೀಯಾರ್ಧದಲ್ಲಿ ಇತ್ತಂಡಗಳಿಗೆ ಗೋಲುಗಳಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಫಲಿತಾಂಶಕ್ಕೆ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಶೂಟೌಟ್‌ನಲ್ಲಿ ಕಿರುಂದಾಡು ತಂಡ, ಬಲಮುರಿ ತಂಡವನ್ನು 6-5 ಅಂತರದಿಂದ ಮಣಿಸಿ ಕಪ್‌ ಎತ್ತಿ ಹಿಡಿಯಿತು.

ಇದಕ್ಕೂ ಮೊದಲು ತೃತೀಯ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಪಾಲಂಗಾಲ ತಂಡ, ಕೈಕಾಡು ತಂಡವನ್ನು 5-4 ಗೋಲುಗಳಿಂದ ಸೋಲಿಸಿ ತೃತೀಯ ಸ್ಥಾನ ಪಡೆಯಿತು.

ಚಾಂಪಿಯನ್ ಕಿರುಂದಾಡು ತಂಡಕ್ಕೆ ನಗದು ಹಾಗೂ ಆಕರ್ಷಕ ಟ್ರೋಫಿ, ರನ್ನರ್ಸ್ ಬಲಮುರಿ ತಂಡಕ್ಕೆ ನಗದು ಹಾಗೂ ಆಕರ್ಷಕ ಟ್ರೋಫಿ, ತೃತೀಯ ಸ್ಥಾನ ಪಡೆದ ಪಾಲಂಗಾಲ ತಂಡಕ್ಕೆ ನಗದು ಹಾಗೂ ಟ್ರೋಫಿ, ನಾಲ್ಕನೇ ಸ್ಥಾನ ಪಡೆದ ಕೈಕಾಡು ತಂಡಕ್ಕೆ ನಗದು ಬಹುಮಾನ ನೀಡಲಾಯಿತು.

* ವೈಯಕ್ತಿಕ ಬಹುಮಾನ

ಪಂದ್ಯ ಪುರುಷ ಪ್ರಶಸ್ತಿಯನ್ನು ಕಿರುಂದಾಡು ತಂಡದ ಐನಂಡ ನಿಯೋನ್ ನಾಚಪ್ಪ, ಬೆಸ್ಟ್ ಗೋಲ್ ಕೀಪರ್ ಪ್ರಶಸ್ತಿಯನ್ನು ಕಿರುಂದಾಡು ತಂಡದ ಮನು, ಬೆಸ್ಟ್ ಫುಲ್ ಬ್ಯಾಕ್ ಪ್ರಶಸ್ತಿಯನ್ನು ಪಾಲಂಗಾಲ ತಂಡದ ಸಚಿನ್ ಸೋಮಣ್ಣ, ಬೆಸ್ಟ್ ಫಾರ್ವರ್ಡ್ ಪ್ರಶಸ್ತಿಯನ್ನು ಕೈಕಾಡು ತಂಡದ ನೀರಣ್, ಬೆಸ್ಟ್ ಮಿಡ್ ಫೀಲ್ಡರ್ ಪ್ರಶಸ್ತಿಯನ್ನು ಬಲಮುರಿ ತಂಡದ ಪೂವಣ್ಣ ಪಡೆದುಕೊಂಡರು.

*ವಿಶೇಷ ಬಹುಮಾನ

ಚಾಂಪಿಯನ್ ಕಿರುಂದಾಡು ತಂಡಕ್ಕೆ ಹಾಗೂ ರನ್ನರ್ಸ್ ಬಲಮುರಿ ತಂಡಕ್ಕೆ ಐತಿಚಂಡ ಪ್ರಕಾಶ್ ಕಾರ್ಯಪ್ಪ, ಬೃಹತ್ ಗಾತ್ರದ ನಾಟಿ ಕೋಳಿಯನ್ನು ವಿಶೇಷ ಬಹುಮಾನವಾಗಿ ನೀಡಿದರು.

ತೀರ್ಪುಗಾರರಾಗಿ ಚೆಯ್ಯಂಡ ಲವ ಅಪ್ಪಚ್ಚು, ಚೋಯಮಾಡಂಡ ಚಂಗಪ್ಪ, ಕರವಂಡ ಅಪ್ಪಣ್ಣ, ವಿನೋದ್, ಅಪ್ಪಚೋಟೋಳಂಡ ಅಯ್ಯಪ್ಪ, ಪಟ್ರಪಂಡ ಮಂದಣ್ಣ ಕಾರ್ಯನಿರ್ವಹಿಸಿದರು. ಚೆಪ್ಪುಡಿರ ಕಾರ್ಯಪ್ಪ ಹಾಗೂ ವಿಲಿನ್ ವೀಕ್ಷಕ ವಿವರಣೆ ನೀಡಿದರು.

ಫೈನಲ್ ಪಂದ್ಯ ಉದ್ಘಾಟನೆ, ಸಮಾರೋಪ ಸಮಾರಂಭ

ಫೈನಲ್ ಪಂದ್ಯಾಟವನ್ನು ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡಂಡ ಸುದು ಬೋಪ್ಪಣ್ಣ ಉದ್ಘಾಟಿಸಿದರು.

ಕರಡ ಕೊಡವ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಬೇಪಡಿಯಂಡ ಎಸ್.ಬಿದ್ದಪ್ಪ ಅಧ್ಯಕ್ಷತೆ ಸಮಾರೋಪ ನಡೆಯಿತು.

ಸಮಾರಂಭದಲ್ಲಿ ಪಾಂಡಂಡ ಮೊಣ್ಣಪ್ಪ ಮಾತನಾಡಿ, ಚಿಕ್ಕ ಕರಡ ಗ್ರಾಮವನ್ನು ವಿಶ್ವಕ್ಕೆ ಪರಿಚಯಿಸಿದ್ದು, ಪಾಂಡಂಡ ಕುಟ್ಟಪ್ಪನವರು. ಈ ಮೈದಾನದಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಗಳಿಸಿದ ಎಷ್ಟೋ ಕ್ರೀಡಾಪಟುಗಳು ಇದ್ದಾರೆ. ಅದಕ್ಕೆಲ್ಲ ಕೊಡವ ಕೌಟುಂಬಿಕ ಹಾಕಿ ಜನಕ ಕುಟ್ಟಪ್ಪ ಕಾರಣ ಎಂದರು.

ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಸುದು ಬೋಪ್ಪಣ್ಣ ಮಾತನಾಡಿ, ಇಲ್ಲಿ ಆಯೋಜಿಸಿರುವಂತಹ ಹಾಕಿ ಕ್ರೀಡಾಕೂಟವು ಪ್ರತಿ ವರ್ಷವೂ ನಡೆಯುವಂತಾಗಬೇಕು. ಕರಡ ಕೊಡವ ಕಲ್ಚರಲ್ ಮತ್ತು ರಿಕ್ರಿಯೇಶನ್ ಕ್ಲಬ್‌ನವರು ಕೊಡವ ಹಾಕಿ ನಮ್ಮೆಯ ಸ್ಥಾಪಕರಾದ ಪಾಂಡಂಡ ಕುಟ್ಟಣಿ ಅವರ ಪುತ್ಥಳಿಯನ್ನು ಸ್ಥಾಪಿಸಲು ಉದ್ದೇಶಿಸಿರುವುದು ಬಹಳ ಸಂತಸದ ವಿಷಯ ಎಂದರು.

ಕೊಡವ ಕಲ್ಚರಲ್ ಅಂಡ್ ರಿಕ್ರಿಯೇಷನ್ ಕ್ಲಬ್ ಕ್ರೀಡಾ ಸಮಿತಿ ಅಧ್ಯಕ್ಷ ಮೇದುರ ಗಣು ಕುಶಾಲಪ್ಪ, ಬೋವೈರಿಯಂಡ ನಾಚಪ್ಪ, ನಂಬಿಯಪಂಡ ಬನು ಅಪ್ಪಣ್ಣ, ಕರಡ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಲೀಲಾವತಿ ಹಾಗೂ ಸಾಮಾಜಿಕ ರಾಜ್ಯಕೀಯ ನೇತಾರರು ಪಾಲ್ಗೊಂಡಿದರು.

ವಿಜೇತ ತಂಡಕ್ಕೆ ಅತಿಥಿಗಳು ಬಹುಮಾನ ವಿತರಿಸಿದರು.

ಕ್ಲಬ್ ಉಪಾಧ್ಯಕ್ಷ ಐತಿಚಂಡ ಬಿಮ್ಮಯ್ಯ, ಕಾರ್ಯದರ್ಶಿ ಬೇಪಡಿಯಂಡ ವಿಲಿನ್, ಕೋಶಾಧಿಕಾರಿ ಐತಿಚಂಡ ಪ್ರಕಾಶ್ ಕಾರ್ಯಪ್ಪ, ಕ್ಲಬ್‌ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಮತ್ತಿತರರಿದ್ದರು.

ಲೀಲಾವತಿ ಪ್ರಾರ್ಥಿಸಿದರು. ಕೋಡಿರ ವಿನೋದ್ ನಾಣಯ್ಯ ಸ್ವಾಗತಿಸಿದರು. ಬೇಪಡಿಯಂಡ ವಿಲಿನ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೀದಿ ನಾಯಿ ಮರಿ ದತ್ತು ಪಡೆದು ಮಾನವೀಯತೆ ತೋರಿ
5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಕಡ್ಡಾಯ