ಅಡಿಕೆ ಸೇವನೆಯು ಮಾನವನ ಆರೋಗ್ಯಕ್ಕೆ ಹಾನಿಕಾರಕವೇ ಎಂಬ ಮಹತ್ವದ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿರುವ ಹಿನ್ನೆಲೆ ಮನವಿ
ಶಿರಸಿ:ಅಡಿಕೆ ಸೇವನೆಯು ಮಾನವನ ಆರೋಗ್ಯಕ್ಕೆ ಹಾನಿಕಾರಕವೇ ಎಂಬ ಮಹತ್ವದ ಪ್ರಕರಣವು ಈ ತಿಂಗಳು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿರುವ ಹಿನ್ನೆಲೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕೇಂದ್ರ ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ದೇವೇಶ್ ಚತುರ್ವೇದಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.ಅಡಿಕೆ ಕುರಿತಂತೆ ವೈಜ್ಞಾನಿಕ ದತ್ತಾಂಶದ ಆಧಾರದ ಮೇಲೆ ನ್ಯಾಯಾಲಯವು ಸೂಕ್ತ ನಿರ್ಧಾರ ಕೈಗೊಳ್ಳಲು ಮತ್ತು ರೈತರ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ, ಈ ಪ್ರಕರಣದ ವಿಚಾರಣೆಯನ್ನು ಮುಂದೂಡಲು ಅಥವಾ ವಿಚಾರಣೆ ನಡೆಸದಂತೆ ಮನವರಿಕೆ ಮಾಡಿಕೊಡಲು ಕೃಷಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ವಿಷಯದ ಕುರಿತು ಈಗಾಗಲೇ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಜ್ಞರ ಸಮಿತಿಯನ್ನು ರಚಿಸಿದ್ದಾರೆ. ಈ ಸಮಿತಿಯು ವೈಜ್ಞಾನಿಕ ಆಧಾರದ ಮೇಲೆ ವರದಿಯನ್ನು ಸಿದ್ಧಪಡಿಸಲಿದೆ. ತಜ್ಞರ ಸಮಿತಿಯ ವರದಿ ಲಭ್ಯವಾಗುವವರೆಗೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿರುವ ಈ ಪ್ರಕರಣದ ವಿಚಾರಣೆಯನ್ನು ಮುಂದೂಡುವಂತೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ಕೃಷಿ ಇಲಾಖೆ ಮಧ್ಯಪ್ರವೇಶಿಸುವುದು ಅತ್ಯಗತ್ಯ ಎಂದು ಸಂಸದರು ತಿಳಿಸಿ, ಕೃಷಿ ಇಲಾಖೆಯ ಈ ಮಧ್ಯಪ್ರವೇಶವು ರೈತರ ಹಿತಾಸಕ್ತಿಯನ್ನು ಕಾಪಾಡಲು ಮತ್ತು ನ್ಯಾಯಾಲಯಕ್ಕೆ ನಿಖರವಾದ ವೈಜ್ಞಾನಿಕ ದತ್ತಾಂಶ ಒದಗಿಸಲು ಸಹಾಯ ಮಾಡುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ, ಕೇಂದ್ರ ಕೃಷಿ ಇಲಾಖೆಯು ಶೀಘ್ರವಾಗಿ ಈ ನಿಟ್ಟಿನಲ್ಲಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಂಸದ ಕಾಗೇರಿ ಅವರು ಪ್ರಧಾನ ಕಾರ್ಯದರ್ಶಿ ಡಾ.ದೇವೇಶ್ ಚತುರ್ವೇದಿ ಅವರನ್ನು ಒತ್ತಾಯಿಸಿದರು.