ಹುಬ್ಬಳ್ಳಿ: ಅಣ್ಣಿಗೇರಿ ಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆಯಿಂದ ಆದ ಹಾನಿಯನ್ನು ಪ್ರಭಾರ ಜಿಲ್ಲಾಧಿಕಾರಿಯೂ ಆಗಿರುವ ಜಿಪಂ ಸಿಇಒ ಭುವನೇಶ ಪಾಟೀಲ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಜಲಾವೃತವಾಗಿರುವ ಅಣ್ಣಿಗೇರಿಯ ಸುರಕೋಡ ಬಡಾವಣೆಗೆ ಭೇಟಿ ನೀಡಿ ಪರಿಶೀಲಿಸಿ ನಿವಾಸಿಗಳೊಂದಿಗೆ ಚರ್ಚಿಸಿದರು. ತಹಸೀಲ್ದಾರ್ ಹಾಗೂ ಪುರಸಭೆ ಅಧಿಕಾರಿಗಳಿಗೆ ಬಡಾವಣೆ ಮೂಲ ನಕ್ಷೆಯನ್ನು ಪರಿಶೀಲಿಸಿ, ರಾಜಕಾಲುವೆ ಹಾಗೂ ಚರಂಡಿ ಒತ್ತುವರಿ ತೆರವುಗೊಳಿಸಬೇಕು. ಬಡಾವಣೆಗೆ ಬರುವ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥಿತ ಯೋಜನೆ ರೂಪಿಸಿ ಕಾಮಗಾರಿ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಕ್ರಿಯಾ ಯೋಜನೆ ಹಾಗೂ ಪ್ರಸ್ತಾವನೆ ರೂಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.ನಂತರ ಅವರು ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆ ಪರಿಶೀಲಿಸಿದರು. ಈ ವೇಳೆ ಸಾರ್ವಜನಿಕರು ಮಾತನಾಡಿ, ರಸ್ತೆಯ ಪಕ್ಕದಲ್ಲಿ ಒಳಚರಂಡಿ ಕಿರಿದಾಗಿದ್ದು, ಹೂಳು ತುಂಬಿ ನೀರು ಹೊರಬರುತ್ತದೆ. ಅಣ್ಣಿಗೇರಿ ಪಟ್ಟಣದ ಸುತ್ತಲಿನ ಹಳ್ಳಿಗಳ ಜಮೀನುಗಳ ನೀರು ಪಟ್ಟಣಕ್ಕೆ ಬರುತ್ತದೆ. ಇದರಿಂದಾಗಿ ಹೆಚ್ಚು ಹಾನಿ ಆಗುತ್ತಿದೆ. ರಾಜ ಕಾಲುವೆಗೆ ಮಳೆ ನೀರು ಹರಿದು ಹೋಗಲು ಶಾಶ್ವತ ಪರಿಹಾರ ನೀಡಬೇಕು. ಅಲ್ಲದೇ ರಾಜ ಕಾಲುವೆಯ ಅಗಲೀಕರಣ ಮಾಡಬೇಕು ಎಂದು ಮನವಿ ಮಾಡಿದರು.
ಮಳೆಯಿಂದಾಗಿ 8 ಮನೆಗಳಿಗೆ ಭಾಗಶಃ ಹಾನಿ ಹಾಗೂ ಸಿಡಿಲು ಬಡಿದು 7 ಕುರಿಗಳು ಅಸು ನೀಗಿರುವ ಕುರಿತು ಮಾಹಿತಿ ನೀಡಿದ ಜಿಪಂ ಸಿಇಒ, ಈ ಕುರಿತು ಅಧಿಕಾರಿಗಳು ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ. ಹಾನಿಗೆ ಅನುಗುಣವಾಗಿ ಸರ್ಕಾರದ ನಿಯಮಾನುಸಾರ ಪರಿಹಾರ ಬಿಡುಗಡೆ ಮಾಡುವುದಾಗಿ ತಿಳಿಸಿದರು.ಅಣ್ಣಿಗೇರಿ ತಾಲೂಕಿನ ಸೈದಾಪುರ ಮತ್ತು ಹೊಸಳ್ಳಿ ಸಂಪರ್ಕಿಸುವ ಹೊರೆಹಳ್ಳದ ಕಿರು ಸೇತುವೆ ಮಳೆಗೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಇದು ಜಿಪಂ ರಸ್ತೆಯಾಗಿದ್ದು, ಸೇತುವೆ ನಿರ್ಮಾಣಕ್ಕೆ ತಕ್ಷಣ ಕ್ರಿಯಾ ಯೋಜನೆ ರೂಪಿಸಿ, ಸಲ್ಲಿಸುವಂತೆ ಅವರು ಸಂಬಂಧಿಸಿದ ಎಂಜಿನಿಯರ್‌ಗೆ ಸೂಚಿಸಿದರು. ಬಳಿಕ ಹಳ್ಳಿಕೇರಿ - ಇಬ್ರಾಹಿಂಪುರ ರಸ್ತೆ ಸಂಪರ್ಕ ರಸ್ತೆ ಹಾನಿಯಾದ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ವೇಳೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಅಣ್ಣಿಗೇರಿ ತಹಸೀಲ್ದಾರ್ ಮಂಜುನಾಥ ದಾಸಪ್ಪನವರ, ತಾಪಂ ಇಒ ಐ.ಎ. ಬಡೇಖಾನ, ಪುರಸಭೆ ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡರ, ಕಂದಾಯ ಅಧಿಕಾರಿ ರಿಷಿಕುಮಾರ ಸಾರಂಗಿ, ಗ್ರಾಮ ಲೆಕ್ಕಾಧಿಕಾರಿ ಎಂ.ಎಸ್. ಪಾಟೀಲ ಇದ್ದರು.ತುರ್ತು ಪರಿಹಾರ ಕ್ರಮ ಕೈಗೊಳ್ಳಿ: ಶಾಸಕ ಕೋನರಡ್ಡಿ
ಹುಬ್ಬಳ್ಳಿ: ಅಣ್ಣಿಗೇರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಪಟ್ಟಣದ ವಿವಿಧ ಬಡಾವಣೆಗಳಿಗೆ ಮಳೆನೀರು ಹರಿದು ನುಗ್ಗಿ ತೊಂದರೆ ಉಂಟಾದ ಹಿನ್ನೆಲೆಯಲ್ಲಿ ಗುರುವಾರ ಶಾಸಕ ಎನ್.ಎಚ್. ಕೋನರಡ್ಡಿ ಭೇಟಿ ನೀಡಿ ಪರಿಶೀಲಿಸಿದರು.ಜಲಾವೃತವಾಗಿರುವ ಸುರಕೋಡ ಬಡಾವಣೆ, ರಾಜರಾಜೇಶ್ವರಿ ಬಡಾವಣೆ ಮತ್ತು ಜೆ.ಎಸ್.ಎಸ್. ಕಾಲನಿಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಶಾಸಕರು ಸಾರ್ವಜನಿಕರ ಅಹವಾಲು ಆಲಿಸಿದರು. ಬಡಾವಣೆಗಳಿಂದ ನೀರು ಹೊರಹಾಕಲು ತಕ್ಷಣ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಮಳೆಯಿಂದಾಗಿ ಅಣ್ಣಿಗೇರಿ ಪಟ್ಟಣ ಹಾಗೂ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಭಾಗಶಃ ಹಾನಿ ಆಗಿರುವ ಮನೆಗಳ ಸಮೀಕ್ಷೆ ಮಾಡಿ ತಕ್ಷಣ ಸರ್ಕಾರದ ಆದೇಶದಂತೆ ಪರಿಹಾರ ಬಿಡುಗಡೆ ಮಾಡಲು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.ಅಣ್ಣಿಗೇರಿ ಪಟ್ಟಣದ ಅನೇಕ ಲೇಔಟ್‌ಗಳಲ್ಲಿ ರಸ್ತೆ, ಚರಂಡಿಗಳ ಒತ್ತುವರಿ ಹಾಗೂ ಪಟ್ಟಣದ ವಿವಿಧೆಡೆ ರಾಜಕಾಲುವೆಗಳ ಒತ್ತುವರಿ ಆಗಿರುವ ಬಗ್ಗೆ ಸಾರ್ವಜನಿಕ ದೂರುಗಳಿವೆ. ಒತ್ತುವರಿಗಳಿಂದಾಗಿ ಮಳೆ ನೀರು, ಚರಂಡಿ ನೀರು ಸರಾಗವಾಗಿ ಹರಿದು ಹೋಗಲು ಸಮಸ್ಯೆ ಆಗುತ್ತಿದೆ. ಈ ಕುರಿತು ಪುರಸಭೆಯಿಂದ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.