ತಂಬಾಕು ರೈತರ ಏಳಿಗೆಗಾಗಿ ಮಂಡಳಿ ನಿರಂತರವಾಗಿ ಶ್ರಮಿಸುತ್ತಿದೆ

KannadaprabhaNewsNetwork | Published : Jan 8, 2025 12:15 AM

ಸಾರಾಂಶ

ತಂಬಾಕು ಮಂಡಳಿ 1976 ರ ಜನವರಿ 1 ರಂದು ರಚನೆಯಾಗಿದೆ. ಅಂದಿನಿಂದ ತಂಬಾಕು ರೈತರ ಅಭಿವೃದ್ಧಿಗಾಗಿ ಮಂಡಳಿ ನಿರಂತರವಾಗಿ ಶ್ರಮಿಸುತ್ತಿದೆ.

ಕನ್ನಡಪ್ರಭ ವಾರ್ತೆ ರಾವಂದೂರು

ತಂಬಾಕು ಬೆಳೆಗಾರರಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು ಒದಗಿಸುವ ನಿಟ್ಟಿನಲ್ಲಿ ಹಾಗೂ ರಫ್ತು ಉತ್ತೇಜಿಸುವ ಮೂಲಕ ತಂಬಾಕು ರೈತರ ಏಳಿಗೆಗಾಗಿ ಮಂಡಳಿ ನಿರಂತರವಾಗಿ ಶ್ರಮಿಸುತ್ತಿದೆ ಎಂದು ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ ಲಕ್ಷ್ಮಣ್ ರಾವ್ ಹೇಳಿದರು.

ಹೋಬಳಿಯ ಕಗ್ಗುಂಡಿ ತಂಬಾಕು ಹರಾಜು ಮಂಡಳಿಯ ರೈತ ಭವನದಲ್ಲಿ ಆಯೋಜಿಸಿದ್ದ ತಂಬಾಕು ಮಂಡಳಿ ಸಂಸ್ಥಾಪನಾ ದಿನೋತ್ಸವದಲ್ಲಿ ಅವರು ಮಾತನಾಡಿದರು.

ತಂಬಾಕು ಮಂಡಳಿ 1976 ರ ಜನವರಿ 1 ರಂದು ರಚನೆಯಾಗಿದೆ. ಅಂದಿನಿಂದ ತಂಬಾಕು ರೈತರ ಅಭಿವೃದ್ಧಿಗಾಗಿ ಮಂಡಳಿ ನಿರಂತರವಾಗಿ ಶ್ರಮಿಸುತ್ತಿದೆ. ರೈತರು ಮತ್ತು ಕಂಪನಿಗಳ ನಡುವೆ ಸಂಪರ್ಕ ಸೇತುವೆಯಾಗಿ ರೈತರ ಜೀವನ ಮಟ್ಟವನ್ನು ಉತ್ತಮಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ತಂಬಾಕು ರೈತರ ಅಗತ್ಯತೆಗಳನ್ನು ಮನಗಂಡು ಜೀವ ವಿಮೆಯಲ್ಲಿ ಹೆಚ್ಚಳ, ಬಿತ್ತನೆ ಬೀಜ ವಿತರಣೆ, ನಿಗದಿತ ಅವಧಿಯಲ್ಲಿ ರಸಗೊಬ್ಬರ ಕೊಡಿಸುವ ನಿಟ್ಟಿನಲ್ಲಿ ಮಂಡಳಿ ಕಾರ್ಯಪ್ರವೃತ್ತವಾಗಿದೆ ಎಂದು ಅವರು ತಿಳಿಸಿದರು.

ಸಿಟಿಆರ್.ಐ ವಿಜ್ಞಾನಿ ರಾಮಕೃಷ್ಣ ಮಾತನಾಡಿ, ರೈತರು ಆಧುನಿಕ ಕೃಷಿ ಪದ್ಧತಿಯನ್ನು ಅನುಸರಿಸಿ ತಂಬಾಕು ಬೆಳೆಯಲು ಮುಂದಾಗಬೇಕು.ಆಗ ಮಾತ್ರ ಹೆಚ್ಚು ಲಾಭಗಳಿಸಲು ಸಾಧ್ಯ . ಈ ನಿಟ್ಟಿನಲ್ಲಿ ರೈತರು ನಾಟಿ ಹಂತದಲ್ಲಿಯೇ ಆರೋಗ್ಯವಂತ ಸಸಿಗಳ ಆಯ್ಕೆಗೆ ಆದ್ಯತೆ ನೀಡಬೇಕು ಜೊತೆಗೆ ಪ್ರತಿ ವರ್ಷ ಮಣ್ಣು ಪರೀಕ್ಷೆಯನ್ನು ಕಡ್ಡಾಯವಾಗಿ ಎಲ್ಲರೂ ಮಾಡಿಸಿಕೊಳ್ಳಬೇಕು. ಇದರಿಂದ ಬೆಳೆಗಳಿಗೆ ಅಗತ್ಯವಿರುವ ಪೋಷಕಾಶಗಳನ್ನು ನೀಡಲು ಸಹಾಯವಾಗುತ್ತದೆ ಎಂದರು.

ತಂಬಾಕು, ಸಿಟಿಆರ್.ಐ ವಿಜ್ಞಾನಿ ರಾಮಕೃಷ್ಣ, ತಂಬಾಕು ಮಂಡಳಿ ಸದಸ್ಯರಾದ ಎಚ್.ಸಿ. ಬಸವರಾಜ್, ವಿಕ್ರಂರಾಜಗೌಡ, ತಂಬಾಕು ಮಂಡಳಿ ಹರಾಜು ಅಧೀಕ್ಷಕ ಪ್ರಭಾಕರನ್, ಐಸಕ್ ವರ್ಣಿತ್, ರಾಮ್ ಮೋಹನ್ ಚೂರಿ, ಸಿದ್ದರಾಜು, ಸಿದ್ದರಾಮು ಡಾಘೆ ,ವಿಜಯಕುಮಾರ್, ತಂಬಾಕು ರೈತರು, ವರ್ತಕರು, ಮಂಡಳಿಯ ಸಿಬ್ಬಂದಿ ಇದ್ದರು.

Share this article