ಕನ್ನಡಪ್ರಭ ವಾರ್ತೆ ಸಾಗರ
ಪಟ್ಟಣದ ಗಾಂಧಿ ಮೈದಾನದಲ್ಲಿ ಭಾನುವಾರ ನಾಗರೀಕ ಅಭಿನಂದನಾ ಸಮಿತಿ ನೇತೃತ್ವದಲ್ಲಿ ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮತ್ತು ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾದ ಮತ್ತಿಕೊಪ್ಪ ಹರನಾಥ ರಾವ್ ಅವರಿಗೆ ಏರ್ಪಡಿಸಿದ್ದ ನಾಗರೀಕ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಗೋಡು ತಿಮ್ಮಪ್ಪ ಅವರು ಸಾಮಾನ್ಯ ಕುಟುಂಬದಿಂದ ಬಂದು ಲೋಹಿಯಾ, ಗೋಪಾಲಗೌಡರ ಸಿದ್ಧಾಂತ ಆದರ್ಶಗಳ ಮೂಲಕ ಹೋರಾಟದ ಕಿಚ್ಚಿನಲ್ಲಿ ಬೆಳೆದು ಸಮಾಜದ ಆಸ್ತಿಯಾಗಿದ್ದಾರೆ. ಅಲ್ಲದೇ, ಕಗ್ಗದ ಮಾತಿನಂತೆ ದೀನ ದುರ್ಬಲರಿಗೆ ಕಲ್ಲು ಸಕ್ಕರೆಯಂತಿದ್ದರು. ಅವರ ಹೋರಾಟ, ಸಾಧಿಸುವ ಹಠ, ನೇರ ನಡೆ- ನುಡಿ ನಾವೆಲ್ಲ ಕಲಿಯಬೇಕಾದ ಪಾಠವಾಗಿದೆ. ಸಮಾಜವಾದ, ಸಾಮಾಜಿಕ ನ್ಯಾಯಧರ್ಮ ನಿರಪೇಕ್ಷೆ ಮನಸ್ಥಿತಿ ನಾಯಕರಿಗೆ ಇರಬೇಕು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಸಾಮಾಜಿಕ ನ್ಯಾಯದ ಕುರಿತಾಗಿ ಹಲವರಿಗೆ ತಪ್ಪು ಕಲ್ಪನೆಗಳಿವೆ. ಮೇಲ್ವರ್ಗದ ವಿರೋಧಿ ಎನ್ನುವ ಹಣೆಪಟ್ಟಿ ಕಟ್ಟುತ್ತಾರೆ. ಅಂಥ ವಿರೋಧವನ್ನು ಮೆಟ್ಟಿ ನಿಂತು, ತಮ್ಮ ಜೀವಮಾನದ ಉದ್ದಕ್ಕೂ ಕಾಗೋಡು ಜನರಿಗಾಗಿಯೇ ಹೋರಾಟ ನಡೆಸಿದ್ದಾರೆ. ಅದನ್ನು ಮಾಡಿದ್ದರಿಂದಲೇ ಸಮಾಜದಲ್ಲಿ ಬದಲಾವಣೆ ಸಾಧ್ಯವಾಯಿತು ಎಂದರು.ಸಹಕಾರ ರತ್ನ ಪ್ರಶಸ್ತಿ ಪಡೆದಿರುವ ಹರನಾಥ ರಾವ್ ಅವರು ಕೈ-ಬಾಯಿ ಸ್ವಚ್ಛವಾಗಿಟ್ಟುಕೊಂಡವರು. ತಮ್ಮ ಕೈಲಿದ್ದುದನ್ನು ಕಳೆದುಕೊಂಡು ಸಾಲಗಾರರೇ ಆಗಿದ್ದರು. ಆದರೂ ಸಮಾಜಕ್ಕಾಗಿ ತಾವು ನಂಬಿದ ಆದರ್ಶಕ್ಕಾಗಿ ಹೋರಾಡುವ ಛಾತಿಯನ್ನು ಬಿಡಲಿಲ್ಲ. ಬರಿಗಾಲ ಫಕೀರನಾದರೂ ಸಂಘಟನಾ ಶಕ್ತಿ ಇದೆ. ಅಡಕೆ ಬೆಳೆಗಾರರ ಪರವಾಗಿ, ಆಗಬೇಕಿರುವ ಬದಲಾವಣೆಗಳನ್ನು ಅರಿತು ಸಮಾಜಮುಖಿಯಾಗಿ ಕೆಲಸ ಮಾಡಿದ್ದರ ಫಲವನ್ನು ಇಂದು ನಾವೆಲ್ಲ ಉಣ್ಣುತ್ತಿದ್ದೇವೆ. ಮುಖ್ಯವಾಗಿ ಇವರಿಬ್ಬರ ನಡೆ, ನುಡಿ ಜನಪರ ಕೆಲಸ ಮಾಡುವವರಿಗೆ ದಾರಿದೀಪ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸಚಿವ ಮಧು ಬಂಗಾರಪ್ಪ ಮಾತನಾಡಿ, ಹೋರಾಟದ ಪವಿತ್ರತೆ, ವಿಶ್ವಾಸಾರ್ಹತೆ ಉಳಿಸಿಕೊಳ್ಳುವುದು ಮಹತ್ವದ್ದಾಗಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ಅದೇ ಅವರಿಗೆ ಸಲ್ಲಿಸುವ ಅತಿದೊಡ್ಡ ಗೌರವವಾಗಿದೆ. ಇವರಿಬ್ಬರೂ ಸಮಾಜದಲ್ಲಿ ಬದಲಾವಣೆ ತರಲು ಶ್ರಮಿಸಿದವರು ಎನ್ನುವುದು ಅವರ ಕೆಲಸಗಳಿಂದ ಅರಿವಾಗುತ್ತದೆ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥಗೌಡ, ಮಾಜಿ ಸಚಿವ ಹರತಾಳು ಹಾಲಪ್ಪ, ಅಶ್ವಿನಿ ಕುಮಾರ್, ಇಂದೂಧರಗೌಡ, ಮೊದಲಾದವರು ಮಾತನಾಡಿದರು. ಪ್ರಮುಖರಾದ ಪ್ರಫುಲ್ಲ ಮಧುಕರ್, ಹಕ್ರೆ ಮಲ್ಲಿಕಾರ್ಜುನ, ಡಾ.ರಾಜನಂದಿನಿ ಕಾಗೋಡು, ಪಾಂಡುರಂಗ, ಗುಂಡಪ್ಪ, ಕಲಸಿ ಚಂದ್ರಪ್ಪ, ಮೊಹಮ್ಮದ್ ಖಾಸಿಂ ಸೇರಿದಂತೆ ಸಮಿತಿಯ ಸದಸ್ಯರು, ಗಣ್ಯರು ಹಾಜರಿದ್ದರು.
- ಬಿ.ವೈ.ರಾಘವೇಂದ್ರ, ಸಂಸದ
ಎಚ್.ಕೆ.ಪಾಟೀಲ್, ಎಸ್.ಬಂಗಾರಪ್ಪ ಪ್ರಾತಃ ಸ್ಮರಣೀಯರು: ಹರನಾಥ ರಾವ್ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಹರನಾಥ ರಾವ್ ಮತ್ತಿಕೊಪ್ಪ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಯಾವುದೇ ಕೆಲಸವೂ ಒಬ್ಬರಿಂದ ಆಗಿದ್ದಲ್ಲ. ಇದೆಲ್ಲವೂ ತಂಡದ ಕೆಲಸ. ನಾನೊಬ್ಬನ್ನೇ ಮಾಡಿದ್ದೇನೆ ಎಂದರೆ ತಪ್ಪಾಗುತ್ತದೆ. ಮಾಜಿ ಸಚಿವ ಎಚ್.ಕೆ. ಪಾಟೀಲರು ಹಾಗೂ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅಡಕೆ ಬೆಳೆಗಾರರಿಗೆ ಪ್ರಾತಃ ಸ್ಮರಣೀಯರು. ಅವರು ಮಾಡಿದ ಕೆಲಸಗಳಿಂದ ನಾವೆಲ್ಲ ಖುಷಿಯಿಂದ ಬದುಕುತ್ತಿದ್ದೇವೆ. ಸರ್ಕಾರ ನಮ್ಮ ಸಾಧನೆ ಗುರುತಿಸಿ ಪ್ರಶಸ್ತಿ ಕೊಟ್ಟಿರುವುದು ಸಂತಸ ಹೆಚ್ಚಿಸಿದೆ. ಇದಕ್ಕೆ ಎಲ್ಲ ಪ್ರಮುಖರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.