ಕನ್ನಡಪ್ರಭ ವಾರ್ತೆ ಬೆಂಗಳೂರು
ನೂತನ ಮುಖ್ಯಮಂತ್ರಿಗೆ ಶುಭ ಕೋರುವ ಜೊತೆಗೆ, 13 ಸಚಿವರಿಗೂ ಶುಭ ಹಾರೈಸಲು ಪಕ್ಷದ ಮುಖಂಡರು, ಕಾರ್ಯಕರ್ತರು, ಹಿತೈಷಿಗಳು ಭಾರೀ ಪ್ರಮಾಣದಲ್ಲಿ ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸ್‌ಗಳನ್ನು ಹಾಕಿದ್ದು, ಎಲ್ಲೆಡೆ ಕಾಂಗ್ರೆಸ್‌ಮಯವಾಗಿತ್ತು. ಡಿ.ಕೆ.ಶಿವಕುಮಾರ್ ಅವರ ಸುಮಾರು 100 ಅಡಿಯ ಬೃಹತ್ ಕಟೌಟನ್ನೂ ನಿರ್ಮಿಸಿದ್ದು ವಿಶೇಷವಾಗಿ ಗಮನ ಸೆಳೆಯಿತು.
ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಲೋಕಭವನದಲ್ಲಿ ಆಯೋಜಿಸಿದ್ದರಿಂದ ಸೀಮಿತ ಗಣ್ಯರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿತ್ತು. ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ಬೇಸರ ಆಗಬಾರದು ಎಂದು ಲೋಕಭವನದ ಸಮೀಪ ಎಲ್‌ಇಡಿ ಅಳವಡಿಸಲಾಗಿತ್ತು. ಪಾದಚಾರಿ ಮಾರ್ಗದಲ್ಲಿ ಆಸನಗಳ ವ್ಯವಸ್ಥೆ ಮಾಡಿದ್ದು ನೇರ ಪ್ರಸಾರವನ್ನು ನೋಡಿ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.ಹಲವೆಡೆ ಎಲ್‌ಇಡಿ ಅಳವಡಿಕೆ:
ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನವೇ ವಿಧಾನಸೌಧದ ಮುಂಭಾಗಕ್ಕೆ ಆಗಮಿಸಿದ್ದ ವಿವಿಧ ಕಲಾ ತಂಡಗಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದವು. ಚೋಮನ ಕುಣಿತ, ಚಂಡೆ. ಮದ್ದಳೆಯೊಂದಿಗೆ ಡೊಳ್ಳುಕುಣಿತ ಪ್ರದರ್ಶಿಸಿದ ಕಲಾವಿದರು ಗಮನಸೆಳೆದರು.
ಪ್ರಮಾಣ ವಚನ ಸ್ವೀಕರ ಸಮಾರಂಭದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹಬ್ಬದ ವಾತವಾವರಣ ನಿರ್ಮಾಣವಾಗಿತ್ತು. ಪಕ್ಷದ ಬಾವುಟಗಳನ್ನು ಹಿಡಿದು, ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಂಪುಟ ಸಹೋದ್ಯೋಗಿಗಳ ಪರವಾಗಿ ಜಯಘೋಷ ಕೂಗಿದರು. ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ ಸಂತಸ ಹಂಚಿಕೊಂಡರು.
ಕನಕಪುರದ ರವಿ ಎಂಬ ಅಭಿಮಾನಿ ಡಿ.ಕೆ.ಶಿವಕುಮಾರ್ ಅವರ ಭಾವಚಿತ್ರದ ಟ್ಯಾಟ್ಯೂ ಅನ್ನು ಎದೆಯ ಮೇಲೆ ಹಾಕಿಸಿಕೊಂಡಿದ್ದು, ಕೈಯಲ್ಲಿ ಶಿವಕುಮಾರ್ ಅವರ ಭಾವಚಿತ್ರ ಹಿಡಿದು ವಿಧಾನಸೌಧದ ಮುಂದೆ ಗಮನ ಸೆಳೆದರು. ಕೆಲವು ಅಭಿಮಾನಿಗಳು ಕೆನ್ನೆಯ ಮೇಲೆ ಡಿಕೆಎಸ್ ಎಂದು ಬಣ್ಣದಲ್ಲಿ ಬಳಿದುಕೊಂಡು ಸಂತಸ ವ್ಯಕ್ತಪಡಿಸಿದರು.