ಕೈಗಾ ಅಣು ವಿದ್ಯುತ್ ಘಟಕ 1 ಮತ್ತೆ ಕಾರ್ಯಾರಂಭ

KannadaprabhaNewsNetwork |  
Published : Nov 26, 2026, 02:15 AM IST
 | Kannada Prabha

ಸಾರಾಂಶ

ಪರಮಾಣು ಶಕ್ತಿ ನಿಯಂತ್ರಣ ಮಂಡಳಿಯಿಂದ ಅಗತ್ಯ ಅನುಮತಿಗಳನ್ನು ಪಡೆದ ಬಳಿಕ, ಇಂಧನ ಚಾನೆಲ್ ಮತ್ತು ಫೀಡರ್ ಬದಲಾವಣೆ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ನ. 22ರಂದು ಘಟಕವು ಕ್ರಿಟಿಕಾಲಿಟಿ ಸಾಧಿಸಿದೆ.

ಕಾರವಾರ: ಜಿಲ್ಲೆಯ ಕೈಗಾ ಅಣು ವಿದ್ಯುತ್ ಸ್ಥಾವರದ ಘಟಕ- 1(ಕೆಜಿಎಸ್-1) ದೀರ್ಘಾವಧಿಯ ನವೀಕರಣ ಕಾರ್ಯ ಪೂರ್ಣಗೊಳಿಸಿ ಮತ್ತೆ ಕಾರ್ಯಾರಂಭಿಸಿದೆ.

ಪರಮಾಣು ಶಕ್ತಿ ನಿಯಂತ್ರಣ ಮಂಡಳಿಯಿಂದ ಅಗತ್ಯ ಅನುಮತಿಗಳನ್ನು ಪಡೆದ ಬಳಿಕ, ಇಂಧನ ಚಾನೆಲ್ ಮತ್ತು ಫೀಡರ್ ಬದಲಾವಣೆ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ನ. 22ರಂದು ಘಟಕವು ಕ್ರಿಟಿಕಾಲಿಟಿ ಸಾಧಿಸಿದೆ.ಭಾರತೀಯ ಪರಮಾಣು ವಿದ್ಯುತ್ ನಿಗಮ ನಿಯಮಿತದ ಆರನೇ ಪರಮಾಣು ವಿದ್ಯುತ್ ಕೇಂದ್ರವಾಗಿರುವ ಕೈಗಾದಲ್ಲಿ ಒಟ್ಟು 2,280 ಮೆಗಾ ವ್ಯಾಟ್ ಸಾಮರ್ಥ್ಯದ 6 ಒತ್ತಡದ ಭಾರೀ ನೀರಿನ ರಿಯಾಕ್ಟರ್‌ಗಳಿವೆ. ಈ ಪೈಕಿ ಕೆಜಿಎಸ್-1ರಿಂದ ಕೆಜಿಎಸ್- 4ರವರೆಗಿನ ತಲಾ 220 ಮೆಗಾವ್ಯಾಟ್ ಸಾಮರ್ಥ್ಯದ 4 ಘಟಕಗಳು ಕಾರ್ಯಾಚರಣೆಯಲ್ಲಿವೆ.

ತಲಾ 700 ಮೆಗಾವ್ಯಾಟ್ ಸಾಮರ್ಥ್ಯದ ಇನ್ನೂ 2 ಘಟಕಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಕಾರ್ಯಾಚರಣೆಯಲ್ಲಿರುವ ಘಟಕಗಳು ನಿಗದಿತ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ಷಮತೆಯ ಮಾನದಂಡಗಳನ್ನು ಹೊಂದಿವೆ ಎಂದು ಪ್ರಕಟಣೆ ತಿಳಿಸಿದೆ.ಕೆಜಿಎಸ್- 1ರಲ್ಲಿ ಇಂಧನ ಚಾನೆಲ್‌ಗಳು ಮತ್ತು ಫೀಡರ್‌ಗಳನ್ನು ಬದಲಾಯಿಸುವ ಇಎಂಸಿಸಿಆರ್ ಹಾಗೂ ಇಎಂಎಫ್‌ಆರ್ ಕಾರ್ಯಗಳು 600 ದಿನಗಳಲ್ಲಿ ಪೂರ್ಣಗೊಂಡಿವೆ. ಭಾರತೀಯ ಪರಮಾಣು ವಿದ್ಯುತ್ ಕಾರ್ಯಕ್ರಮದ ಇತಿಹಾಸದಲ್ಲೇ ಇಂತಹ ನವೀಕರಣ ಕಾರ್ಯವನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಿದ ಸಾಧನೆಯಾಗಿದೆ. ಇದು ರಿಯಾಕ್ಟರ್ ನವೀಕರಣ ಮತ್ತು ಕಾರ್ಯಾವಧಿ ವಿಸ್ತರಣೆಯ ಚಟುವಟಿಕೆಗಳಿಗೆ ಹೊಸ ರಾಷ್ಟ್ರೀಯ ಮಾನದಂಡ ಸ್ಥಾಪಿಸಿದೆ ಎಂದು ಎನ್‌ಪಿಸಿಐಎಲ್ ಹೇಳಿದೆ.ಈ ನವೀಕರಣ ಕಾರ್ಯದಲ್ಲಿ ರಿಯಾಕ್ಟರ್‌ನಲ್ಲಿದ್ದ ಸಂಪೂರ್ಣ ಇಂಧನವನ್ನು ಹೊರತೆಗೆಯುವುದು, ರಿಯಾಕ್ಟರ್ ವ್ಯವಸ್ಥೆಯಿಂದ ಭಾರೀ ನೀರನ್ನು ಖಾಲಿ ಮಾಡುವುದು, ಹಳೆಯ ಕೂಲಂಟ್ ಚಾನೆಲ್‌ಗಳು ಮತ್ತು ಫೀಡರ್‌ಗಳನ್ನು ತೆರವುಗೊಳಿಸಿ ಹೊಸ ವ್ಯವಸ್ಥೆಗಳನ್ನು ಅಳವಡಿಸುವುದು ಸೇರಿತ್ತು. ನಂತರ ಹೊಸ ಇಂಧನ ತುಂಬುವಿಕೆ, ಭಾರೀ ನೀರು ಮರುಭರ್ತಿ, ಹೈಡ್ರೋ ಪರೀಕ್ಷೆ ಹಾಗೂ ಹಾಟ್ ಕಂಡೀಷನಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದೆ.ಸಮಾನಾಂತರ ಕೆಲಸದ ವಿಧಾನಗಳು, ಸ್ವದೇಶಿ ರೋಬೊಟಿಕ್ ಹಾಗೂ ದೂರನಿಯಂತ್ರಿತ ಉಪಕರಣಗಳ ಬಳಕೆ ಮತ್ತು ದಶಕಗಳ ಕಾರ್ಯಾಚರಣಾ ಅನುಭವದ ನೆರವಿನಿಂದ ಈ ಸಾಧನೆ ಸಾಧ್ಯವಾಗಿದೆ. ಸುರಕ್ಷತೆ ಮತ್ತು ಗುಣಮಟ್ಟದ ಮಾನದಂಡಗಳನ್ನು ಪಾಲಿಸಿಕೊಂಡು ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. ಇದರಲ್ಲಿ ಉದ್ಯೋಗಿಗಳು, ಗುತ್ತಿಗೆ ಸಿಬ್ಬಂದಿ ಹಾಗೂ ಪಾಲುದಾರ ಕೈಗಾರಿಕೆಗಳ ತಾಂತ್ರಿಕ ಪರಿಣತಿ ಮತ್ತು ಸಮರ್ಪಣೆ ಪ್ರಮುಖ ಪಾತ್ರ ವಹಿಸಿದೆ.ಇದಕ್ಕೂ ಮೊದಲು ಕೆಜಿಎಸ್- 1 ನಿರಂತರವಾಗಿ 962 ದಿನಗಳ ಕಾಲ ಕಾರ್ಯನಿರ್ವಹಿಸಿ, ಎಲ್ಲ ತಂತ್ರಜ್ಞಾನಗಳ ಪರಮಾಣು ವಿದ್ಯುತ್ ರಿಯಾಕ್ಟರ್‌ಗಳ ಪೈಕಿ ನಿರಂತರ ಕಾರ್ಯಾಚರಣೆಯ ವಿಶ್ವ ದಾಖಲೆಯನ್ನು ನಿರ್ಮಿಸಿತ್ತು ಎಂದು ಎನ್‌ಪಿಸಿಐಎಲ್ ಉಲ್ಲೇಖಿಸಿದೆ.ಮುಂದಿನ ಹಂತದಲ್ಲಿ ನಿಗದಿತ ಕಾರ್ಯವಿಧಾನದಂತೆ ಕಡ್ಡಾಯ ಪರೀಕ್ಷೆಗಳನ್ನು ಪೂರ್ಣಗೊಳಿಸಿದ ಬಳಿಕ ಘಟಕವನ್ನು ದಕ್ಷಿಣ ವಿದ್ಯುತ್ ಗ್ರಿಡ್‌ಗೆ ಸಂಪರ್ಕಿಸಲಾಗುತ್ತದೆ. ನಂತರ ವಿದ್ಯುತ್ ಉತ್ಪಾದನೆಯ ಮಟ್ಟವನ್ನು ಹಂತ ಹಂತವಾಗಿ ಹೆಚ್ಚಿಸಿ, ನಿಗದಿತ ಸಾಮರ್ಥ್ಯದಲ್ಲಿ ವಿದ್ಯುತ್ ಉತ್ಪಾದನೆ ಆರಂಭಿಸಲಾಗುವುದು ಎಂದು ಎನ್‌ಪಿಸಿಐಎಲ್ ಕೈಗಾ ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೆದ್ದಾರಿ ದುರಸ್ತಿಗೊಳಿಸಿ, ಬಾಕಿ ಕಾಮಗಾರಿ ಪೂರ್ಣಗೊಳಿಸಿ: ಸಂಸದ ಕಾಗೇರಿ
ಬಸವಣ್ಣನವರ ಘನತೆಗೆ ಧಕ್ಕೆ ತಂದರೆ ಸಹಿಸಲ್ಲ: ಮಠಾಧೀಶರ ಎಚ್ಚರಿಕೆ