27 ರಂದು ಕೊಡಗಿನಲ್ಲಿ ಕೈಲ್ ಮುಹೂರ್ತ ಸಂಭ್ರಮ

KannadaprabhaNewsNetwork | Published : Aug 26, 2024 1:42 AM

ಸಾರಾಂಶ

ಆ. 27ರಂದು ಕೈಲ್‌ ಮುಹೂರ್ತ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕೈಲ್‌ ಪೊಳ್ದ್‌ ಎಂದರೆ ಆಯುಧ ಪೂಜೆ ಎಂದರ್ಥ.

ದುಗ್ಗಳ ಸದಾನಂದ ಕನ್ನಡಪ್ರಭ ವಾರ್ತೆ ನಾಪೋಕ್ಲು

ಕೊಡಗಿನ ಮಡಿಕೇರಿ ತಾಲೂಕಿನ ನಾಲ್ಕುನಾಡು ವ್ಯಾಪ್ತಿಯಲ್ಲಿ ಆ. 27 ಮಂಗಳವಾರ ಕೈಲ್ ಮುಹೂರ್ತ (ಕೈಲ್ ಪೊಳ್ದ್) ಹಬ್ಬವನ್ನು ಶ್ರದ್ಧಾ ಭಕ್ತಿ ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಕೊಡಗಿನ ಹಬ್ಬಗಳಲ್ಲಿ ಧಾನ್ಯಲಕ್ಷ್ಮಿಯನ್ನು ಬರಮಾಡಿಕೊಳ್ಳುವ ಹುತ್ತರಿ ಹಬ್ಬಕ್ಕೆ ಮೊದಲ ಪ್ರಾಮುಖ್ಯತೆ ಇದ್ದರೆ ನಂತರದ ಸ್ಥಾನ ಕೈಲ್ ಮೂಹೂರ್ತ ಹಬ್ಬಕ್ಕಿದೆ. ಕೈಲ್ ಪೊಳ್ದ್ ಎಂದರೆ ಆಯುಧ ಪೂಜೆ ಎಂಬ ಅರ್ಥ.

ಕೊಡಗಿನಲ್ಲಿ ಮಳೆಗಾಲ ಪ್ರಾರಂಭದಲ್ಲಿ ರೈತ ತನಗೆ ಸೇರಿದ ಗದ್ದೆಯನ್ನು ಉತ್ತು ಭಿತ್ತಿ ಗದ್ದೆಯನ್ನು ನಾಟಿ ಮಾಡಿ ದಣಿದ ಸಂದರ್ಭದಲ್ಲಿ ತಾನು ಸಂತೋಷದಿಂದ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾನೆ. ಈ ಸಂದರ್ಭ ಗದ್ದೆ ಕೆಲಸದಲ್ಲಿ ದಣಿದ ಎತ್ತುಗಳನ್ನು ಸ್ಥಾನ ಮಾಡಿಸಿ ನಂತರ ಉಳುವುದಕ್ಕೆ ಉಪಯೋಗಿಸಿದ ಆಯುಧಗಳಾದ ನೇಗಿಲು, ನೋಗಕ್ಕೆ ಪೂಜೆ ಸಲ್ಲಿ ಎತ್ತುಗಳಿಗೆ ಪಣಿ ಪುಟ್ಟು ತಿನಿಸುತ್ತಾರೆ. ನಂತರ ಮನೆಯಲ್ಲಿರುವ ಆಯುಧಗಳಾದ ಕೋವಿ, ಗೆಜ್ಜೆ ತಂಡ ಕತ್ತಿ ಗಳನ್ನು

ಚಾಪೆಯ ಮೇಲೆ ನೆಲ್ಲಕ್ಕಿ ನಡುಬಾಡೆಯಲ್ಲಿಟ್ಟು ಅದಕ್ಕೆ ಪೂಜೆ ಸಲ್ಲಿಸಿ ಮಾಂಸಹಾರಿಗಳು ಹಬ್ಬದಲ್ಲಿ ಮಾಡಿದ ಖಾದ್ಯವಾದ ಕಡಂಬಿಟ್ಟು, ಮಾಂಸ ಸಾರು, ಸಾರಾಯಿ ಮುಂತಾದವುಗಳನ್ನು ಮೀದಿ ಇಟ್ಟು ತಾನು ಕುಡಿದು ತಿಂದು ಸಂಭ್ರಮಿಸುತ್ತಾನೆ.

ಕೈಲ್ ಮೂಹೂರ್ತ ಹಬ್ಬದ ಮುಖ್ಯ ಉಪಾಹಾರ ಎಂದರೆ ಕಡಂಬುಟ್ಟು ಹಂದಿ ಮಾಂಸ ಸಾರು ಮತ್ತು ಸಾರಾಯಿ, ಈ ಆಹಾರ ಪದಾರ್ಥ ಬಹುತೇಕ ಮಾಂಸಹಾರಿ ಮನೆಯಲ್ಲೂ ಕಂಡು ಬರುತ್ತದೆ. ಈ ಸಂದರ್ಭ ನೆಂಟರಿಷ್ಟರು ಬಂದು ಈ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ. ಊರು ಊರುಗಳಲ್ಲೂ ಕೈಲ್ ಮೂಹೂರ್ತ ಹಬ್ಬದ ಪ್ರಯುಕ್ತ ಆಟೋಟಗಳ ಸ್ಪರ್ಧೆಯನ್ನು ಸಹ ಏರ್ಪಡಿಸಿ ಸಂಭ್ರಮಿಸುತ್ತಾರೆ.

ಕೈಲ್ ಮೂಹೂರ್ತ ಹಬ್ಬವನ್ನು ಒಂದೊಂದು ಊರಿನಲ್ಲಿ ಬೇರೆ ಬೇರೆ ದಿನಗಳಲ್ಲಿ ಆಚರಿಸುತ್ತಾರೆ. ಗಾಳಿಬೀಡು ವಿಭಾಗದಲ್ಲಿ ಮೊದಲು ಹಬ್ಬವನ್ನು ಆಚರಿಸಲಾಗುತ್ತದೆ. ನಂತರ ನಾಲ್ಕು ನಾಡಿನಲ್ಲಿ ಆಗಷ್ಟ್‌ ತಿಂಗಳ 27 ರಂದು ನಡೆಯುತ್ತದೆ. ನಂತರ ಕೊಡಗಿನಾದ್ಯಂತ ಸೆಪ್ಟಂಬರ್ ತಿಂಗಳ ತಾರೀಕು 3 ರಂದು ಹಬ್ಬವನ್ನು ಆಚರಿಸುತ್ತಾರೆ.

ಈ ಕೈಲ್ ಮೂಹೂರ್ತ ಹಬ್ಬಕ್ಕೆ ಕಕ್ಕಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಭಕ್ತ ಜನ ಸಂಘದ ಪದಾಧಿಕಾರಿಗಳು ತಕ್ಕ ಮುಖ್ಯಸ್ಥರ ಉಪಸ್ಥಿತಿಯಲ್ಲಿ ದೇವಾಲಯದ ಅಮ್ಮಂಗೇರಿ ಜೋತಿಷ್ಯರು ಹಬ್ಬದ ದಿನವನ್ನು ನಿಗದಿಗೊಳಿಸುತ್ತಾರೆ. ನಂತರ ಕೊಡಗಿನಾದ್ಯಂತ ಕೈಲ್ ಮೂಹೂರ್ತ ಹಬ್ಬವನ್ನು ಆಚರಿಸಲಾಗುತ್ತದೆ.

ದೇವರ ಉತ್ಸವ: ಕೈಲ್ ಮುಹೂರ್ತ ಹಿನ್ನೆಲೆಯಲ್ಲಿ ಕಕ್ಕಬೆ ಪಾಡಿ ಶ್ರೀ ಇಗ್ಗುತಪ್ಪ ಹಾಗೂ ನೆಲಜಿ ಗ್ರಾಮದ ನೆಲಜಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ಆ. 26 ರಂದು ಸೋಮವಾರ ದೇವರ ಉತ್ಸವ ನಡೆಯಲಿದ್ದು ಈ ಸಂದರ್ಭ ಉತ್ಸವದ ಅಂಗವಾಗಿ ತುಲಾಭಾರ ಸೇವೆ, ಎತ್ತೊಪೋರಾಟ, ಮಹಾಪೂಜೆ, ದೇವರ ನೃತ್ಯ ಬಲಿ, ಅನ್ನಸಂತರ್ಪಣೆ ಭಕ್ತಾದಿಗಳ ಆಗಮನದೊಂದಿಗೆ ಶ್ರದ್ಧಾ ಭಕ್ತಿಯಿಂದ ನಡೆಯಲಿದೆ .

ಕೈಲ್ ಪೋಳ್ದ್ ಹಬ್ಬದ ಕ್ರೀಡಾ ಕೂಟ: ಭಗವತಿ ಯುವಕ ಸಂಘದ ಆಶ್ರಯದಲ್ಲಿ ಆ. 27ರಂದು ನಾಪೋಕ್ಲು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಆಟದ ಮೈದಾನದಲ್ಲಿ ಹಾಗೂ ಬೇತು ಗ್ರಾಮದ ಶ್ರೀ ಮಕ್ಕಿ ಶಾಸ್ತಾವು ಯುವಕ ಸಂಘದ ವತಿಯಿಂದ ಬೇತು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆಟದ ಮೈದಾನದಲ್ಲಿ, ಬಲ್ಲಮಾವಟ್ಟಿ ಗ್ರಾಮದ ಅಪೋಲೋ ಯುವಕ ಸಂಘ ಮತ್ತು ಕಾವೇರಿ ಮಹಿಳಾ ಸಮಾಜದ ಸಂಯುಕ್ತ ಆಶ್ರಯದಲ್ಲಿ ಬಲ್ಲಮಾವಟ್ಟಿ ನೇತಾಜಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ ನಾಡಹಬ್ಬ ಕೈ ಮುಹೂರ್ತ ಪ್ರಯುಕ್ತ ವಿವಿಧ ಕ್ರೀಡಾ ಕೂಟವನ್ನು ಆಯೋಜಿಸಲಾಗಿದೆ.

Share this article