ಚನ್ನಪಟ್ಟಣ: ಮೇಕೆದಾಟು ಯೋಜನೆಗೆ ಶೀಘ್ರವೇ ಅಡಿಗಲ್ಲು ಹಾಕಿ, ಸತ್ತೇಗಾಲ ಯೋಜನೆ ಪೂರ್ಣಗೊಳಿಸಿ, ಕಾಡಾನೆ ದಾಳಿ ತಪ್ಪಿಸಲು ಆಗ್ರಹಿಸಿ ಜ.೯ರಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ತಿಳಿಸಿದರು.
ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿನ ಕನ್ನಡ ಶಾಲೆಗಳನ್ನು ಕೆಪಿಎಸ್ ಮ್ಯಾಗ್ನೆಟ್ ಶಾಲೆ ಹೆಸರಲ್ಲಿ ವಿಲೀನ ಮಾಡುವುದನ್ನು ಖಂಡಿಸಿ ರಾಜ್ಯದಲ್ಲಿ ಒಂದು ವಿದ್ಯಾರ್ಥಿ ಇದ್ದರೂ ಸರ್ಕಾರಿ ಶಾಲೆ ಮುಚ್ಚದಂತೆ ಒತ್ತಾಯಿಸುವುದು. ರಾಜ್ಯದಲ್ಲಿ ಹಲವು ವರ್ಷಗಳಿಂದ ಉಪನ್ಯಾಸರ ಹುದ್ದೆ ಭರ್ತಿ ಮಾಡದೆ ಅತಿಥಿ ಉಪನ್ಯಾಸಕರ ಸೇವೆಯನ್ನು ಕಾಯಂ ಮಾಡಬೇಕು ಎಂದರು.
ತಾಲೂಕಿನಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ ಕಾಡಾನೆಗಳ ಹಾವಳಿ ಹೆಚ್ಚಿ ನಾಡಿನತ್ತ ಬರುತ್ತಿವೆ. ಕಾಡಾನೆಗಳ ಹಾವಳಿಯನ್ನು ಸಂಪೂರ್ಣ ತಪ್ಪಿಸಬೇಕು. ಹಾನಿಯಾದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿ ಪಟ್ಟಣದ ಸ್ಪನ್‌ಸಿಲ್ಕ್ ಮಿಲ್ ಮುಂಭಾಗದಿಂದ ಹೆದ್ದಾರಿಯಲ್ಲಿ ಪಾದಯಾತ್ರೆ ಮೂಲಕ ತಾಲೂಕು ಕಚೇರಿಗೆ ಬಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಸರ್ಕಾರ ಎಲ್ಲಾ ಬೇಡಿಕೆಗಳನ್ನು ಮೇ ಒಳಗೆ ಈಡೇರಿಸದಿದ್ದರೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ ಮಾತನಾಡಿ, ಕೋವಿಡ್ ಸಂದರ್ಭವನ್ನು ಲೆಕ್ಕಿಸದೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಮ್ಮ ನೀರು ನಮ್ಮ ಹಕ್ಕು ಎಂದು ಬೃಹತ್ ಪಾದಯಾತ್ರೆ ಮಾಡಿ ರಾಜಕೀಯ ಲಾಭದಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ಆದರೆ ಈವರೆಗೆ ಮೇಕೆದಾಟು ಯೋಜನೆಗೆ ಮುಂದಾಗಿಲ್ಲ. ಮೇಕೆದಾಟು ಯೋಜನೆಗೆ ತಮಿಳುನಾಡು ಹಾಕಿದ್ದ ತಕರಾರು ಅರ್ಜಿಯನ್ನು ಸುಪ್ರಿಂಕೋರ್ಟ್ ವಜಾ ಮಾಡಿದ್ದು ಕರ್ನಾಟಕಕ್ಕೆ ಅನುಮತಿ ನೀಡಿದೆ. ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕಬೇಕು ಎಂದು ಒತ್ತಾಯಿಸಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಾ.ಒ.ವಿದ್ಯಾಸಂಸ್ಥೆಯ ಕಾರ್ಯದರ್ಶಿ ಚನ್ನಪ್ಪ, ನಿವೃತ್ತ ಉಪಪ್ರಾಂಶುಪಾಲ ಟಿ.ಆರ್.ರಂಗಸ್ವಾಮಿ, ನಿವೃತ್ತ ಪ್ರಾಧ್ಯಾಪಕ ಚನ್ನವೀರೇಗೌಡ, ನಾರಾಯಣಸ್ವಾಮಿ, ಉಪಾಧ್ಯಕ್ಷ ರಂಜಿತ್‌ಗೌಡ, ಜಿಲ್ಲಾಧ್ಯಕ್ಷ ಉಮಾಶಂಕರ್, ಮಲ್ಲು, ಜಗದಾಪುರ ಕೃಷ್ಣೇಗೌಡ, ಮರಿಅಂಕೇಗೌಡ, ಕೋಡಂಬಹಳ್ಳಿ ರಾಜು, ನಾಗರಾಜು ಇತರರಿದ್ದರು.ಪೊಟೋ೬ಸಿಪಿಟಿ೨: ಚನ್ನಪಟ್ಟಣದಲ್ಲಿ ಕಕಜವೇ ಪದಾಧಿಕಾರಿಗಳು ಪಾದಯಾತ್ರೆ ಕರಪತ್ರವನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದರು.