ಸರ್ಕಾರಿ ಗೌರವದೊಂದಿಗೆ ಕಕ್ಕೇರಿ ಯೋಧನ ಅಂತ್ಯಕ್ರಿಯೆ

KannadaprabhaNewsNetwork |  
Published : May 30, 2024, 12:47 AM IST
ಖಾನಾಪುರ ತಾಲೂಕಿನ ಕಕ್ಕೇರಿಯಲ್ಲಿ ಜರುಗಿದ ಯೋಧ ಮಂಜುನಾಥ ಅಂಬಡಗಟ್ಟಿ ಅಂತ್ಯಕ್ರಿಯೆಯಲ್ಲಿ ಶಾಸಕ ವಿಠ್ಠಲ ಹಲಗೇಕರ ಹಾಗೂ ಇತರರು ಭಾಗವಹಿಸಿದ್ದರು. | Kannada Prabha

ಸಾರಾಂಶ

ರಸ್ತೆ ಅಪಘಾತದಲ್ಲಿ ಯೋಧ ಮಂಜುನಾಥ ಶಿವಾನಂದ ಅಂಬಡಗಟ್ಟಿ ಸಾವು ಹಿನ್ನೆಲೆಯಲ್ಲಿ ಸ್ವಗ್ರಾಮ ಕಕ್ಕೇರಿಯಲ್ಲಿ ಅಂತಿಮ ವಿದಾಯ ನಡೆಯಿತು.

ಕನ್ನಡಪ್ರಭ ವಾರ್ತೆ ಖಾನಾಪುರ

ದೆಹಲಿಯಲ್ಲಿ ಕಳೆದ ಮೇ 24ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ತಾಲೂಕಿನ ಕಕ್ಕೇರಿ ಗ್ರಾಮದ ಯೋಧ ಮಂಜುನಾಥ ಶಿವಾನಂದ ಅಂಬಡಗಟ್ಟಿ (35) ಅಂತ್ಯಕ್ರಿಯೆ ಬುಧವಾರ ಸ್ವಗ್ರಾಮದಲ್ಲಿ ಜರುಗಿತು.

ಕಳೆದ 16 ವರ್ಷಗಳಿಂದ ಭಾರತೀಯ ಸೈನ್ಯದಲ್ಲಿದ್ದ ಮಂಜುನಾಥ ಮುಂದಿನ ವರ್ಷ ನಿವೃತ್ತಿ ಹೊಂದಲಿದ್ದರು. ಅವರಿಗೆ ತಂದೆ-ತಾಯಿ, ಪತ್ನಿ, ಓರ್ವ ಪುತ್ರ ಸೇರಿದಂತೆ ಅಪಾರ ಬಂಧು-ಬಳಗವಿದೆ. ಭಾರತೀಯ ಸೈನ್ಯದ ಇಂಜಿನಿಯರಿಂಗ್ ರೇಜಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಮಂಜುನಾಥ ಮೇ.24ರಂದು ದೆಹಲಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ (ಮೇ.27) ನಿಧನದಾರು. ಬುಧವಾರ ಬೆಳಗ್ಗೆ ಯೋಧನ ಪಾರ್ಥಿವ ಶರೀರವನ್ನು ಭಾರತೀಯ ಸೈನ್ಯದ ಅಧಿಕಾರಿಗಳು ವಿಶೇಷ ವಾಹನದಲ್ಲಿ ರಸ್ತೆ ಮಾರ್ಗವಾಗಿ ಕಕ್ಕೇರಿಗೆ ತರಲಾಯಿತು. ಬಳಿಕ ಅಗಲಿದ ಯೋಧನ ಅಂತಿಮ ದರ್ಶನಕ್ಕೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಕಲ ವ್ಯವಸ್ಥೆ ಮಾಡಲಾಯಿತು.

ಸಾರ್ವಜನಿಕರ ದರ್ಶನ ಕಾರ್ಯಕ್ರಮದ ಬಳಿಕ ಮೃತದೇಹವನ್ನು ಗ್ರಾಮದಲ್ಲಿರುವ ಮಂಜುನಾಥ ಅವರ ಮನೆಗೆ ತೆಗೆದುಕೊಂಡು ಹೋಗಿ ಧಾರ್ಮಿಕ ವಿಧಿಗಳನ್ನು ಪೂರೈಸಲಾಯಿತು. ಸ್ಥಳದಲ್ಲಿದ್ದ ಸೈನ್ಯದ ಅಧಿಕಾರಿಗಳು ಹುತಾತ್ಮನಿಗೆ ಗೌರವ ಅರ್ಪಿಸಿ ಪಥ ಸಂಚಲನ ನಡೆಸಿದರು. ಗ್ರಾಮದ ಹೊರವಲಯದ ರುದ್ರಭೂಮಿಯಲ್ಲಿ ಪೊಲೀಸರು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಅಗಲಿದ ಯೋಧನಿಗೆ ಸರ್ಕಾರ ಪರ ಗೌರವ ಸಲ್ಲಿಸಿದರು. ಬಳಿಕ ಹಿಂದು ಧರ್ಮದ ಪದ್ಧತಿಯಂತೆ ಅಂತ್ಯಕ್ರಿಯೆ ನಡೆಸಲಾಯಿತು. ಜಗತ್ತನ್ನೇ ಅರಿಯದ ಮೃತ ಯೋಧ ಮಂಜುನಾಥ ಅವರ ಒಂದೂವರೆ ವರ್ಷದ ಪುತ್ರ ವಿನೀತ ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದ ದೃಶ್ಯ ಎಲ್ಲರನ್ನೂ ಕಣ್ಣೀರಿನಲ್ಲಿ ತೇಲಿಸಿತ್ತು.

ಯೋಧ ಮಂಜುನಾಥ ಅವರ ಅಕಾಲಿಕ ಮರಣಕ್ಕೆ ಕುಟುಂಬದ ಸದಸ್ಯರು, ಗ್ರಾಮಸ್ಥರು, ಸ್ನೇಹಿತರು ಮತ್ತು ಬಂಧುಗಳು ಕಂಬನಿ ಮಿಡಿದರು. ಆಕಸ್ಮಿಕವಾಗಿ ತಮ್ಮನ್ನಗಲಿದ ತಮ್ಮೂರ ಯೋಧನಿಗೆ ಕಕ್ಕೇರಿ ಗ್ರಾಮಸ್ಥರು ಭಾರವಾದ ಮನಸ್ಸಿನಿಂದ ಅಂತಿಮ ನಮನ ಸಲ್ಲಿಸಿದರು. ಅಂತ್ಯಕ್ರಿಯೆಯಲ್ಲಿ ಶಾಸಕ ವಿಠ್ಠಲ ಹಲಗೇಕರ, ಬಿಜೆಪಿ ಮುಖಂಡ ಪ್ರಮೋದ ಕೊಚೇರಿ, ಧನಶ್ರೀ ದೇಸಾಯಿ, ಸ್ಥಳೀಯರಾದ ಭೀಮಪ್ಪ ಅಂಬೋಜಿ, ಯಲ್ಲಪ್ಪ ಗುಪೀತ, ರಿಯಾಜ ಅಹ್ಮದ ಪಟೇಲ, ಸಂತೋಷ ಕುಕಡೊಳ್ಳಿ ಮತ್ತಿತರರು ಭಾಗವಹಿಸಿದ್ದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ