ಕನ್ನಡಪ್ರಭ ವಾರ್ತೆ ಕಟಪಾಡಿ
ಕಟಪಾಡಿಯ ಎಸ್.ವಿ.ಎಸ್. ಪ್ರೌಢಶಾಲೆಯನ್ನು ಕೇಂದ್ರವಾಗಿರಿಸಿಕೊಂಡು ಚಿತ್ರ ತಂಡವು ಸುಮಾರು ೩೫ ದಿನಗಳ ಚಿತ್ರೀಕರಣವನ್ನು ಎರಡು ಹಂತಗಳಲ್ಲಿ ನಡೆಸಿದೆ. ಶೇ.೯೦ರಷ್ಟು ಭಾಗವನ್ನು ಒಂದೇ ಶಾಲೆಯಲ್ಲಿ ಚಿತ್ರೀಕರಣಗೊಳಿಸಲಾಗಿದೆ ಎಂದು ಚಿತ್ರತಂಡವು ತಿಳಿಸಿದೆ.
ಉಡುಪಿ, ಮಂಗಳೂರು ಆಸುಪಾಸಿನ ೭೦ಕ್ಕೂ ಅಧಿಕ ಬಾಲಕಲಾವಿದರು ಈ ಚಿತ್ರದಲ್ಲಿ ಅಭಿಯಿಸಿದ್ದಾರೆ. ಇವರೊಂದಿಗೆ ತುಳುನಾಡಿನ ಹೆಸರಾಂತ ಕಲಾವಿದರಾದ ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ದೀಪಕ್ ರೈ ಪಾಣಾಜೆ, ಸುದರ್ಶನ್ ಪುತ್ತೂರು, ಪೆನ್ಸಿಲ್ ಬಾಕ್ಸ್ ಚಿತ್ರದ ನಾಯಕಿ ದೀಕ್ಷಾ ಡಿ. ರೈ, ನಾಗೇಶ್ ಕಾಮತ್ ಕಟಪಾಡಿ, ಶ್ರೀಜಯ್ ಗಂಜಿಮಠ, ದೃಶಾ ಕೊಡಗು, ತನ್ಮಯ್ ಆರ್. ಶೆಟ್ಟಿ ಮಂಗಳೂರು, ಯಶಸ್ ಪಿ. ಸುವರ್ಣ ಕಟಪಾಡಿ ಮುಂತಾದವರು ಮುಖ್ಯ ಭೂಮಿಕೆಯಲ್ಲಿದ್ದಾರೆ.ಕಥೆ, ಚಿತ್ರ ಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನದ ಜವಾಬ್ದಾರಿಯನ್ನು ಚಿತ್ರ ನಿರ್ದೇಶಕ ರಝಾಕ್ ಪುತ್ತೂರು ವಹಿಸಿದ್ದಾರೆ. ಛಾಯಾಗ್ರಾಹಕರಾಗಿ ಮೋಹನ್ ಪಡ್ರೆ, ಜಯಕಾರ್ತಿ ಸಂಗೀತ, ಸಚಿನ್ ರಾಮ್ ಸಂಕಲನ ಹಾಗೂ ಸಹನಿರ್ದೇಶಕರಾಗಿ ಅಕ್ಷತ್ ವಿಟ್ಲ ಕಾರ್ಯನಿರ್ವಹಿಸಿದ್ದಾರೆ.
ಸ್ಕೂಲ್ ಲೀಡರ್ ಚಿತ್ರವು ಆಗಸ್ಟ್ ಕೊನೆಯ ವಾರದಲ್ಲಿ ಕರಾವಳಿಯಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ಮಾಪಕ ಕೆ.ಸತ್ಯೇಂದ್ರ ಪೈ ತಿಳಿಸಿದ್ದಾರೆ.