ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಕಲಬುರಗಿಸೆಕೆಂಡ್ ಹ್ಯಾಂಡ್ ಕಾರು ಮಾರಾಟ ವ್ಯಾಪಾರಿ ಹಾಗೂ ಆತನ ಇಬ್ಬರು ಗೆಳೆಯರನ್ನು ಅಪಹರಿಸಿ ಮರ್ಮಾಂಗಕ್ಕೆ ಕರೆಂಟ್ ಶಾಕ್ ಕೊಟ್ಟು ವಿಕೃತಿ ಮೆರೆದ ಪ್ರಕರಣ ದಿನಕ್ಕೊದು ಹೊಸ ತಿರುವು ಪಡೆದುಕೊಳ್ಳತೊಡಗಿದೆ.
ನಗರದ ಹಾಗರಗಾ ಕ್ರಾಸ್ ಸಮೀಪದ ಇನಾಮದಾರ್ ಕಾಲೇಜು ಸಮೀಪದ ಮನೆಯೊಂದರಲ್ಲಿ ಸೇಡಂ ತಾಲೂಕಿನ ದೇವನೂರ ಗ್ರಾಮದ ಕಾರು ವ್ಯಾಪಾರಿ ಅರ್ಜುನ್ ಮಡಿವಾಳ ಮತ್ತು ಆತನ ಜೊತೆಗೆ ಬಂದಿದ್ದ ರಹೇಮಾನ್ ಹಾಗೂ ಸಮೀರುದ್ದಿನ್ ಎಂಬವರನ್ನು ಕೂಡಿ ಹಾಕಿ, ವಿವಸ್ತ್ರಗೊಳಿಸಿ ಮರ್ಮಾಂಗಕ್ಕೆ ಕರೆಂಟ್ ಶಾಕ್ ಕೊಟ್ಟು ವಿಕೃತಿ ಮೆರೆದಿದ್ದರು ಎನ್ನಲಾಗಿದೆ.ಕದೀಮರ ಗ್ಯಾಂಗ್ ತುಂಬಾ ಅಮಾನವೀಯವಾಗಿ, ತಾಲಿಬಾನಿಗಳ ತರ ವರ್ತಿಸಿರುವ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಇಡೀ ನಗರ ಬೆಚ್ಚಿ ಬಿದ್ದಿದೆ. ಕಿಡಿಗೇಡಿಗಳು ವರ್ತಕರಿಗೆ ಕೊಟ್ಟ ಚಿತ್ರಹಿಂಸೆ ಈಗ ಇಲ್ಲಿ ಬಹು ಚರ್ಚಿತ ವಿಷಯವಾಗಿದೆಯಲ್ಲದೆ ದಿಗ್ಭ್ರಮೆ ಉಂಟು ಮಾಡಿದೆ.
ಮುಖಕ್ಕೆ ಉಗಿದರು- ಸೆಗಣಿ ತಿನಿಸಿದರು!ಚಿತ್ರಹಿಂಸೆ ಅನುಭವಿಸಿ ಪಾರಾಗಿ ಬಂದ ಅರ್ಜುನ ಮಡಿವಾಳ ಹೇಳುವುದನ್ನು ಕೇಳಿದವರೆಲ್ಲರೂ ಕಲಬುರಗಿಯಲ್ಲೂ ಹೀಗೆ ನಡೆಯುತ್ತಿದೆಯೆ ಎಂದು ಊಹಿಸಲೂ ಆಗದ ಸ್ಥಿತಿ ಅನುಭವಿಸುತ್ತಿದ್ದಾರೆ. ಕಿಡಿಗೇಡಿಗಳು ಮನುಷ್ಯತ್ವವನ್ನೇ ಮರೆತಂತೆ ವರ್ತಿಸಿದ್ದಾರೆನ್ನಲಾಗಿದೆ. ಬಿಯರ್ ಕುಡಿದು ಮೈ ಮೇಲೆ ಉಗುಳಿದ್ದಾರೆ. ಪಾನ್ ಜಿಗಿದು ಮುಖದ ಮೇಲೆ ಉಗಿದಿದ್ದಾರೆ. ಅಷ್ಟೇ ಅಲ್ಲ ದನದ ಸೆಗಣಿ ತಿನ್ನಿಸಿದ್ದಾರೆ. ಇದೆಲ್ಲ ಕಿರಾತಕರ ತಂಡದವರೇ ವಿಡಿಯೋ ಮಾಡಿಕೊಂಡಿದ್ದಾರೆ. ಅವರ ಮೊಬೈಲ್ ಸೀಜ್ ಮಾಡಿದ್ರೆ ಎಲ್ಲಾ ವಿಡಿಯೋ ಸಿಗುತ್ತವೆ ಎಂದು ಅರ್ಜುನ ಮಡಿವಾಳ ನೋವಿನಿಂದಲೇ ವಿವರಿಸಿದ್ದಾರೆ.ಬಚಾವ್ ಆಗಿ ಬಂದಿದ್ದೆ ದೊಡ್ಮಾತು...
ಕಿಡಿಗೇಡಿಗಳ ಕೈಯಿಂದ ಮಡಿವಾಳ ಹಾಗೂ ಮೂವರು ಸ್ನೇಹಿತರು ಬಚಾವಾಗಿ ಬಂದಿದ್ದೇ ದೊಡ್ಡ ಮಾತು ಎನ್ನಲಾಗುತ್ತಿದೆ. ರಮೇಶ ದೊಡ್ಡಮನಿ ಎನ್ನುವಾತನಿಗೆ ಅರ್ಜುನ ಮಡಿವಾಳ ಹಾಗೂ ಮೂವರು ಸ್ನೇಹಿತರು ಟಾಟಾ ಹ್ಯಾರಿಯರ್ ಕಾರ್ ಮಾರಿದ್ದರು. ಹಣ ಕೊಡುವಂತೆ ಅರ್ಜುನ ಮಡಿವಾಳ ಕೇಳಿದಾಗ ರಮೇಶ ದೊಡ್ಡಮನಿ ಹಾಗರಗಾ ಕ್ರಾಸ್ ಬಳಿ ಬರುವಂತೆ ಸೂಚಿಸಿದ್ದನಂತೆ. ಅದರಂತೆ ರಮೇಶ ಹೇಳಿದ ಸ್ಥಳಖ್ಕೆ ತೆರಳಿದ್ದಾಗ, ಸ್ನೇಹಿತರ ಮೇಲೆ ಅಲ್ಲಿದ್ದ ಯುವಕರಿಂದ ಹಲ್ಲೆಯಾಗಿದೆ. ಅವರನ್ನೆಲ್ಲ ಪ್ಲಾನ್ ಮಾಡಿದಂತೆಯೇ ಹಲ್ಲೆ ಮಾಡಿ ಕೋಣೆಯಲ್ಲಿ ಕೂಡಿ ಹಾಕಿ ವಿವಸ್ತ್ರಗೊಳಿಸಿ ಕರೆಂಟ್ ಶಾಕ್ ಕೊಟ್ಟು ಟಾರ್ಚರ್ ನೀಡಲಾಗಿದೆ. ತಾವೇ ಕೊಟ್ಟ ಕಿರುಕುಳದ ಎಲ್ಲವನ್ನೂ ಸ್ವತಃ ತಾವೇ ವಿಡಿಯೋ ಮಾಡಿಕೊಂಡಿದ್ದ ಕಿರಾತಕರು ಅದನ್ನೆಲ್ಲ ತಮ್ಮದೇ ಗುಂಪಿನ ಇತರರಿಗೂ ಕಳುಹಿಸಿ ತಮ್ಮ ವಿಕೃತಿ ಮೆರೆದಿದ್ದಾರೆ. ಪೊಲೀಸರು ಮುಗಿಬಿದ್ದಿದ್ದು ರೋಚಕ!: ಈ ಚಿತ್ರ ಹಿಂಸೆಗಳನ್ನೆಲ್ಲಾ ವಿಡಿಯೋ ಮಾಡಿಕೊಂಡಿದ್ದ ಕಿಡಿಗೇಡಿಗಳು ಅವನ್ನೆಲ್ಲ ಆಗಾಗ ತಮ್ಮದೇ ಸಮಾನ ಮನಸ್ಕ ಗುಂಪಿಗೆ ಹರಿಬಿಟ್ಟಿದ್ದಾರೆ. ಅವರ ತಂಡದಲ್ಲಿಯೇ ಇದ್ದ ಒಬ್ಬಾತನಿಗೆ ಬಂಧನದಲ್ಲಿದ್ದ ವರ್ತಕರು, ಸ್ನೇಹಿತರ ಮೇಲೆ ಮೇಲೆ ಕರುಣೆ ಬಂದಿದೆ. ತಾನು ತೆಗೆದು ವಿಡಿಯೋಗಳನ್ನು ಪೊಲೀಸರಿಗೆ ಕಳುಹಿಸಿದ್ದಾನೆ. ಲೊಕೇಶನ್ ಸಮೇತ ಮಾಹಿತಿ ನೀಡಿ ಇಲ್ಲಿ ವಶದಲ್ಲಿದ್ದವರನ್ನೆಲ್ಲ ಬದುಕಿಸಲು ಮನವಿ ಮಾಡಿಕೊಂಡಿದ್ದಾನೆ.ಈ ವಿಡಿಯೋಗಳನ್ನು ನೋಡಿ ಗಾಬರಿಯಾದ ಪೊಲೀಸರು ಲೊಕೇಶನ್ ಆಧರಿಸಿ ಆ ಸ್ಥಳದ ಮೇಲೆ ಗುಲ್ಬರ್ಗ ವಿವಿ ಠಾಣೆ ಪೊಲೀಸರು ಮನೆ ಮೇಲೆ ದಾಳಿ ನಡೆಸಿ, ಕಾರು ವ್ಯಾಪಾರಿ ಅರ್ಜುನ್ ಮಡಿವಾಳ ಸೇರಿ ಮೂವರನ್ನು ರಕ್ಷಿಸಿದ್ದಾರೆ. ಆರೋಪಿಗಳಾದ ಇಮ್ರಾನ್, ಮತೀನ್ ಪಟೇಲ್, ಜೀಯಾವುಲ್ಲಾ ಹುಸ್ಸೇನಿ, ಮಹ್ಮದ್ ಅಫ್ಹಲ್, ರಮೇಶ್ ಸೇರಿ 7 ಜನರನ್ನು ಬಂಧಿಸಲಾಗಿದೆ. ಇನ್ನೂ 5 ಜನ ತಪ್ಪಿಸಿಕೊಂಡಿದ್ದಾರೆ. ಬಂಧನಕ್ಕೆ ಖಾಕಿ ಬಲೆ ಬೀಸಿದೆ. ಗುಲ್ಬರ್ಗ ವಿವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಲಬುರಗಿ ಜನಮನದಲ್ಲಿ ಹೆಚ್ಚಿದ ಆತಂಕ
ಪೊಲೀಸರು ಸಕಾಲಕ್ಕೆ ಬರದಿದ್ರೆ ನಾವು ಬದುಕಿ ಬರುವ ಸಾಧ್ಯತೆಯೇ ಇರಲಿಲ್ಲ. ಕಿಡಿಗೇಡಿಗಳ ತಂಡದಲ್ಲಿದ್ದ ವ್ಯಕ್ತಿಯೊಬ್ಬನ ಮಾನವೀಯತೆಯೇ ನಾವು ಬದುಕಲು ಕಾರಣವೆಂದು ಅರ್ಜುನ ಮಡಿವಾಳ ಹೇಳಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಇಂಥವರನ್ನು ದೂರ ಇಡಬೇಕು. ಅವರೊಂದಿಗೆ ಫೋಟೋ ತಗೊಂಡು ಸಚಿವರು ಆತ್ಮಿಯರಿದ್ದಾರೆ ಅಂತ ಹೇಳುತ್ತಾ ಬೇರೆಯವರನ್ನು ಹೆದರಿಸುತ್ತಾರೆ. ಇಂಥವರಿಗೆ ಪ್ರೀಯಾಂಕ್ ಖರ್ಗೆ ಹತ್ತಿರ ಬಿಟ್ಟುಕೊಳ್ಳಬಾರದು ಎಂದು ಅರ್ಜುನ ಮಡಿವಾಳ ಹೇಳಿದ್ದಾರೆ.