ಕಲಬುರಗಿ ಜಿಮ್ಸ್ ಆಸ್ಪತ್ರೆ ಮಕ್ಕಳ ವಿಭಾಗಕ್ಕೆ ಮುಸ್ಕಾನ್ ಪುರಸ್ಕಾರ

KannadaprabhaNewsNetwork |  
Published : Jan 19, 2024, 01:45 AM IST
ಫೋಟೋ- 18ಜಿಬಿ2, 18ಜಿಬಿ3 ಮತ್ತು 18ಜಿಬಿ4ಜಿಮ್ಸ್‌ ಆಸ್ಪತ್ರೆಯ ಮಕ್ಕಳ ಆರೈಕೆ ವಿಭಾಗದ ನೋಟಗಳು | Kannada Prabha

ಸಾರಾಂಶ

ಕಲಬುರಗಿ ಜಿಮ್ಸ್ ಆಸ್ಪತ್ರೆಯ ಮಕ್ಕಳ ವಿಭಾಗದ ಹೊರರೋಗಿಗಳ ವಿಭಾಗ, ಪೀಡಿಯಾಟ್ರಿಕ್ ವಾರ್ಡ್, ಎಸ್‌ಎನ್‌ಸಿಯು ಹಾಗೂ ಎನ್‌ಆರ್‌ಸಿ ಘಟಕಗಳಿಗೆ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮುಸ್ಕಾನ್ ಕಾರ್ಯಕ್ರಮದಡಿ ಶೇ.92ರಷ್ಟು ಅಂಕದೊಂದಿಗೆ ಗುಣಮಟ್ಟದ ವಿಭಾಗವೆಂದು ಪ್ರಮಾಣೀಕರಿಸಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಮಕ್ಕಳ ವಿಭಾಗದಲ್ಲಿನ ಗುಣಮಟ್ಟದ ಸೇವೆಗೆ ಕಲಬುರಗಿ ಜಿಮ್ಸ್ ಆಸ್ಪತ್ರೆಯ ಮಕ್ಕಳ ವಿಭಾಗದ ಹೊರರೋಗಿಗಳ ವಿಭಾಗ, ಪೀಡಿಯಾಟ್ರಿಕ್ ವಾರ್ಡ್, ಎಸ್‌ಎನ್‌ಸಿಯು ಹಾಗೂ ಎನ್‌ಆರ್‌ಸಿ ಘಟಕಗಳಿಗೆ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮುಸ್ಕಾನ್ ಕಾರ್ಯಕ್ರಮದಡಿ ಶೇ.92ರಷ್ಟು ಅಂಕದೊಂದಿಗೆ ಗುಣಮಟ್ಟದ ವಿಭಾಗವೆಂದು ಪ್ರಮಾಣೀಕರಿಸಿದೆ.

ರಾಜ್ಯದಲ್ಲಿ ಕಲಬುರಗಿ ಜಿಮ್ಸ್ ಆಸ್ಪತ್ರೆ ಮಕ್ಕಳ ವಿಭಾಗ ಹೊರತುಪಡಿಸಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಾರ್ವಜನಿಕ ಆಸ್ಪತ್ರೆ ಲೇಬರ್ ರೂಂ ಮತ್ತು ಹೆರಿಗೆ ವಿಭಾಗವು ಕ್ರಮವಾಗಿ ಶೇ.82 ಮತ್ತು 87 ಅಂಕದೊಂದಿಗೆ ಲಕ್ಷ್ಯ ಕಾರ್ಯಕ್ರಮದಡಿ, ಬೆಂಗಳೂರು ನಗರ ಜಿಲ್ಲೆಯ ಜಯನಗರ ಜನರಲ್ ಆಸ್ಪತ್ರೆಯ ಪೀಡಿಯಾಟ್ರಿಕ್ ಓಪಿಡಿ, ಪೀಡಿಯಾಟ್ರಿಕ್ ವಾರ್ಡ್ ಹಾಗೂ ಎಸ್‌ಎನ್‌ಸಿಯು ವಿಭಾಗಕ್ಕೆ ಶೇ.83 ಅಂಕದೊಂದಿಗೆ ಮುಸ್ಕಾನ್ ಕಾರ್ಯಕ್ರಮದಡಿ ಪುರಸ್ಕಾರ ಪಡೆದಿವೆ.

ಇದಲ್ಲದೆ ದಕ್ಷಿಣ ಕನ್ನಡ ತಾಲೂಕು ಆಸ್ಪತ್ರೆ ಅಪಘಾತ ಮತ್ತು ತುರ್ತು, ಓಪಿಡಿ, ಐಪಿಡಿ, ಹೆರಿಗೆ ವಾರ್ಡ್, ಓಟಿ, ಲ್ಯಾಬರೋಟರಿ ಹಾಗೂ ಸಾಮಾನ್ಯ ಆಡಳಿತ ವಿಭಾಗಕ್ಕೆ ಶೇ.89 ಅಂಕದೊಂದಿಗೆ ಎನ್‌ಕ್ಯೂಎಎಸ್ ಕಾರ್ಯಕ್ರಮದಡಿ, ಮೈಸೂರು ಜಿಲ್ಲೆಯ ಚೆಲುವಾಂಬಾ ಜಿಲ್ಲಾ ಆಸ್ಪತ್ರೆಯ ಪೀಡಿಯಾಟ್ರಿಕ್ ಓಪಿಡಿ, ಪೀಡಿಯಾಟ್ರಿಕ್ ವಾರ್ಡ್, ಎಸ್‌ಎನ್‌ಸಿಯು ಹಾಗೂ ಎನ್‌ಆರ್‌ಸಿ ಘಟಕಗಳಿಗೆ ಶೇ.86 ಅಂಕದೊಂದಿಗೆ ಮುಸ್ಕಾನ್ ಕಾರ್ಯಕ್ರಮದಡಿ ಪ್ರಮಾಣೀಕರಿಸಿದೆ.

ಮುಸ್ಕಾನ್ ಕಾರ್ಯಕ್ರಮದಡಿ ಪ್ರಮಾಣೀಕೃತ ಗೌರವಕ್ಕೆ ಪಾತ್ರವಾದ ಕಲಬುರಗಿ ಜಿಮ್ಸ್ ಆಸ್ಪತ್ರೆಯ ಮಕ್ಕಳ ವಿಭಾಗದ ನಾಲ್ಕು ವಿಭಾಗಗಳಿಗೆ ಮುಂದಿನ 5 ವರ್ಷದ ವರೆಗೆ ಕೇಂದ್ರ ಸರ್ಕಾರದಿಂದ ಮತ್ತಷ್ಟು ಸೇವೆ ಸುಧಾರಣೆ ಮತ್ತು ಮೂಲಸೌಕರ್ಯ ಬಲವರ್ಧನೆಗೆ ಅನುದಾನ ಬರಲಿದೆ. ಈಗ ನೀಡಲಾಗಿರುವ ಪ್ರಮಾಣಿಕೃತವು ಮುಂದಿನ ಐದು ವರ್ಷದ ವರೆಗೆ ಚಾಲ್ತಿಯಲ್ಲಿರಲಿದೆ.

ರಾಜ್ಯದ ಐದು ಸಾರ್ವಜನಿಕ ಆಸ್ಪತ್ರೆಗಳ ವಿವಿಧ ಕಾರ್ಯಕ್ರಮದಡಿ ಪ್ರತ್ಯೇಕ ವಿಭಾಗದಲ್ಲಿನ ಗುಣಮಟ್ಟದ ಸೇವೆಗೆ ಕೇಂದ್ರ ಸರ್ಕಾರದಿಂದ ಪ್ರಮಾಣೀಕೃತ ಹೊಂದಿದ್ದು, ಇದು ಖಾಸಗಿ ಆಸ್ಪತ್ರೆಯ ಎನ್‌ಎಬಿಎಚ್ ಮಾದರಿಯಲ್ಲಿ ನಡೆಸುವ ಮೌಲ್ಯಮಾಪನಕ್ಕೆ ಸಮ ಎಂದು ಹೇಳಲಾಗುತ್ತದೆ.

ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ, ರೋಗಿಗಳೊಂದಿಗೆ ವೈದ್ಯರ ಆಪ್ತ ಸಮಾಲೋಚಣೆ, ಉತ್ತಮ ಮೂಲಸೌಕರ್ಯ, ಸೇವೆ ಕುರಿತು ರೋಗಿಯ ತೃಪ್ತಿ, ಮೂಲಸೌಕರ್ಯ, ಸ್ವಚ್ಛತೆ, ನೈರ್ಮಲ್ಯ ಸೇರಿ ಇನ್ನಿತರ ಸೌಕರ್ಯಗಳ ಜೊತೆಗೆ ರಾಷ್ಟ್ರೀಯ ಗುಣಮಟ್ಟದ ಸೇವೆಯ ಮಾನದಂಡದ ಮೇಲೆ ಆಸ್ಪತ್ರೆ ವಿವಿಧ ವಿಭಾಗಕ್ಕೆ ಪ್ರತಿ ವರ್ಷ ಕೇಂದ್ರ ಸರ್ಕಾರವು ಮೌಲ್ಯಮಾಪನ ಮಾಡಿ ಈ ರೀತಿ ಪ್ರಮಾಣೀಕರಿಸುತ್ತದೆ. ಕಳೆದ ನವೆಂಬರ್ ಮಾಹೆಯಲ್ಲಿ ಈ ಆಸ್ಪತ್ರೆಗಳಿಗೆ ಮೌಲ್ಯಾಮಾಪನ ನಡೆಸಲಾಗಿತ್ತು.

ರಾಜ್ಯದ ಐದು ಸಾರ್ವಜನಿಕ ಆಸ್ಪತ್ರೆಗಳ ವಿವಿಧ ಕಾರ್ಯಕ್ರಮದಲ್ಲಿನ ಅಂಕಗಳನ್ನು ಅವಲೋಕಿಸಿದಾಗ ಜಿಮ್ಸ್ ಮಕ್ಕಳ ವಿಭಾಗವು ಮೌಲ್ಯಮಾಪನದ ಎಲ್ಲಾ ಅರ್ಹತಾ ಷರತ್ತು ಪೂರೈಸಿ ಶೇ.92 ಅಂಕ ಪಡೆದು ರಾಜ್ಯದಲ್ಲಿಯೇ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಜಿಲ್ಲೆಗೆ ಹೆಮ್ಮೆತರುವ ವಿಷಯವಾಗಿದೆ. ಇದಕ್ಕಾಗಿ ಶ್ರಮಿಸಿದ ಜಿಮ್ಸ್ ವೈದ್ಯ ಹಾಗೂ ವೈದ್ಯೇತರ ಎಲ್ಲಾ ಸಿಬ್ಬಂದಿ ಅಭಿನಂದನೆಗೆ ಅರ್ಹರು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ