;Resize=(412,232))
ಕಲಬುರಗಿ : ರಾಜ್ಯದಲ್ಲಿ ಬೇಸಿಗೆಯ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರುತ್ತಿದ್ದು, ‘ಬಿಸಿಲ ನಗರಿ’ ಕಲಬುರಗಿ ಅಕ್ಷರಶಃ ಕೆಂಡದಂತಾಗಿದೆ. ಜಿಲ್ಲೆಯ ಕಾಳಗಿಯ ಕೋಡ್ಲಿ ಗ್ರಾಮದಲ್ಲಿ ಶನಿವಾರ ರಾಜ್ಯದಲ್ಲೇ ಗರಿಷ್ಠ ತಾಪಮಾನ 45.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಈ ಬೇಸಿಗೆಯ ಅತ್ಯಧಿಕ ತಾಪಮಾನ ಎನಿಸಿದೆ.
ಹವಾಮಾನ ಇಲಾಖೆಯ ವರದಿಗಳ ಪ್ರಕಾರ ಶನಿವಾರ, ಕಾಳಗಿಯ ಕೋಡ್ಲಿ ಗ್ರಾಮದಲ್ಲಿ 45.4 ಡಿಗ್ರಿ ಸೆಲ್ಸಿಯಸ್, ಚಿಂಚಳಿಯ ಐನಾಪುರದಲ್ಲಿ 45 ಡಿಗ್ರಿ, ಆಳಂದದ ನರೋಣಾದಲ್ಲಿ 44. 7 ಡಿಗ್ರಿ, ಅಫಜಲಪುರದ ಆತನೂರಲ್ಲಿ 44.6 ಡಿಗ್ರಿ ತಾಪಮಾನ ದಾಖಲಾಗಿದೆ.
ಇದಕ್ಕೂ ಮೊದಲು, ಏ.22ರಿಂದ 3 ದಿನ ಕಲಬುರಗಿಯಲ್ಲಿ ಬಿಸಿಗಾಳಿಯ ಅಲೆ ಎದುರಾಗಿತ್ತು. ಆಗಲೂ ತಾಪಮಾನ 45.4 ಡಿಗ್ರಿ ದಾಖಲಾಗಿ ಅದು ಏಪ್ರಿಲ್ ತಿಂಗಳ 53 ವರ್ಷಗಳ ದಾಖಲೆಯನ್ನೇ ಮುರಿದಿತ್ತು. ಶನಿವಾರ ಕೂಡ 45.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಮೂಲಕ ಮತ್ತೊಮ್ಮೆ ರಾಜ್ಯದಲ್ಲೇ ಈ ಬೇಸಿಗೆಯ ಅತ್ಯಧಿಕ ತಾಪಮಾನವಾಗಿ ಗಮನ ಸೆಳೆದಿದೆ.
ಯಾದಗಿರಿ ಜಿಲ್ಲೆ ಸುರಪುರ ಸಮೀಪದ ಸತ್ಯಂಪೇಟೆ ಗ್ರಾಮದಲ್ಲಿ ಬಿಸಿಲ ತಾಪದಿಂದ ಕಾರ್ಮಿಕನೊಬ್ಬ ಮೃತಪಟ್ಟಿದ್ದಾನೆ.
ಸಿದ್ದಪ್ಪ ಶರಣಪ್ಪ ಕೊಂಡಗೂಳಿ (30) ಮೃತರು. ಸುರಪುರದ ಹಸನಾಪುರ ಪೆಟ್ರೋಲ್ ಬಂಕ್ ಸಮೀಪ ಕೂಲಿ ಕೆಲಸಕ್ಕೆ ತೆರಳಿದ್ದ ಸಿದ್ದಪ್ಪ, ಬಿಸಿಲಿನ ತಾಪದಿಂದ ಆಯಾಸಗೊಂಡು ಮನೆಗೆ ಮರಳಿದ ಕೆಲವೇ ಕ್ಷಣಗಳಲ್ಲಿ ಬಳಲಿ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆ ವೇಳೆಗಾಗಲೇ ಕೊನೆಯುಸಿರೆಳೆದಿದ್ದರು. ಸುರಪುರದಲ್ಲಿ ಶನಿವಾರ 42 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು.