ಬೀದರ್ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನ.21 ಹಾಗೂ 22ರಂದು 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದ್ದು ಸಮ್ಮೇಳನಕ್ಕೆ ಎಲ್ಲ ರೀತಿಯ ಸಿದ್ದತೆ ನಡೆಯುತ್ತಿವೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನಶೆಟ್ಟಿ ಹೇಳಿದರು.
ಕನ್ನಡಪ್ರಭ ವಾರ್ತೆ ಬೀದರ್
ಬೀದರ್ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನ.21 ಹಾಗೂ 22ರಂದು 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದ್ದು ಸಮ್ಮೇಳನಕ್ಕೆ ಎಲ್ಲ ರೀತಿಯ ಸಿದ್ದತೆ ನಡೆಯುತ್ತಿವೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನಶೆಟ್ಟಿ ಹೇಳಿದರು.ಜಿಲ್ಲಾ ಪತ್ರಿಕಾ ಭವನದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಾಹಿತಿ ಡಾ.ಬಸವರಾಜ ಬಲ್ಲೂರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ಸಮ್ಮೇಳನದ ನಿಮಿತ್ತ ನ.21ರಂದು ಬೆಳಿಗ್ಗೆ 8.30ಕ್ಕೆ ನಗರದ ಮನ್ನಳ್ಳಿ ರಸ್ತೆಯಲ್ಲಿರುವ ಕರ್ನಾಟಕ ಪದವಿಪೂರ್ವ ಕಾಲೇಜಿನಿಂದ ರಂಗ ಮಂದಿರದವರೆಗೆ ಅಲಂಕೃತ ಸಾರೋಟಿನಲ್ಲಿ ಕನ್ನಡ ತಾಯಿ ಭುವನೇಶ್ವರಿ, ಸಮ್ಮೇಳನ ಸರ್ವಾಧ್ಯಕ್ಷ ಡಾ. ಬಸವರಾಜ ಬಲ್ಲೂರ, ಈವರೆಗಿನ ಸಮ್ಮೇಳನಗಳ ಸರ್ವಾಧ್ಯಕ್ಷರು, ಈವರೆಗಿನ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ, ತಾಲ್ಲೂಕು ಅಧ್ಯಕ್ಷರ ಮೆರವಣಿಗೆ ಜರುಗಲಿದೆ. ಶಾಸಕ ರಹೀಂಖಾನ್ ಮೆರವಣಿಗೆಗೆ ಚಾಲನೆ ನೀಡಲಿದ್ದು, ಕೆಆರ್ಇ ಸಂಸ್ಥೆಯ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.
ಅಂದು ಬೆಳಿಗ್ಗೆ 11.30ಕ್ಕೆ ರಂಗಮಂದಿರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪತ್ರಕರ್ತ ದಿನೇಶ ಅಮೀನ ಮಟ್ಟು ಸಮ್ಮೇಳನ ಉದ್ಘಾಟಿಸುವರು. ಬಸವ ಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ, ಹುಲಸೂರಿನ ಶಿವಾನಂದ ಸ್ವಾಮೀಜಿ ನೇತೃತ್ವ, ಮಲ್ಲಯ್ಯಗಿರಿ ಆಶ್ರಮದ ಡಾ.ಬಸವಲಿಂಗ ಅವಧೂ ತರು ನೇತೃತ್ವ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸುವರು.ಸಮ್ಮೇಳನ ಸರ್ವಾಧ್ಯಕ್ಷ ಡಾ.ಬಸವರಾಜ ಬಲ್ಲೂರ ಸರ್ವಾಧ್ಯಕ್ಷರ ನುಡಿಗಳನ್ನಾಡುವರು. ಸಂತ ಸೇವಾಲಾಲ್ ಮಹಾರಾಜರ ಜನ್ಮಸ್ಥಾನ ಮಹಾ ಮಠ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಔರಾದ್ ಶಾಸಕ ಅಧ್ಯಕ್ಷ ಪ್ರಭು ಚವಾಣ್ ಅವರನ್ನು ಸನ್ಮಾನಿಸಲಾಗುವುದು. ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಶಾಸಕ ಶರಣು ಸಲಗರ ಪುಸ್ತಕ ಮಳಿಗೆ ಉದ್ಘಾಟಿಸುವರು. ಶಾಸಕ ಡಾ.ಸಿದ್ಧಲಿಂಗಪ್ಪ ಪಾಟೀಲ ಉದ್ಯಮ ಮಳಿಗೆ ಹಾಗೂ ಎನ್.ಎಸ್.ಎಸ್.ಕೆ. ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಚಿತ್ರಕಲಾ ಮಳಿಗೆ ಉದ್ಘಾಟಿಸುವರು. ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ಆಶಯ ನುಡಿಗಳನ್ನಾಡುವರು. ನ.22 ರಂದು ಬೆಳಿಗ್ಗೆ 9.30ಕ್ಕೆ ‘ಸಂಸ್ಕೃತಿ ಸುದಿನ’ ಶೀರ್ಷಿಕೆಯಡಿ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಸೌರಭ ನಡೆಯಲಿದೆ. ಸಂಜೆ 6.45ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು ಸಾನಿಧ್ಯ, ಜಗದ್ಗುರು ಶಿವಯೋಗೀಶ್ವರ ಸ್ವಾಮೀಜಿ ನೇತೃತ್ವ, ಕಸಾಪ ನಿಕಟಪೂರ್ವ ಜಿಲ್ಲಾ ಅಧ್ಯಕ್ಷ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಅಧ್ಯಕ್ಷತೆ ವಹಿಸುವರು.
ಸಾಹಿತಿ ಡಾ.ಬಿ.ಬಿ.ಪೂಜಾರ ಸಮಾರೋಪ ನುಡಿ, ಡಾ.ಬಸವರಾಜ ಬಲ್ಲೂರ ಸಮ್ಮೇಳನ ಸರ್ವಾಧ್ಯಕ್ಷರ ನುಡಿಗಳನ್ನಾಡುವರು. ಸಂಸದ ಸಾಗರ್ ಖಂಡ್ರೆ, ಎಂಎಲ್ಸಿಗಳು ಇನ್ನಿತರರು ಭಾಗವಹಿಸುವರು. ಬಿಡಿಎ ಮಾಜಿ ಅಧ್ಯಕ್ಷ ಬಾಬುವಾಲಿ, ಪ್ರಮುಖರಾದ ಜೈರಾಜ್ ಖಂಡ್ರೆ, ಹಾವಶೆಟ್ಟಿ ಪಾಟೀಲ, ಕಸಾಪ ಜಿಲ್ಲಾ ಹಿರಿಯ ಉಪಾಧ್ಯಕ್ಷ ಬಾಬುರಾವ್ ದಾನಿ, ಗೌರವ ಕಾರ್ಯದರ್ಶಿ ಶಿವಶಂಕರ ಟೋಕರೆ, ಬೀದರ್ ತಾಲ್ಲೂಕು ಅಧ್ಯಕ್ಷ ಟಿ.ಎಂ.ಮಚ್ಚೆ, ಮೆರವಣಿಗೆ ಸಮಿತಿ ಅಧ್ಯಕ್ಷ ರಾಜೇಂದ್ರ ಮಣಗೀರೆ, ಪ್ರಮುಖರಾದ ಉಮೇಶ ಜಾಬಾ, ದೇವೇಂದ್ರ ಕರಂಜೆ, ಸಿದ್ಧಾರೂಢ ಭಾಲ್ಕೆ, ರತ್ನಾ ಪಾಟೀಲ, ರೂಪಾ ಪಾಟೀಲ, ಸಂಜು ಅಲ್ಲೂರೆ, ಶಿವಕುಮಾರ ರತ್ನಾಪುರ ಇದ್ದರು.