ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಗುಡ್ಡದ ಮೇಲ್ಭಾಗದಲ್ಲಿ ರಸ್ತೆ ನಿರ್ಮಿಸಲಾಗಿದೆ. ಅಲ್ಲದೆ, ಅರಣ್ಯ ಇಲಾಖೆ ಅಳವಡಿಸಿದ್ದ ಬೇಲಿಯನ್ನು ನಾಶಪಡಿಸಲಾಗಿದೆ.

ಭಟ್ಕಳ: ತಾಲೂಕಿನ ಮಾವಿನಕುರ್ವೆ ವ್ಯಾಪ್ತಿಯ ಗೊಂಡರಕೇರಿಯಲ್ಲಿ ಖಾಸಗಿ ಜಮೀನಿನ ಮಾಲೀಕರು ನಡೆಸುತ್ತಿರುವ ಮಣ್ಣಿನ ಅಗೆಯುವಿಕೆಯಿಂದ ಸಾರ್ವಜನಿಕರಿಗೆ ಹಲವು ರೀತಿಯ ಸಮಸ್ಯೆಗಳು ಎದುರಾಗುತ್ತಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸ್ಥಳೀಯರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಗುಡ್ಡದ ಮೇಲ್ಭಾಗದಲ್ಲಿ ರಸ್ತೆ ನಿರ್ಮಿಸಲಾಗಿದೆ. ಅಲ್ಲದೆ, ಅರಣ್ಯ ಇಲಾಖೆ ಅಳವಡಿಸಿದ್ದ ಬೇಲಿಯನ್ನು ನಾಶಪಡಿಸಲಾಗಿದೆ. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಬೋರ್‌ವೆಲ್ ಕೊರೆಸಲಾಗಿದ್ದು, ಸಾರ್ವಜನಿಕ ರಸ್ತೆಯ ಪಕ್ಕದಲ್ಲಿದ್ದ ಚರಂಡಿಯನ್ನೂ ಖಾಸಗಿ ಹಿತಾಸಕ್ತಿಗಾಗಿ ಸಂಪೂರ್ಣ ಮುಚ್ಚಲಾಗಿದೆ ಎಂಬ ಆರೋಪಗಳನ್ನು ಸ್ಥಳೀಯರು ಮಾಡಿದ್ದಾರೆ.

ಗುಡ್ಡವನ್ನು ಸುಮಾರು 30ರಿಂದ 40 ಅಡಿ ಲಂಬವಾಗಿ ಅಗೆದು, ವಾಣಿಜ್ಯ ಉದ್ದೇಶಕ್ಕಾಗಿ ಮಣ್ಣನ್ನು ಬೇರೆಡೆಗೆ ಸಾಗಿಸಲಾಗುತ್ತಿದೆ. ಮಳೆಗಾಲದಲ್ಲಿ ಈಗಾಗಲೇ ಭೂಕುಸಿತದಂತಹ ಘಟನೆಗಳು ಸಂಭವಿಸುತ್ತಿದ್ದು, ಮುಂದಿನ ದಿನಗಳಲ್ಲಿ ಗುಡ್ಡ ಕುಸಿದರೆ ಅದರ ಕೆಳಭಾಗದಲ್ಲಿ ವಾಸಿಸುತ್ತಿರುವ ಸುಮಾರು 200ಕ್ಕೂ ಹೆಚ್ಚು ಕುಟುಂಬಗಳ ಸುರಕ್ಷತೆಗೆ ಅಪಾಯ ಎದುರಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಗುಡ್ಡದ ಕೆಳಭಾಗದಲ್ಲಿ ಭತ್ತ ಬೆಳೆಯುವ ಕೃಷಿ ಗದ್ದೆಗಳು, ಸಾರ್ವಜನಿಕ ಕೆರೆಗಳು ಹಾಗೂ ತೋಡುಗಳಿವೆ. ಮಣ್ಣಿನ ಅಗೆಯುವಿಕೆಯಿಂದ ಗುಡ್ಡದ ಜೇಡಿ ಮಣ್ಣು ಮಳೆನೀರಿನೊಂದಿಗೆ ಕೊಚ್ಚಿಕೊಂಡು ಬಂದು ಕೃಷಿ ಭೂಮಿಗೆ ಸೇರುತ್ತಿದೆ. ಇದರಿಂದ ಫಲವತ್ತಾದ ಕೃಷಿ ಭೂಮಿ ಹಾಳಾಗಿ ಕೃಷಿಗೆ ಅಯೋಗ್ಯವಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಮಣ್ಣು ಕೆರೆಗಳಿಗೆ ಸೇರಿ ಅವು ಮುಚ್ಚಿಹೋಗುವ ಆತಂಕವೂ ಎದುರಾಗಿದೆ. ಇದರಿಂದ ಸಾರ್ವಜನಿಕ ಜಲಮೂಲಗಳಿಗೆ ಧಕ್ಕೆಯಾಗಿ ಮುಂದಿನ ದಿನಗಳಲ್ಲಿ ಅಂತರ್ಜಲದ ಮಟ್ಟ ಕುಸಿಯುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ. ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ಮಣ್ಣಿನ ಅಗೆಯುವಿಕೆಯ ಕಾನೂನುಬದ್ಧತೆ, ಪರಿಸರದ ಮೇಲಿನ ಪರಿಣಾಮ ಹಾಗೂ ಸಾರ್ವಜನಿಕರ ಸುರಕ್ಷತೆಯ ಕುರಿತು ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಆಗ್ರಹಿಸಲಾಗಿದೆ.

ಮನವಿ ಸ್ವೀಕರಿಸಿದ ತಹಸೀಲ್ದಾರರು ಪರಿಶೀಲಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷೆ ಪರಮೇಶ್ವರಿ ಗೊಂಡ, ಸ್ಥಳೀಯರಾದ ಯೋಗೇಶ ನಾಯ್ಕ, ಶಿವರಾಜ ನಾಯ್ಕ, ಲೋಕೇಶ ನಾಯ್ಕ, ಗುರಪಾದ ನಾಯ್ಕ ಸೇರಿದಂತೆ ಸ್ಥಳೀಯರಿದ್ದರು.