ಮಂಕಾಳ ವೈದ್ಯ ತಮ್ಮ ಸ್ಥಾನದ ಮಹತ್ವವನ್ನು ಅರಿಯಬೇಕಿತ್ತು. ದೇಶದ ಪ್ರಧಾನಿ ಮತ್ತು ಬಿಜೆಪಿ ಬಗ್ಗೆ ಸುಳ್ಳಿನ ಕಂತೆ ಬಿಚ್ಚಿಡುವ ಇವರೇ ದೊಡ್ಡ ಸುಳ್ಳಿನ ಸರದಾರರು. ಕ್ಷೇತ್ರದಲ್ಲಿ ಅಧಿಕಾರದ ದುರ್ಬಳಕೆ, ದರ್ಪ ತೋರಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಸುನೀಲ ನಾಯ್ಕ ಆರೋಪಿಸಿದರು.

ಭಟ್ಕಳ: ಡೆಪ್ಯುಟಿ ಸ್ಪೀಕರಂತಹ ಗೌರವದ ಸ್ಥಾನದಲ್ಲಿದ್ದುಕೊಂಡು ಮಂಕಾಳ ವೈದ್ಯ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿರುವುದು ಖಂಡನೀಯ. ಮಂಕಾಳ ವೈದ್ಯ ಅವರು ಸುಳ್ಳನ್ನು ಕಿಸೆಯಲ್ಲಿ ತುಂಬಿಕೊಂಡು ತಿರುಗುವವರಾಗಿದ್ದು, ಸುಳ್ಳನ್ನು ಸತ್ಯ ಮಾಡಲು ಹೊರಟರೆ ಕ್ಷೇತ್ರದ ಜನರು ನಂಬುವುದಿಲ್ಲ ಎಂದು ಮಾಜಿ ಶಾಸಕ ಸುನೀಲ ನಾಯ್ಕ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಕಾಳ ವೈದ್ಯ ತಮ್ಮ ಸ್ಥಾನದ ಮಹತ್ವವನ್ನು ಅರಿಯಬೇಕಿತ್ತು. ದೇಶದ ಪ್ರಧಾನಿ ಮತ್ತು ಬಿಜೆಪಿ ಬಗ್ಗೆ ಸುಳ್ಳಿನ ಕಂತೆ ಬಿಚ್ಚಿಡುವ ಇವರೇ ದೊಡ್ಡ ಸುಳ್ಳಿನ ಸರದಾರರು. ಕ್ಷೇತ್ರದಲ್ಲಿ ಅಧಿಕಾರದ ದುರ್ಬಳಕೆ, ದರ್ಪ ತೋರಿಸುತ್ತಿದ್ದಾರೆ. ಶಾಸಕರಾಗಿ 4 ವರ್ಷ ಆಗುತ್ತಾ ಬಂದರೂ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗದೇ ತಮ್ಮ ವಯಕ್ತಿಕ ಅಭಿವೃದ್ಧಿ ಕಾರ್ಯದಲ್ಲಿ, ಆಸ್ತಿ ಖರೀದಿಯಲ್ಲಿ ತಲ್ಲೀನರಾಗಿದ್ದಾರೆ. ಶಾಸಕನಾಗಿ ಗೆದ್ದು ಅಂಗಿ ಬಟನ್ ತೆಗೆಯುವುದರೊಳಗಾಗಿ ಗೊಂಡ ಸಮುದಾಯಕ್ಕೆ ಎಸ್ಟಿ ಪ್ರಮಾಣಪತ್ರ ಕೊಡಿಸುತ್ತೇನೆಂದು ಭರವಸೆ ಕೊಟ್ಟಿದ್ದ ಇವರು ಈಗ ಎಸ್ಟಿ ಪ್ರಮಾಣಪತ್ರದ ಬಗ್ಗೆ ಚಕಾರ ಎತ್ತುತ್ತಿಲ್ಲ. ತನ್ನದೇ ಸಮುದಾಯದ ಮೊಗೇರರಿಗೆ ಎಸ್ಸಿ ಪ್ರಮಾಣ ಪತ್ರ ಕೊಡಿಸಲು ಇವರಿಂದ ಆಗಲಿಲ್ಲ. ಇವರ ಸಮುದಾಯದ ಹೆಣ್ಣುಮಕ್ಕಳು ಎಸ್ಸಿ ಪ್ರಮಾಣಪತ್ರ ಕೊಡಿ ಇಲ್ಲವೇ ದಯಾಮರಣಕ್ಕೆ ಅವಕಾಶ ಕೊಡಿ ಎಂದು ಪ್ರಜಾಸೇವೆ ಸಭೆಯಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದರು.

ಪ್ರಮುಖ ಗೋವಿಂದ ನಾಯ್ಕ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಪ್ರಜಾಪ್ರಭುತ್ವದ ಬಗ್ಗೆ ಎಷ್ಟು ಗೌರವವಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಮಂಕಾಳ ವೈದ್ಯರಿಗೆ ಬಿಜೆಪಿ, ನರೇಂದ್ರ ಮೋದಿ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ ಎಂದರು.

ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಈಶ್ವರ ಎನ್. ನಾಯ್ಕ ಮಾತನಾಡಿ, ಮಂಕಾಳ ವೈದ್ಯರು ಉಸ್ತುವಾರಿ ಸಚಿವ ಎಂಬ ಭ್ರಮೆಯಲ್ಲಿದ್ದಂತಿದೆ. ಇವರೊಬ್ಬ ವಿಧಾನಸಭೆಯ ಉಪಸಭಾಧ್ಯಕ್ಷರಾಗಿದ್ದು, ಆ ಹುದ್ದೆಯ ಘನತೆ ಗೌರವಕ್ಕೆ ತಕ್ಕಂತೆ ನಡೆದುಕೊಳ್ಳಬೇಕು ಎಂದರು.

ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಜಿಲ್ಲಾ ಕಾರ್ಯದರ್ಶಿಗಳಾದ ಸುಬ್ರಾಯ ದೇವಡಿಗ, ಶ್ರೀಕಾಂತ ನಾಯ್ಕ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿವಾನಿ ಭಟ್ಕಳ, ಪ್ರಮುಖರಾದ ರಾಜೇಶ ನಾಯ್ಕ, ಭಾಸ್ಕರ ದೈಮನೆ, ಎಂ.ಡಿ. ನಾಯ್ಕ, ಶ್ರೀನಿವಾಸ ನಾಯ್ಕ, ಶ್ರೀಧರ ನಾಯ್ಕ ಮುಂತಾದವರಿದ್ದರು.