- ಕಲಬುರಗಿಯ ಸೆಂಟ್ರಲ್ ಜೈಲಿಂದ ಮಂಗಳವಾರ ಬೆಳಗ್ಗೆ ಸಂತೋಷ್ ಸೇರಿ ಮೂರು ಕೈದಿಗಳ ಪರಾರಿ
- ಬಂಧನ ಬಳಿಕ ಆತನನ್ನು ಕಲಬುರಗಿ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾಗಿ ಹೇಳಿದ್ದ ಬೀದರ್ ಪೊಲೀಸರು
- ಬುಧವಾರ ಬೆಳಗ್ಗೆ ಕಾಲಿಗೆ ಗುಂಡು ಹೊಡೆದು ಸಂತೋಷ್ ಬಂಧನ ಎಂದು ಕಲಬುರಗಿ ಪೊಲೀಸರ ಹೇಳಿಕೆ- ಒಬ್ಬನೇ ವ್ಯಕ್ತಿಯನ್ನು ಬಂಧಿಸಿದ್ದಾಗಿ ಎರಡು ಜಿಲ್ಲೆ ಪೊಲೀಸರ ಹೇಳಿಕೆಯಿಂದಾಗಿ ಭಾರೀ ಗೊಂದಲ ಸೃಷ್ಟಿ
ಕಲಬುರಗಿ ಕೇಂದ್ರ ಕಾರಾಗೃಹದ ಕಾಂಪೌಂಡ್ ಜಿಗಿದು ಪರಾರಿಯಾಗಿದ್ದ ಮೂವರು ಕೈದಿಗಳ ಪೈಕಿ ಸಂತೋಷ್ ಎಂಬಾತನ ಕಾಲಿಗೆ ಬುಧವಾರ ನಸುಕಿನಲ್ಲಿ ಕಲಬುರಗಿ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ. ಆತನ ಬಂಧನಕ್ಕೆ ತೆರಳಿದ್ದಾಗ ಪೊಲೀಸರ ಮೇಲೆ ಆತ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹೊಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಬೀದರ್ ಜಿಲ್ಲೆ ಹುಮನಾಬಾದ್‌ನ ಚೆಕ್‌ಪೋಸ್ಟ್‌ನಲ್ಲಿ ಮಂಗಳವಾರ ರಾತ್ರಿಯೇ ಬಸ್ಸಿನಲ್ಲಿ ಕ್ಯಾಪ್ ಹಾಕಿಕೊಂಡು ಕುಳಿತಿದ್ದ ಈ ಆರೋಪಿಯನ್ನು ಅಲ್ಲಿನ ಪೊಲೀಸರು ಬಂಧಿಸಿದ್ದು ವರದಿಯಾಗಿತ್ತು. ಹೀಗಾಗಿ, ಹುಮನಾಬಾದ್ ಪೊಲೀಸರು ಬಂಧಿಸಿದ್ದ ಆರೋಪಿಯನ್ನೇ ಮರುದಿನ ಬೆಳಗ್ಗೆ ಕಲಬುರಗಿ ಪೊಲೀಸರು ಎನ್‌ಕೌಂಟರ್ ಮೂಲಕ ಬಂಧಿಸಿರುವುದಾಗಿ ಹೇಳಿಕೊಂಡಿದ್ದು, ಗೊಂದಲಕ್ಕೆ ಕಾರಣವಾಗಿದೆ. ಇದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತವರಲ್ಲೇ ನಕಲಿ ‘ಬಂಧನ’ ಆರೋಪಕ್ಕೆ ಗ್ರಾಸ ಒದಗಿಸಿದೆ.
ಕೊಲೆ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿ ಇಲ್ಲಿನ ಸೆಂಟ್ರಲ್ ಜೈಲಿನಲ್ಲಿದ್ದ ಮೂವರು ಕೈದಿಗಳು ಮಂಗಳವಾರ ನಸುಕಿನ ಜಾವ ಜೈಲಿನ ಕಾಂಪೌಂಡ್ ಹಾರಿ ಪರಾರಿಯಾಗಿದ್ದರು.
ಈ ಮಧ್ಯೆ, ಮಂಗಳವಾರ ರಾತ್ರಿ ಹುಮನಾಬಾದ್ ಚೆಕ್ ಪೋಸ್ಟ್‌ನಲ್ಲಿ ಪೊಲೀಸರು ತಪಾಸಣೆ ಕೈಗೊಂಡಿದ್ದ ವೇಳೆ ಸಂತೋಷ್‌ನನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರು. ಈತ ಬೀದರ್ ಕಡೆಗೆ ಪ್ರಯಾಣಿಸುತ್ತಿದ್ದ ಬಸ್ಸಿನಲ್ಲಿ ಕ್ಯಾಪ್ ಹಾಕಿಕೊಂಡು ಕುಳಿತಿದ್ದ. ಆದರೆ, ಇದೇ ವ್ಯಕ್ತಿಯನ್ನು ಬುಧವಾರ ನಸುಕಿನಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ, ಪರಾರಿಯಾಗಲು ಯತ್ನಿಸುತ್ತಿದ್ದಾಗ ಬಂಧಿಸಿದ್ದಾಗಿ ಕಲಬುರಗಿ ಪೊಲೀಸರು ತಿಳಿಸಿದ್ದಾರೆ. ಹೀಗಾಗಿ, ಈತನ ಬಂಧನ ಪ್ರಕರಣ ಗೊಂದಲಕ್ಕೆ ಕಾರಣವಾಗಿದೆ.
ಹುಮನಾಬಾದ್‌ನಲ್ಲಿ ಸಂತೋಷ್‌ನ ಬಂಧನದ ವರದಿ ಬಗ್ಗೆ ಆಯುಕ್ತರ ಗಮನ ಸೆಳೆದಾಗ, ನಿನ್ನೆ ಆ ಎಲ್ಲಾ ಸಂಗತಿಗಳು ತುಂಬಾ ಗೊಂದಲದಲ್ಲಿದ್ದವು. ಬುಧವಾರ ಬೆಳಗಿನ ಜಾವ ನಾವು ಬಂಧನಕ್ಕೆ ತೆರಳಿದಾಗ ಆತ ಹಲ್ಲೆ ಮಾಡಿ ಪರಾರಿಗೆ ಮುಂದಾದ. ಆಗ ನಮ್ಮ ಅಧಿಕಾರಿಗಳು ಆತ್ಮರಕ್ಷಣೆಗೋಸ್ಕರ ಗುಂಡು ಹಾರಿಸಿದ್ದಾರೆಂದು ಸ್ಪಷ್ಟಪಡಿಸಿದರು.
ಈ ಮಧ್ಯೆ, ಕೈದಿಗಳ ಪರಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ಕೇಂದ್ರ ಕಾರಾಗೃಹದ 8 ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಕರ್ತವ್ಯಲೋಪದ ಆರೋಪದಡಿ ಮೂವರು ವಾರ್ಡರ್‌ಗಳು, ಇಬ್ಬರು ಮುಖ್ಯ ವಾರ್ಡರ್‌ಗಳು, ಒಬ್ಬ ಸಹಾಯಕ ಅಧೀಕ್ಷಕ, ಒಬ್ಬ ಅಧೀಕ್ಷಕ ಹಾಗೂ ಒಬ್ಬ ಕಾರ್ಯನಿರ್ವಾಹಕ ಜೈಲರ್ ಗಳು ಅಮಾನತುಗೊಂಡಿದ್ದಾರೆ.