ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಡಿಡಿಪಿಐ ಆದೇಶವನ್ನೇ ಮಾನದಂಡ ಮಾಡಿಕೊಂಡಿರುವ ಸಂಸ್ಥೆ ಮತ್ತು ಕೆಲ ಬಿಇಒಗಳು ತಾವೇ ಸ್ವತಃ ಕೆಲ ಮುಖ್ಯ ಶಿಕ್ಷಕರಿಗೆ ಮೌಖಿಕ ಆದೇಶದ ಮೂಲಕ ಆಯಾ, ಅಟೆಂಡರ್ ನೇಮಕಕ್ಕೂ ಕಾರಣರಾಗಿ ಕರ್ತವ್ಯ ಲೋಪ ಎಸಗಿರುವ ಪ್ರಕರಣಗಳು ಕೊಳ್ಳೇಗಾಲ ತಾಲೂಕು ಮಾತ್ರವಲ್ಲ ಚಾ.ನಗರ ಜಿಲ್ಲಾದ್ಯಂತ ಸಾಕಷ್ಟಿವೆ ಎನ್ನಲಾಗುತ್ತಿದೆ. ಎಂ.ಶ್ರೀನಿವಾಸ್, ಸುನೀಲ್, ಪ್ರಸಾದ್, ಮಹದೇವಮ್ಮ ಸೇರಿದಂತೆ ಅನೇಕ ಮಂದಿಯನ್ನು ನಿಯಮ ಉಲ್ಲಂಘಿಸಿ ಹಣ ಪಡೆದು ನೇಮಕ ಮಾಡಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪಗಳಿವೆ. ಅಲ್ಲದೆ ದೀಪಿಕಾ, ಗೀತಾ ,ಅಂಚಿಪಾಳ್ಯದ ಕವಿತಾ , ಅಂಜಲಿ, ಕಾವ್ಯ, ಗೀತಾ, ಪ್ರಸಾದ್ ಸೇರಿದಂತೆ 40ಮಂದಿಯನ್ನು (ಯೋಗ ಮತ್ತು ಅಟೆಂಡರ್) ನಮೂದಿಸಿ ಆದೇಶ ನೀಡಲಾಗಿರುವುದು ಮತ್ತು ಸಕಾಲದಲ್ಲಿ ಅವರಿಗೆ ಸಂಬಳ ಪಾವತಿಸದಿರುವುದು. ನಾನಾ ಸಂಶಯಗಳಿಗೆ ಆಸ್ಪದ ಮಾಡಿಕೊಟ್ಟಿದೆ. ಅಲ್ಲದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಜ್ಜಿಪುರ ಮತ್ತು ರಾಮಾಪುರ ಶಾಲೆಗಳಲ್ಲಿ ಆಯಾವನ್ನು ಸಹಾ ನಿಯಮ ಮೀರಿ ನೇಮಿಸಿಕೊಳ್ಳಲಾಗಿದೆ. ಈಸಂಬಂಧ ಹಿರಿಯ ಅಧಿಕಾರಿಗಳಿಗೆ ಬರೆದಿರುವ ಪತ್ರದಲ್ಲೆ ಮುಖ್ಯ ಶಿಕ್ಷಕರು ಉಲ್ಲೇಖಿಸಿದ್ದು ಆಯಾ ನೇಮಕದ ವಿಚಾರ ಬಿಇಒ ಗಮನಕ್ಕೂ ತರಲಾಗಿದೆ ಎಂದು ಕಳೆದ 2- 3ತಿಂಗಳ ಹಿಂದೆಯೇ ಪತ್ರ ಬರೆದಿರುವುದು ಬೆಳಕಿಗೆ ಬಂದಿದೆ.
ನಿಯಮ ಮೀರಿ ಆದೇಶ ಪ್ರಕರಣ:ಹನೂರು ಬಿಇಒ ವಿರುದ್ಧ ದೂರು ಹನೂರು ಶೈಕ್ಷಣಿಕ ವಲಯದ ಬಿಇಒ ಒಬ್ಬ ಸರ್ಕಾರಿ ಅಧಿಕಾರಿಯಾಗಿ ನಿಯಮ ಮೀರಿ ಡಿ.20 ರಂದು ಆದೇಶ ಹೊರಡಿಸಿದ್ದು ಅವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು ಎಂದು ನಿರಂಜನ್ ಎಂಬುವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಡಿಡಿಪಿಐ ಅವರು ಕಳೆದ ಜು.7 ರಂದು ಕೊಳ್ಳೇಗಾಲದ ಕಲಾ ಸಂಸ್ಥೆ ಗಣಕಯಂತ್ರ, ಯೋಗ ಶಿಕ್ಷಕರನ್ನು ಮಾತ್ರ ನೇಮಿಸಿಕೊಳ್ಳಲು 12ಷರತ್ತುಗನ್ನು ವಿಧಿಸಿ ಆದೇಶ ನೀಡಿದ್ದಾರೆ. ಆದರೆ ಆದೇಶದಲ್ಲಿ ಅಟೆಂಡರ್ ನೇಮಕಕ್ಕೆ ಸೂಚಿಸಿರುವುದಿಲ್ಲ, ಈ ಹಿನ್ನೆಲೆ ತಾವೇ ಈ ಪ್ರಕರಣದಲ್ಲಿ ಭಾಗಿಯಾಗಿ ಅಟೆಂಡರ್ ನೇಮಿಸಿಕೊಂಡು ಪುನಃ ತಾವೇ ಅಟೆಂಡರ್ ಬಿಡುಗಡೆಗೊಳಿಸಿ ಎಂದು ಕಳೆದ ಡಿ.20ರಂದು ಸರ್ಕಾರಿ ಅಧಿಕಾರಿಯಾಗಿ ಸರ್ಕಾರದ ಗಮನಕ್ಕೆ ತರದೆ ಆದೇಶ ಹೊರಡಿಸುವ ಮೂಲಕ ಕರ್ತವ್ಯಲೋಪ ಎಸಗಿದ್ದಾರೆ. ತರವಲ್ಲದ ವರ್ತನೆ ತೋರಿದ ಇವರ ಮೇಲೆ ಶಿಸ್ತು ಕ್ರಮಕೈಗೊಳ್ಳುವಂತೆ ನಿರಂಜನ್ ದೂರಿನಲ್ಲಿ ಮನವಿ ಮಾಡಿದ್ದಾರೆ.
ಗರಂ; ಕಡತ ಪರಿಶೀಲನೆ
ಈ ಪ್ರಕರಣದಲ್ಲಿ ಸತ್ಯಾಸತ್ಯತೆ ಪರಿಶೀಲನೆ ಹಿನ್ನೆಲೆ ಡಿಡಿಪಿಐ ಹೊರಡಿಸಿರುವ ಆದೇಶ, ಪೋಸ್ಟ್ ಮೂಲಕ ಬಿಇಒಗಳಿಗೆ ರವಾನೆಯಾದ ದಿನಾಂಕ, ಸಂಖ್ಯೆ ಮತ್ತು ಕಲಾಂ ಸಂಸ್ಥೆಗೆ ಕಳುಹಿಸಲಾದ ಪತ್ರದ ಸಂಖ್ಯೆ, ದಿನಾಂಕಗಳನ್ನು ವಿವರವಾಗಿ ಪರಿಶೀಲಿಸಿ ಈ ಸಂಬಂಧ ನಕಲು ಪ್ರತಿ ಪಡೆದುಕೊಂಡರು ಎನ್ನಲಾಗಿದೆ.
ಚಾ.ನಗರ ಜಿಲ್ಲೆಯ 5 ಮಂದಿ ಬಿಇಒಗಳ ಸಮ್ಮುಖದಲ್ಲಿಯೇ ನಿಯಮ ಮೀರಿ ಆದೇಶ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ಶೀಘ್ರದಲ್ಲೆ ನಡೆಸಲಾಗುವುದು, ಡಿಡಿಪಿಐ ಅಲ್ಲದೆ ಬಿಇಒಗಳು ಶಾಮೀಲಾಗಿರುವುದು ವಿಚಾರಣೆ ವೇಳೆ ಸಾಬೀತಾದರೆ ಮುಂದಿನ ಕ್ರಮಕ್ಕಾಗಿ ಸರ್ಕಾರಕ್ಕೆ ವಿಚಾರಣಾ ವರದಿ ಸಲ್ಲಿಸಲಾಗುವುದು. ದೂರುದಾರ ನಿರಂಜನ್ ಈ ಸಂಬಂಧ ನೀಡಿರುವ ದಾಖಲೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಪಾಂಡುರಂಗ, ಜಂಟಿ ನಿರ್ದೇಶಕ, ಸಾ.ಶಿ.ಇಲಾಖೆ ಮೈಸೂರು