ಆಶ್ರಮ ಶಾಲೆಗಳಿಗೆ ನವೋದಯ ಮಾದರಿ ಶಿಕ್ಷಣ ಜಾರಿಯಾಗಲಿ

KannadaprabhaNewsNetwork | Published : Mar 15, 2025 1:01 AM

ಸಾರಾಂಶ

ಚಾಮರಾಜನಗರದಲ್ಲಿ ಸೋಲಿಗ ಮಹಿಳೆ ಡಾ.ಎಸ್‌.ರತ್ನಮ್ಮ ಕರ್ನಾಟಕದಲ್ಲಿ ಆಶ್ರಮ ಶಾಲೆಗಳು ಮತ್ತು ಬುಡಕಟ್ಟು ಶಿಕ್ಷಣದ ಮೇಲೆ ಇದರ ಪ್ರಭಾವ ಎಂಬ ಸಂಶೋಧನಾ ವರದಿ ಬಿಡುಗಡೆ ಮಾಡಿದರು.

ಚಾಮರಾಜನಗರ: ಆದಿವಾಸಿ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ತೆರೆಯಲಾಗಿರುವ ಆಶ್ರಮ ಶಾಲೆಗಳಿಗೆ ನವೋದಯ ಮಾದರಿಯಲ್ಲಿ ಶಿಕ್ಷಣ ಜಾರಿಗೊಳಿಸಬೇಕು ಎಂದು ಸೋಲಿಗ ಮಹಿಳೆ ಡಾ.ಎಸ್‌.ರತ್ನಮ್ಮ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಆಶ್ರಮ ಶಾಲೆಗಳಲ್ಲಿ ಮೂಲಸೌಕರ್ಯವಿಲ್ಲ, ಅತಿಥಿ ಶಿಕ್ಷಕರನ್ನು ಹೊರತು ಪಡಿಸಿದರೆ ಕಾಯಂ ಶಿಕ್ಷಕರ ನೇಮಕ ಮಾಡಿಲ್ಲ. ಇದರಿಂದ ಆದಿವಾಸಿ ಮಕ್ಕಳ ಶಿಕ್ಷಣ ಪ್ರಾಥಮಿಕ ಶಿಕ್ಷಣದಲ್ಲಿಯೇ ಮೊಟಕುಗೊಳ್ಳುತ್ತಿದೆ ಎಂದು ತಿಳಿಸಿದರು. ಕೆರಳ ರಾಜ್ಯದಲ್ಲಿ ಆದಿವಾಸಿ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ನವೋದಯ ಮಾದರಿಯಲ್ಲಿ ಶಾಲೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ರಾಜ್ಯದಲ್ಲೂ ನವೋದಯ ಮಾದರಿ ಶಿಕ್ಷಣ ಜಾರಿಗೊಳಿಸಿದರೆ ಗುಣಮಟ್ಟದ ಶಿಕ್ಷಣ ದೊರೆಯಲಿದೆ ಎಂದರು.

ಆದಿವಾಸಿ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ನಂತರ ಅವರ ಶಾಲೆ ದಾಖಲಾತಿ ಹೊರತು ಪಡಿಸಿದರೆ ಯಾವುದೇ ದಾಖಲೆ ಅವರಲ್ಲಿ ಲಭ್ಯವಿರುವುದಿಲ್ಲ. ಅವರು ವಸತಿ ಶಾಲೆಗಳಿಗೆ ದಾಖಲಾಗಲು ಆಧಾರ್‌, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣಪತ್ರ ಇಲ್ಲದೇ ಶಾಲೆ ತೊರೆಯುತ್ತಿದ್ದಾರೆ. ಆದ್ದರಿಂದ ನವೋದಯ ಶಾಲೆಗಳಲ್ಲಿರುವ 1ನೇ ತರಗತಿಯಿಂದ ಅವರ ಶಿಕ್ಷಣ ಮುಗಿಯುವವರೆಗೂ ಅದೇ ಶಾಲೆಯಲ್ಲಿಯೇ ಶಿಕ್ಷಣ ಸಿಗಬೇಕು ಎಂದರು.

ಮೈಸೂರು ವಿವಿ ಸಹ ಪ್ರಾಧ್ಯಾಪಕ ಡಾ.ಡಿ.ಸಿ.ನಂಜುಂಡ ಮಾತನಾಡಿ, ಮೈಸೂರು ವಿವಿ ಸಾಮಾಜಿಕ ಹೊರಗುಳಿಯುವಿಕೆ ಅಧ್ಯಯನ ಕೇಂದ್ರದ ಮೂಲಕ ನಡೆಸಿದ ಕರ್ನಾಟಕ ಆಶ್ರಮ ಶಾಲೆಗಳ ಸ್ಥಿತಿಗತಿಗಳು ಕುರಿತು ಸಂಶೋಧನಾ ವರದಿ ಸಲ್ಲಿಸಲಾಗಿದೆ. ರಾಜ್ಯದಲ್ಲಿ 123 ಆಶ್ರಮ ಶಾಲೆಗಳಿದ್ದು ಇದರಲ್ಲಿ 95 ಶಾಲೆಗಳಿಗೆ ಭೇಟಿ ನೀಡಿ ಎರಡೂವರೆ ವರ್ಷಗಳ ಕಾಲ ಅಧ್ಯಯನ ಮಾಡಿ ವರದಿ ಸಿದ್ಧಪಡಿಸಲಾಗಿದೆ ಎಂದರು.

ಆಶ್ರಮ ಶಾಲೆಗಳಲ್ಲಿ 5ನೇ ತರಗತಿವರೆಗೆ ಓದುವ ಮಕ್ಕಳು ಆ ನಂತರ 6ನೇ ತರಗತಿಗೆ ಶೇ.90 ರಷ್ಟು ಮಕ್ಕಳು ವಸತಿ ಶಾಲೆಗಳಿಗೆ ಹೋಗುತ್ತಿಲ್ಲ. ಈ ಶಾಲೆಗಳಲ್ಲಿ ಶಿಕ್ಷಕರು, ಮೂಲ ಸೌಕರ್ಯದ ಕೊರತೆ ಹೆಚ್ಚಾಗಿದೆ. ಆದ್ದರಿಂದ ಆಶ್ರಮ ಶಾಲೆಗಳನ್ನು ಎನ್‌ಜಿಒ ವ್ಯಾಪ್ತಿಗೆ ಕೊಡಬೇಕು. ಜೊತೆಗೆ ಈ ಶಾಲೆಗಳಲ್ಲಿ ಎಲ್ಲ ಸಂಸ್ಕೃತಿಯ ಮಕ್ಕಳು ಬಂದರೆ ಅನುಕೂಲವಾಗಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಆದಿವಾಸಿ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ನಾಗೇಂದ್ರ, ಡಾ.ಕೃಷ್ಣಮೂರ್ತಿ, ಆದಿವಾಸಿ ಮುಖಂಡ ಮಹದೇವ ಇದ್ದರು.

Share this article