ಹಾವೇರಿ: ಹುಬ್ಬಳ್ಳಿಯ ನವನಗರದ ಮನೆಯಲ್ಲಿ ನಡೆದಿದ್ದ ಮಂಜುನಾಥ ಶಿವಪ್ಪ ಜಾಧವ(45) ಎಂಬವರ ಕೊಲೆ ಪ್ರಕರಣ ಸಂಬಂಧ ತಾಯಿ-ಮಕ್ಕಳಿಬ್ಬರು ಸೇರಿದಂತೆ ನಾಲ್ವರನ್ನು ಬಂಕಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.ನವನಗರದ ನಿವಾಸಿಯಾದ 35 ವರ್ಷದ ಮಹಿಳೆ, ಅವರ ಇಬ್ಬರು ಅಪ್ರಾಪ್ತ ಮಕ್ಕಳು ಹಾಗೂ ವಾಹನ ಚಾಲಕ ಅಲ್ಲಿಸಾಬ ರಾಜೇಸಾಬ ನದಾಫ ಅವರನ್ನು ಬಂಧಿಸಲಾಗಿದೆ. ಇವರೆಲ್ಲರೂ ಸೇರಿಕೊಂಡು ಮಂಜುನಾಥ ಅವರನ್ನು ಕೊಂದು ಬಂಕಾಪುರ ಬಳಿ ಶವ ಎಸೆದು ಹೋಗಿದ್ದರು.
ಸ್ಥಳದಲ್ಲಿ ದೊರೆತ ಪುರಾವೆಗಳು ಹಾಗೂ ಮೃತದೇಹ ಮೇಲಿದ್ದ ಗಾಯದ ಗುರುತುಗಳನ್ನು ಗಮನಿಸಿ ಇದೊಂದು ಕೊಲೆ ಎಂಬುದನ್ನು ಪೊಲೀಸರು ಖಚಿತಪಡಿಸಿಕೊಂಡಿದ್ದರು.
ಕುಟುಂಬಸ್ಥರು ನೀಡಿದ್ದ ಮಾಹಿತಿ ಆಧರಿಸಿ. ನವನಗರದಲ್ಲಿದ್ದ ಮಹಿಳೆಯನ್ನು ವಶಕ್ಕೆ ಪಡೆದಿದ್ದರು. ಅವಾಗಲೇ ಕೊಲೆ ರಹಸ್ಯ ಪತ್ತೆಯಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಪ್ರಕರಣದಲ್ಲಿ ಬಂಧಿಸಲಾಗಿರುವ ಚಾಲಕ ಅಲ್ಲಿಸಾಬ ರಾಜೇಸಾಬ ನದಾಫ, ಬ್ಯಾಗ್‌ನಲ್ಲಿ ಮೃತದೇಹವಿದ್ದ ಮಾಹಿತಿ ನನಗೆ ಗೊತ್ತಿರಲಿಲ್ಲ. ಬಾಡಿಗೆಗೆಂದು ಕರೆದಿದ್ದಕ್ಕೆ ನಾನು ಹೋಗಿದ್ದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಮಹಿಳೆಯ ಒಂದೇ ಕರೆಗೆ ಆತ ಮನೆಗೆ ಹೋಗಿದ್ದ. ಇದು ಅನುಮಾನ ಮೂಡಿಸಿದೆ ಎಂದು ಪೊಲೀಸರು ಹೇಳಿದರು.ಮಹಿಳೆ ಹಾಗೂ ಇತರರು ಸೇರಿಕೊಂಡು ಸಂಚು ರೂಪಿಸಿ ಮಂಜುನಾಥ್ ಅವರನ್ನು ಹತ್ಯೆ ಮಾಡಿರುವ ಅನುಮಾನ ದಟ್ಟವಾಗಿದೆ. ಈ ಬಗ್ಗೆ ಪುರಾವೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.ನವನಗರ ಠಾಣೆಗೆ ಪ್ರಕರಣ ವರ್ಗ: ಕೃತ್ಯ ನಡೆದ ಸ್ಥಳದ ಆಧಾರದಲ್ಲಿ ಕೊಲೆ ಪ್ರಕರಣವನ್ನು ಬಂಕಾಪುರ ಠಾಣೆಯಿಂದ ಹುಬ್ಬಳ್ಳಿಯ ನವನಗರ ಠಾಣೆಗೆ ವರ್ಗಾವಣೆ ಮಾಡಬೇಕಿದೆ ಎಂದು ಪೊಲೀಸರು ಹೇಳಿದರು.
ಬಂಕಾಪುರ ಬಳಿ ಮೃತದೇಹ ಪತ್ತೆಯಾಗಿದ್ದರಿಂದ, ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಮುಂಬರುವ ದಿನಗಳಲ್ಲಿ ಪ್ರಕರಣವನ್ನು ವರ್ಗಾವಣೆ ಮಾಡುವ ಸಂಬಂಧ ಕಾನೂನು ತಜ್ಞರ ಸಲಹೆ ಪಡೆಯಲಾಗುವುದು ಎಂದು ಬಂಕಾಪುರ ಪಿಎಸ್ಐ ನಿಂಗಪ್ಪ ಕರಕಣ್ಣನವರ ತಿಳಿಸಿದ್ದಾರೆ.ಹೈಕೋರ್ಟ್ ಮಧ್ಯಂತರ ಆದೇಶ: ಸಾಮಾನ್ಯ ಸಭೆ ಮುಂದಕ್ಕೆರಾಣಿಬೆನ್ನೂರು: ಸ್ಥಾಯಿ ಸಮಿತಿ ರಚನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲು ಸ್ಥಳೀಯ ನಗರಸಭೆ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ ಅಧ್ಯಕ್ಷತೆಯಲ್ಲಿ ಮಾ. 14ರಂದು ಸಂಜೆ 4 ಗಂಟೆಗೆ ಕರೆಯಲಾಗಿದ್ದ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ಧಾರವಾಡ ಹೈಕೋರ್ಟ್ ಪೀಠ ನೀಡಿದ ಮಧ್ಯಂತರ ಆದೇಶದ ಪ್ರಕಾರ ಮುಂದೂಡಲಾಗಿದೆ ಎಂದು ಪೌರಾಯುಕ್ತ ಎಫ್.ಐ. ಇಂಗಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.