ಕನ್ನಡಪ್ರಭ ವಾರ್ತೆ ತಿಪಟೂರು

ನಗರಸಭೆ ವ್ಯಾಪ್ತಿಯ ಮುಖ್ಯರಸ್ತೆಗಳನ್ನು ಕಸ ಗುಡಿಸಿ ಸ್ವಚ್ಛಗೊಳಿಸುವ ಕೆಲಸವನ್ನು ರಾತ್ರಿ ಪಾಳಿಯಲ್ಲಿ ಮಾಡಿಸಲು ಸಿಬ್ಬಂದಿ ಹಾಗೂ ಕಾರ್ಮಿಕರನ್ನು ವಿಶೇಷವಾಗಿ ನಿಯೋಜಿಸಲಾಗಿದೆ ಎಂದು ನಗರಸಭಾ ಆಯುಕ್ತ ವಿಶ್ವೇಶ್ವರ ಬದರಗಡೆ ತಿಳಿಸಿದರು.

ನಗರದಲ್ಲಿ ಪ್ರಾರಂಭವಾದ ರಾತ್ರಿ ವೇಳೆಯ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ತಿಪಟೂರು ನಗರವನ್ನು ಕಸಮುಕ್ತ ನಗರವನ್ನಾಗಿಸುವ ನಿಟ್ಟಿನಲ್ಲಿ ಇಂದಿನಿಂದ ರಾತ್ರಿ ಪಾಳಿಯಲ್ಲಿ ಸ್ವಚ್ಛತಾ ಕಾರ್ಯವನ್ನು ಪ್ರಾರಂಭಿಸಲಾಗಿದೆ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು ನಗರದ ಜನತೆ ಸ್ವಯಂಪ್ರೇರಿತರಾಗಿ ಈ ಅಭಿಯಾನದಲ್ಲಿ ಪಾಲ್ಗೊಂಡರೆ ಮಾತ್ರ ತಿಪಟೂರು ಕ್ಲೀನ್ ಸಿಟಿಯಾಗಲು ಸಾಧ್ಯ. ತಿಪಟೂರು ನಗರದ ಜನಸಂಖ್ಯೆ ೮೦ ಸಾವಿರ ದಾಟಿದೆ. ಆದರೆ ನಗರಸಭೆಯ ಸ್ವಚ್ಛತಾ ಸಿಬ್ಬಂದಿ ಕೇವಲ ೧೦೦ ಜನರಿದ್ದಾರೆ. ಆದ್ದರಿಂದ ಇಡೀ ನಗರದ ಸ್ವಚ್ಛತೆ ಕೇವಲ ೧೦೦ಪೌರಕಾರ್ಮಿಕರ ಮೇಲೆ ಅವಲಂಬಿತವಾಗಿಲ್ಲ. ಅವರ ಜೊತೆ ನಗರದ ನಾಗರಿಕರೂ ಸಹಕರಿಸಬೇಕು. ಪ್ರತಿಯೊಬ್ಬ ಪ್ರಜೆಯಲ್ಲಿಯೂ ತನ್ನ ಮನೆ, ಮನೆಯಂಗಳ ಮತ್ತು ಮನೆಯ ಸುತ್ತ-ಮುತ್ತಲ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ತನ್ನ ಮನೆ ಹಾಗೂ ಸುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಂಡರೆ ನಗರವೇ ಸ್ವಚ್ಛವಾದಂತೆ ಎಂದು ತಿಳಿಸಿದರು. ನಗರದ ಸ್ವಚ್ಛತೆ ಹಾಗೂ ಸೌಂದರ್ಯೀಕರಣಕ್ಕೆ ಹಲವಾರು ಕ್ರಮಗಳನ್ನು ಕೈಗೊಂಡಿದ್ದು ಸಾರ್ವಜನಿಕರು ಹಸಿಕಸ, ಒಣಕಸ ಬೇರ್ಪಡಿಸಿ ಮನೆಯ ಬಳಿ ಬರುವ ಕಸ ಸಂಗ್ರಹಣಾ ವಾಹನಕ್ಕೆ ನೀಡಬೇಕು. ಕಸವನ್ನು ಯಾವುದೇ ಕಾರಣಕ್ಕೂ ರಸ್ತೆ ಬದಿಯಲ್ಲಿ, ಖಾಲಿ ಸೈಟುಗಳಲ್ಲಿ ಹಾಕಬಾರದು. ಕಸವನ್ನು ವಾಹನಕ್ಕೆ ನೀಡದೆ ಎಲ್ಲೆಂದರಲ್ಲಿ ಸುರಿದರೆ ಅವರಿಗೆ ದಂಡ ವಿಧಿಸಲಾಗುವುದು. ಒಂದು ದಿನ ವಾಹನ ಬಾರದಿದ್ದರೂ ಹಾಗೇ ಇಟ್ಟುಕೊಂಡು ಮಾರನೇ ದಿನ ವಾಹನಕ್ಕೇ ನೀಡಬೇಕು ಎಂದು ಮನವಿ ಮಾಡಿದರು. ರಾತ್ರಿ ಪಾಳಿಯಲ್ಲಿ ನಗರದ ಸ್ವಚ್ಛತೆಗೆ ೧೦ ಕಾರ್ಮಿಕರನ್ನು ನಿಯೋಜಿಸಲಾಗಿದ್ದು ಬೆಳಗಿನ ಪಾಳಿಗೆ ಇವರನ್ನು ಬಿಟ್ಟು ಬೇರೆ ಕಾರ್ಮಿಕರನ್ನು ನಿಯೋಜಿಸಲಾಗುತ್ತಿದೆ. ನಗರದ ಪ್ರಮುಖ ರಸ್ತೆಯನ್ನು ಮಾತ್ರ ರಾತ್ರಿ ಪಾಳಿಯಲ್ಲಿ ಸ್ವಚ್ಛಗೊಳಿಸುವ ಕೆಲಸ ಪ್ರಾರಂಭಿಸಲಾಗಿದ್ದು ಆರೋಗ್ಯ ನಿರೀಕ್ಷಕರು ಹಾಗೂ ಸ್ವತಹ ತಾವೇ ಇದರ ಮೇಲ್ವಿಚಾರಣೆ ನಡೆಸಲಿದ್ದು, ಪೌರ ಕಾರ್ಮಿಕರ ಸುರಕ್ಷತೆಗೂ ಸಹ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು. ಶಾಸಕ ಕೆ.ಷಡಕ್ಷರಿಯವರ ಮಾರ್ಗದರ್ಶನದಲ್ಲಿ ತಿಪಟೂರು ನಗರವನ್ನು ಕ್ಲೀನ್ ಸಿಟಿಯಾಗಿ ಪರಿವರ್ತಿಸಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದಕ್ಕೆ ಬೇಕಾದ ಅನುದಾನವನ್ನು ಶಾಸಕರು ಬಿಡುಗಡೆ ಮಾಡಿದ್ದು ಸಾರ್ವಜನಿಕರೂ ಸ್ವಚ್ಛತಾ ಕೆಲಸಕ್ಕೆ ಕೈ ಜೋಡಿಸಬೇಕಾಗಿ ಕೇಳಿಕೊಳ್ಳುತ್ತೇನೆ ಎಂದರು. ಕೋಟ್‌...ಇದು ಪ್ರಾಯೋಗಿಕವಾಗಿ ಕೈಗೊಂಡಿರುವ ಕ್ರಮವಾಗಿದೆ. ಕಾರಣ ರಾತ್ರಿ ವೇಳೆಯಲ್ಲಿ ಜನ ಹಾಗೂ ವಾಹನ ಸಂಚಾರ ಇರುವುದಿಲ್ಲ. ಇದರಿಂದಾಗಿ ಸ್ವಚ್ಛತಾ ಸಿಬ್ಬಂದಿಗೆ ಅನುಕೂಲವಾಗಲಿದೆ. ಜೊತೆಗೆ ಬೆಳಿಗ್ಗೆ ಹೊರಗಡೆಬರುವ ಜನರಿಗೆ ಸ್ವಚ್ಛ ನಗರದ ದರ್ಶನವಾಗುವುದರಿಂದ ಅವರೂ ಸಹ ನಮ್ಮ ಪ್ರಯತ್ನಕ್ಕೆ ಕೈ ಜೋಡಿಸಬಹುದು ಎಂಬ ಆಶಾಭಾವನೆ ಇದೆ.

- ವಿಶ್ವೇಶ್ವರ ಬದರಗಡೆ, ನಗರಸಭಾ ಆಯುಕ್ತ, ತಿಪಟೂರು