ಕನ್ನಡಪ್ರಭ ವಾರ್ತೆ ಮೈಸೂರು
ಮಕ್ಕಳಿಗೆ ಆಸ್ತಿ ಮಾಡದಿದ್ದರೂ ಜ್ಞಾನ ಸಂಪತ್ತಗಳಿಸಲು ಪ್ರೋತ್ಸಾಹ ಕೊಡಬೇಕು ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಕೆ.ಎಸ್.ರವೀಂದ್ರನಾಥ್ ಹೇಳಿದರು.ನಗರದ ಕಲಾಮಂದಿರದಲ್ಲಿ ಭಾನುವಾರ ಮೈಸೂರು ಜಿಲ್ಲಾ ಉಪ್ಪಾರ ನೌಕರರು ಹಾಗೂ ವೃತ್ತಿಪರರ ಸಂಘ’ವು ಆಯೋಜಿಸಿದ್ದ 29ನೇ ವಾರ್ಷಿಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಹಾಗೂ ಭಗೀರಥ ವೈದ್ಯವಿಭೂಷಣ ಪ್ರತಿಭಾ ರತ್ನ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೇರಿದವರು ನಡೆದು ಬಂದ ದಾರಿ ಮರೆಯದೇ ಸಮುದಾಯದ ಅಭಿವೃದ್ಧಿಗೆ ನೆರವಾಗಬೇಕು. ಅಸಕ್ತರನ್ನು ಆರ್ಥಿಕವಾಗಿ ಮೇಲೆತ್ತಬೇಕು. ಯಾವುದೇ ಸಮುದಾಯದ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ ಎಂಬುದನ್ನು ಮರೆಯಬಾರದು ಎಂದರು.ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಶ್ರಮಿಸಬೇಕು. ವಿದ್ಯೆ ಮಾತ್ರ ಕೈ ಹಿಡಿಯುತ್ತದೆ. ಆಸ್ತಿ ಮಾಡದಿದ್ದರೂ ಜ್ಞಾನ ಸಂಪತ್ತುಗಳಿಸಲು ಪ್ರೋತ್ಸಾಹ ನೀಡಬೇಕು. ಯಾರು ಜ್ಞಾನ ಸಂಪಾದನೆಗೆ ಆದ್ಯತೆ ಕೊಡುತ್ತಾರೋ ಅವರು ಆರ್ಥಿಕವಾಗಿ ಸ್ಥಿತಿವಂತರಾಗುತ್ತಾರೆ ಎಂದರು.
ನಾನು ರೈತ ಕುಟುಂಬದಿಂದ ಬಂದರೂ ಉನ್ನತ ಶಿಕ್ಷಣ ಪಡೆಯಲು ಕಷ್ಟಪಡಬೇಕಾಯಿತು. ಸಾಮಾಜಿಕ ಕಳಕಳಿಯನ್ನು ಸಮುದಾಯದ ನೌಕರರು ತೋರುತ್ತಿರುವುದು ಶ್ಲಾಘನೀಯ ಕಾರ್ಯ. ಸಮುದಾಯವು ಶಿಕ್ಷಣ ಪಡೆಯುವುದು ಸ್ವಾತಂತ್ರ್ಯ ನಂತರವಷ್ಟೇ ಸಾಧ್ಯವಾಯಿತು. ದೊಡ್ಡ ಉದ್ಯೋಗ ಪಡೆದವರು, ಉದ್ಯಮಿಗಳಾಗಿ ಶ್ರೀಮಂತರಾದವರು ದಾನಿಗಳಾಗಬೇಕು. ಏನೇ ಗಳಿಸಿದರೂ ಇಲ್ಲೇ ಬಿಟ್ಟು ಹೋಗಬೇಕು. ಸಂಪಾದಿಸಿದ್ದನ್ನು ಇತರರಿಗೂ ಕೊಟ್ಟು ಹೋಗುವ ಮನಸ್ಸು ಮಾಡಬೇಕು ಎಂದು ಅವರು ಸಲಹೆ ನೀಡಿದರು.ಆರೋಗ್ಯ, ಅನುಕೂಲ ಇದ್ದರೂ ಸಾಧನೆ ಮಾಡದಿದ್ದರೆ ನಾವೂ ಅಂಗವಿಕಲರಾಗಿ ಬಿಡುತ್ತೇವೆ. ವಿಶೇಷ ಸಾಮರ್ಥ್ಯವುಳ್ಳ ಅಂಗವಿಕಲರೂ ಸಾಧನೆ ಮಾಡುತ್ತಾರೆ. ತಮ್ಮ ವಿಭಿನ್ನ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಾರೆ. ಅವರಂತೆ ನಾವೂ ಜೀವನೋತ್ಸಹ ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.
ಚಾಮರಾಜನಗರ ತಾಲೂಕು ದೊಡ್ಡಮೋಳೆ ಗ್ರಾಮದ ನೀಲಗಾರ ಕಲಾವಿದ ದೊಡ್ಡ ಗವಿಬಸಪ್ಪ ಅವರಿಗೆ ಭಗೀರಥ ಕಲಾವಿಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.ಭಗೀರಥ ಮಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಅಯ್ಯನಸರಗೂರು ಮಠದ ಮಹದೇವ ಸ್ವಾಮೀಜಿ, ಸಂಘದ ಅಧ್ಯಕ್ಷ ಎಂ. ಸೋಮಣ್ಣ, ಜಿಪಂ ಮಾಜಿ ಅಧ್ಯಕ್ಷೆ ಲತಾ ಸಿದ್ದಶೆಟ್ಟಿ, ಮುಖಂಡರಾದ ಪಿ. ಶಿವಶಂಕರ್, ಎಂ.ಎಸ್. ಲೋಕೇಶ್, ಹನುಮಂತ ಶೆಟ್ಟಿ, ವಿ.ಎಸ್. ವಿಷಕಂಠಯ್ಯ, ಗಂಗಯ್ಯ ಇದ್ದರು.