ಕನ್ನಡಪ್ರಭ ವಾರ್ತೆ ಸಿರಿಗೆರೆಗಾದ್ರಿ ಪಾಲನಾಯಕ ಸ್ವಾಮಿಯ ಸಾಲು ಎತ್ತಿನ ಗಾಡಿಗಳ ಮಿಂಚೇರಿ ಯಾತ್ರಾ ಮಹೋತ್ಸವವು ಗಾದ್ರಿಪಾಲನಾಯಕ ಸನ್ನಿಧಾನವಾದ ಸಿರಿಗೆರೆ ಸಮೀಪದ ಮಿಂಚೇರಿ ಗುಡ್ಡಗಳ ತಪ್ಪಲಿನಲ್ಲಿ ಭಾನುವಾರ ರಾತ್ರಿಯಿಂದ ಬಿಡುಬಿಟ್ಟಿದ್ದು, ಅಲ್ಲೊಂದು ಸಾಂಸ್ಕೃತಿಕ ಲೋಕವನ್ನೇ ಸೃಷ್ಟಿಮಾಡಿದೆ. ಎತ್ತ ಕಣ್ಣು ಹಾಯಿಸಿದರೂ ದಟ್ಟವಾಗಿ ಎತ್ತರಕ್ಕೆ ಬೆಳೆದು ನಿಂತಿರುವ ಕಾಡುಮರಗಳ ಅಡವಿಯೊಳಗೆ ಸಂಭ್ರಮದ ಜಾತ್ರೆ ನಡೆಯುತ್ತಿದೆ. ಗಾದ್ರಿಪಾಲನಾಯಕನ ಭಕ್ತರಾಗಿರುವ ಬಚ್ಚಬೋರನಹಟ್ಟಿಯ ಜನರು ಮಿಂಚೇರಿ ಗುಡ್ಡದಲ್ಲೊಂದು ಕಲಾಲೋಕವನ್ನೇ ಸೃಷ್ಟಿಸಿಕೊಂಡಿದ್ದಾರೆ.
ಭಜನೆ, ಕೋಲಾಟ, ನೃತ್ಯಗಳ ಭರಾಟೆ: ಮಿಂಚೇರಿಯಲ್ಲಿ ಈ ಬಾರಿ ನೂರಾರು ಸಂಖ್ಯೆಯಲ್ಲಿ ಯುವಕರು, ಯುವತಿಯರೂ ಭಾಗವಹಿಸಿದ್ದಾರೆ. ಹಿರಿಯರಾದ ಭಕ್ತಾದಿಗಳು ಪೂಜೆ, ನೇಮ ನಿಷ್ಠೆಗಳಲ್ಲಿ ತಲ್ಲೀನರಾಗಿದ್ದರೆ, ಯುವಕರು ತಮ್ಮ ತಂಡ ಕಟ್ಟಿಕೊಂಡು ನೃತ್ಯ, ಭಜನೆ, ಕೋಲಾಟ ಮುಂತಾದ ಪ್ರದರ್ಶನಗಳಲ್ಲಿ ತೊಡಗಿರುತ್ತಾರೆ. ಜಾನಪದ ಕಲೆಗಳ ಪ್ರದರ್ಶನಗಳ ಲೋಕವೇ ಅಲ್ಲಿ ಸೃಷ್ಟಿಗೊಂಡಿದೆ. ವಿದ್ಯುತ್ ದೀಪಗಳ ಸೌಕರ್ಯವೂ ಇಲ್ಲದ ಕಾಡಿನಲ್ಲಿ ಜನರೇಟರುಗಳ ಮೂಲಕ ಬೆಳಕು ಮಾಡಿಕೊಂಡು ತಮ್ಮ ಪ್ರದರ್ಶನಗಳನ್ನು ರಾತ್ರಿಯಿಡೀ ಮುಂದುವರೆಸುತ್ತಾರೆ. ಕೋಲಾಟದಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ ಧನ ರೂಪದ ಬಹುಮಾನವನ್ನು ಘೋಷಿಸಿ ಅವರನ್ನು ಪ್ರೋತ್ಸಾಹಿಸುವ ಕೆಲಸ ಹಿರಿಯರು ಮಾಡುತ್ತಿದ್ದರು.
ಸಾವಿರಾರು ಜನರ ಸಂಕುಲ: ಬಚ್ಚಬೋರನಹಟ್ಟಿಯಲ್ಲಿಯ ೪೫೦ ಮನೆಗಳ ಸಾವಿರಾರು ಭಕ್ತರ ಸಮೂಹವೇ ಮಿಂಚೇರಿಯಲ್ಲಿ ಸೇರಿದೆ. ನೂರಾರು ಟ್ರ್ಯಾಕ್ಟರ, ಚಕ್ಕಡಿ, ಕಾರು, ಬೈಕು, ಟೆಂಪೋ ಇತ್ಯಾದಿ ವಾಹನಗಳಲ್ಲಿ ಬಂದು ಸೇರಿದ್ದಾರೆ. ಬರುವಾಗಲೇ ರೊಟ್ಟಿ, ಚಟ್ನಿಪುಡಿ, ಗಾರಿಗೆ ಮುಂತಾದ ಖಾಧ್ಯಗಳನ್ನು ಹೊತ್ತು ತಂದಿದ್ದಾರೆ. ತಾತ್ಕಾಲಿಕವಾಗಿ ಕೆಲವರು ಬಿಡಾರಗಳನ್ನು ಹಾಕಿಕೊಂಡಿದ್ದರೆ ಮತ್ತೆ ಕೆಲವರಿಗೆ ಟ್ರ್ಯಾಕ್ಟರು ಮತ್ತು ಟೆಂಪೋಗಳೇ ರಾತ್ರಿ ಕಳೆಯುವ ಮನೆಗಳಾಗಿವೆ. ಸಮೀಪದ ಗಣಿ ಕಂಪನಿಗಳು ಐದಾರು ಟ್ಯಾಂಕರುಗಳಲ್ಲಿ ಬೇಕಾದ ನೀರಿನ ಸರಬರಾಜು ಮಾಡಿ ನೆರವಾಗುತ್ತಿದ್ದಾರೆ.ಮಂಗಳವಾರ ಬೆಳಗ್ಗೆ ಸ್ವಾಮಿಯು ಜಂಗಮ ಸ್ವರೂಪಿಯಾಗಿ ಭಿಕ್ಷೆ ಸ್ವೀಕಾರ ಕಾರ್ಯಕ್ರಮ. 11ಕ್ಕೆ ಸ್ವಾಮಿಯ ಸನ್ನಿಧಿಯಲ್ಲಿ ಪ್ರಸಾದ ದಾಸೋಹ. ಮಧ್ಯಾಹ್ನ 2ಕ್ಕೆ ಮಿಂಚೇರಿ ಸುಕ್ಷೇತ್ರದಿಂದ ನಿರ್ಗಮನ. ರಾತ್ರಿ 7ಕ್ಕೆ ಕಡ್ಲೇಗುದ್ದು ಬಳಿಯ ಸಿದ್ದರ ಗುಂಡಿಗೆ ಆಗಮನ. ನಂತರ ಸ್ವಾಮಿಗೆ ಪೂಜೆ ಸಲ್ಲಿಸಿ ಬೀಡು ಬಿಡುವುದು.
ಡಿ. 28ರಂದು ಸಂಜೆ 7ಕ್ಕೆ ಸ್ವಾಮಿಯ ಗ್ರಾಮದ ಹೊಸ್ತಿಲು ಪೂಜೆಯೊಂದಿಗೆ ಸ್ವಸ್ಥಾನಕ್ಕೆ ಮರಳುವುದು. ಗುರು-ಹಿರಿಯರೊಂದಿಗೆ ದೇವರ ಮುತ್ತಯ್ಯಗಳ ಬೀಳ್ಕೊಡುಗೆ ನಡೆಯಲಿದೆ.