ಕಳಸಾ- ಬಂಡೂರಿ: ಭೂಸ್ವಾಧೀನಕ್ಕೆ ಅಧಿಸೂಚನೆ

KannadaprabhaNewsNetwork |  
Published : Aug 14, 2025, 01:00 AM IST
ಅಧಿಸೂಚನೆ | Kannada Prabha

ಸಾರಾಂಶ

ಗೋವಾ ಸಿಎಂ ಹೇಳಿಕೆ ನೀಡಿದ ಮರುದಿನವೇ ರಾಜ್ಯ ಸರ್ಕಾರ ಕಳಸಾ- ಬಂಡೂರಿ ನಾಲಾ ತಿರುವು ಯೋಜನೆಯ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದೆ. ಪೈಪ್‌ಲೈನ್‌ ಮೂಲಕವೇ ನೀರು ತರುವ ಯೋಜನೆ ಇದಾಗಿದ್ದು, ಹೀಗಾಗಿ ಹೆಚ್ಚಿನ ಜಮೀನು ಬೇಕಾಗುವುದಿಲ್ಲ. 9.27 ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳಲು ನೋಟಿಫಿಕೇಶನ್‌ ಹೊರಡಿಸಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಅತ್ತ ಗೋವಾ ಸಿಎಂ ಪ್ರಮೋದ ಸಾವಂತ ಮಹದಾಯಿ ವಿಷಯವಾಗಿ ಕ್ಯಾತೆ ತೆಗೆದ ಮರುದಿನವೇ ರಾಜ್ಯ ಸರ್ಕಾರ ಕಳಸಾ- ಬಂಡೂರಿ ನಾಲಾ ತಿರುವು ಯೋಜನೆಗಾಗಿ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದೆ. ಯೋಜನೆ ಜಾರಿಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂಬುದನ್ನು ಸೂಚ್ಯವಾಗಿ ತಿಳಿಸಿದೆ. ಈ ಮೂಲಕ ಉತ್ತರ ಕರ್ನಾಟಕದ ಜನತೆಗೆ ಸಿಹಿಸುದ್ದಿ ನೀಡಿದಂತಾಗಿದೆ.

ಜು. 22ರಂದು ಗೋವಾ ಸದನದಲ್ಲಿ ಅಲ್ಲಿನ ಮುಖ್ಯಮಂತ್ರಿ ಪ್ರಮೋದ ಸಾವಂತ ಅವರು ಯೋಜನೆ ಬಗ್ಗೆ ಕ್ಯಾತೆ ತೆಗೆದಿದ್ದರು. ಕೇಂದ್ರ ಸರ್ಕಾರ ಈ ಯೋಜನೆಗೆ ಅನುಮತಿ ನೀಡುವುದಿಲ್ಲ ಎಂದು ತಮಗೆ ಭರವಸೆ ನೀಡಿದೆ ಎಂದು ಹೇಳಿದ್ದರು. ಇದು ರಾಜ್ಯದಲ್ಲಿ ತೀವ್ರ ಸಂಚಲನವನ್ನುಂಟು ಮಾಡಿತ್ತು. ರೈತರು ಮತ್ತೆ ಹೋರಾಟವನ್ನೂ ತೀವ್ರಗೊಳಿಸಿದ್ದರೆ, ಕಾಂಗ್ರೆಸ್ಸಿಗರು ಬಿಜೆಪಿ ಮೇಲೆ ಹರಿಹಾಯ್ದಿದ್ದು ಇದೆ. ಇನ್ನು ಬಿಜೆಪಿ ಜನಪ್ರತಿನಿಧಿಗಳು ಕೂಡ ಗೋವಾ ಸಿಎಂ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು ಅಲ್ಲದೇ, ಅದು ವೈಯಕ್ತಿಕ ಹೇಳಿಕೆ ಎಂದು ತಿಳಿಸುವ ಪ್ರಯತ್ನ ಮಾಡಿದ್ದರು.

ಭೂಸ್ವಾಧೀನಕ್ಕೆ ಅಧಿಸೂಚನೆ: ಈ ನಡುವೆಯೇ ಗೋವಾ ಸಿಎಂ ಹೇಳಿಕೆ ನೀಡಿದ ಮರುದಿನವೇ ರಾಜ್ಯ ಸರ್ಕಾರ ಕಳಸಾ- ಬಂಡೂರಿ ನಾಲಾ ತಿರುವು ಯೋಜನೆಯ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದೆ. ಪೈಪ್‌ಲೈನ್‌ ಮೂಲಕವೇ ನೀರು ತರುವ ಯೋಜನೆ ಇದಾಗಿದ್ದು, ಹೀಗಾಗಿ ಹೆಚ್ಚಿನ ಜಮೀನು ಬೇಕಾಗುವುದಿಲ್ಲ. 9.27 ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳಲು ನೋಟಿಫಿಕೇಶನ್‌ ಹೊರಡಿಸಿದೆ.

ಏನಿದು ನೋಟಿಫಿಕೇಶನ್‌?: ಕಳಸಾ- ಬಂಡೂರಿ ನಾಲಾ ತಿರುವು ಯೋಜನೆಯಡಿ ಹುಬ್ಬಳ್ಳಿ -ಧಾರವಾಡ, ಕುಂದಗೋಳ ಪಟ್ಟಣ ಹಾಗೂ ಮಾರ್ಗಮಧ್ಯೆ ಬರುವ ಗ್ರಾಮಗಳಲ್ಲಿ ಕುಡಿಯುವ ನೀರಿನ ಪೂರೈಕೆ ಮಾಡಲಾಗುವುದು. ಅದಕ್ಕಾಗಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಅಸೋಗಾ (2.38 ಎಕರೆ), ಕರಂಬಳ (15 ಗುಂಟೆ), ಶೇಡೆಗಾಳಿ (14 ಗುಂಟೆ) ಹಾಗೂ ರೂಮೇವಾಡಿ (6 ಎಕರೆ) ಸೇರಿದಂತೆ ಒಟ್ಟು 9.27 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಬೇಕು. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್‌ ನಿರ್ಮಾಣ ಕಾಯ್ದೆ- 2019ರಡಿ ಸ್ವಾಧೀನ ಪಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ರಾಜ್ಯಪಾಲರ ಆಜ್ಞಾನುಸಾರ ಸರ್ಕಾರದ ಆಧೀನ ಕಾರ್ಯದರ್ಶಿಗಳು ಈ ಅಧಿಸೂಚನೆ ಹೊರಡಿಸಿದ್ದಾರೆ.

ಹೋರಾಟಗಾರರ ಸಂತಸ: ಗೋವಾ ಸಿಎಂ ಕ್ಯಾತೆ ತೆಗೆದ ತಕ್ಷಣವೇ ಡಿಸಿಎಂ ಆಗಿರುವ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ, ಯೋಜನೆಯನ್ನು ಯಾರು ತಡೆಯುತ್ತಾರೋ ನೋಡುತ್ತೇವೆ ಎಂದು ನೇರವಾಗಿ ಠಕ್ಕರ್‌ ನೀಡಿದ್ದರು. ಅದರಂತೆ ಅದರ ಮರುದಿನವೇ ಅಧಿಸೂಚನೆ ಹೊರಡಿಸುವ ಮೂಲಕ ದಿಟ್ಟ ಹೆಜ್ಜೆ ಇಟ್ಟಿದೆ. ಇದು ಸ್ವಾಗತಾರ್ಹ ಎಂದು ಹೋರಾಟಗಾರರು ಹರ್ಷ ವ್ಯಕ್ತಪಡಿಸುತ್ತಾರೆ.

ಕೇಂದ್ರ ಸರ್ಕಾರ ಇಲ್ಲದ ನೆಪ ಹೇಳದೇ ಕೂಡಲೇ ಯೋಜನೆಗೆ ಅನುಮತಿ ಕೊಡಿಸಬೇಕು. ರಾಜ್ಯ ಸರ್ಕಾರ ಕಾಮಗಾರಿ ಶುರು ಮಾಡಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ ಗೋವಾ ಸಿಎಂ ಹೇಳಿಕೆಗೆ ಹೋರಾಟಗಾರರ ಆಕ್ರೋಶವನ್ನು ರಾಜ್ಯ ಸರ್ಕಾರ ತಣಿಸಿದಂತಾಗಿದೆ. ಜತೆಗೆ ಯೋಜನೆ ಜಾರಿಗೆ ತಾವು ಬದ್ಧ ಎಂಬುದನ್ನು ಸ್ಪಷ್ಟಪಡಿಸಿದಂತಾಗಿರುವುದಂತೂ ಸತ್ಯ.

ಕಳಸಾ- ಬಂಡೂರಿ ಯೋಜನೆಯ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸುವ ಮೂಲಕ ಕಾಂಗ್ರೆಸ್‌ ಸರ್ಕಾರ ತನ್ನ ಬದ್ಧತೆ ಪ್ರದರ್ಶಿಸಿದೆ. ಕೇಂದ್ರ ಸರ್ಕಾರ ಮಹದಾಯಿ ಯೋಜನೆಗೆ ಅನುಮತಿ ಕೊಡುವ ಮೂಲಕ ಯೋಜನೆ ಬಗ್ಗೆ ತನಗಿರುವ ಬದ್ಧತೆ ಪ್ರದರ್ಶಿಸಲಿ. ಅನುಮತಿ ಕೊಡಿಸಲು ಕೇಂದ್ರ ಸಚಿವರು ಪ್ರಯತ್ನಿಸಲಿ ಎಂದು ವಿಧಾನ ಪರಿಷತ್‌ನ ಸರ್ಕಾರದ ಮುಖ್ಯಸಚೇತಕ ಸಲೀಂಅಹ್ಮದ ಹೇಳಿದರು.ರಾಜ್ಯ ಸರ್ಕಾರ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸುವ ಮೂಲಕ ಬದ್ಧತೆ ತೋರಿಸಿದೆ. ಇದು ಸಂತಸ. ಕೇಂದ್ರ ಸರ್ಕಾರ ಕೂಡಲೇ ಅನುಮತಿ ಕೊಡಿಸಿ ಈ ಭಾಗದ ಜನರ ಬಹುದಶಕಗಳ ಬೇಡಿಕೆ ಈಡೇರಿಸಬೇಕು. ವಿಳಂಬತೆ ಅನುಸರಿಸುವುದು ಸರಿಯಲ್ಲ ರೈತಸೇನಾ ಕರ್ನಾಟಕದ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ