ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ

KannadaprabhaNewsNetwork |  
Published : Aug 14, 2025, 01:00 AM IST
3ಜಿಡಿಜಿ10ಎ, | Kannada Prabha

ಸಾರಾಂಶ

ಧರ್ಮಸ್ಥಳ, ಡಾ. ವೀರೇಂದ್ರ ಹೆಗ್ಗಡೆ ಮತ್ತು ಕುಟುಂಬದವರ ಕಳಂಕ ತರುವ ಪ್ರಯತ್ನ ಖಂಡಿಸಿ ಸಾವಿರಾರು ಭಕ್ತರು ಬುಧವಾರ ಗದಗ ನಗರದ ಅಂಬೇಡ್ಕರ್‌ ಭವನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಬೃಹತ್ ಪ್ರತಿಭಟನೆ ನಡೆಸಿದರು.

ಗದಗ: ಧರ್ಮಸ್ಥಳ, ಡಾ. ವೀರೇಂದ್ರ ಹೆಗ್ಗಡೆ ಮತ್ತು ಕುಟುಂಬದವರ ಹೆಸರಿಗೆ ಕಳಂಕ ತರುವ ಹಾಗೂ ಕೋಟ್ಯಂತರ ಭಕ್ತರ ಭಾವನೆಗೆ ಧಕ್ಕೆ ತರುವ ಕಾರ್ಯ ಮಾಡುತ್ತಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಧರ್ಮಸ್ಥಳ ಅಭಿಮಾನಿಗಳ ವೇದಿಕೆಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಾವಿರಾರು ಭಕ್ತರು ಬುಧವಾರ ಗದಗ ನಗರದ ಅಂಬೇಡ್ಕರ್‌ ಭವನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ, ಜಿಪಂ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ ಮಾತನಾಡಿ, ಪ್ರಸಿದ್ಧ ಧಾರ್ಮಿಕ ಕೇಂದ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಾಲಯ ಶತಮಾನಗಳ ಇತಿಹಾಸ ಹೊಂದಿದ ಪುಣ್ಯಕ್ಷೇತ್ರ. ಈ ಕ್ಷೇತ್ರದ ಆರಾಧ್ಯ ದೈವ ಮಂಜುನಾಥ ಸ್ವಾಮಿ ಬಗ್ಗೆ ತಲೆತಲಾಂತರಗಳಿಂದ ವಿಶೇಷ ನಂಬಿಕೆ ಮತ್ತು ಭಕ್ತಿ ಇದೆ. ಈ ಕ್ಷೇತ್ರಕ್ಕೆ ಪ್ರತಿದಿನ ರಾಜ್ಯ ಹಾಗೂ ಹೊರರಾಜ್ಯದಿಂದ ಲಕ್ಷಗಟ್ಟಲೆ ಜನರು ಆಗಮಿಸಿ, ಸ್ವಾಮಿಯ ದರ್ಶನ ಪಡೆದು ಅನ್ನಪ್ರಸಾದ ಸ್ವೀಕರಿಸುತ್ತಾರೆ ಎಂದು ಹೇಳಿದರು.

ಧರ್ಮಸ್ಥಳ ಕ್ಷೇತ್ರದಲ್ಲಿ ಯಾವುದೇ ಜಾತಿ, ಮತ, ಧರ್ಮ ಭೇದವಿಲ್ಲ. ಈ ಪುಣ್ಯಕ್ಷೇತ್ರದ ಬಗ್ಗೆ ಗಿರೀಶ ಮಟ್ಟೆಣ್ಣವರ, ಮಹೇಶಶೆಟ್ಟಿ ತಿಮ್ಮರೋಡಿ, ಸಂತೋಷ ಕಡಬ, ಸಮೀರ್ ಎಂ.ಡಿ., ಕುಡ್ಲ ರಾಂಪೇಜ್, ಜಯಂತ ಟಿ. ಅವರು ಕಳಂಕ ತರುವ ಉದ್ದೇಶದಿಂದಲೇ ವಿಡಿಯೋಗಳನ್ನು ಮಾಡಿ ಅದರಲ್ಲಿ ಧರ್ಮಸ್ಥಳಕ್ಕೆ, ಕ್ಷೇತ್ರದ ಆರಾಧ್ಯ ದೇವರಿಗೆ, ಡಾ. ಹೆಗ್ಗಡೆ ಅವರಿಗೆ ಕೆಟ್ಟ ರೀತಿಯಲ್ಲಿ ಕೀಳುಮಟ್ಟದ ಭಾಷೆಗಳಲ್ಲಿ, ಅಸಹ್ಯವೆನಿಸುವ ರೀತಿಯಲ್ಲಿ ಚಿತ್ರೀಕರಿಸಿ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಡುತ್ತಿದ್ದಾರೆ. ಅವರ ಸುಳ್ಳು ಆರೋಪಗಳಿಂದ ಧರ್ಮಸ್ಥಳದ ಮಂಜುನಾಥ ಸ್ವಾಮಿ ಭಕ್ತರಾದ ನಮಗೆ ನೋವಾಗಿದೆ. ಈ ರೀತಿಯ ಅವಮಾನಗಳನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಆಧಾರರಹಿತ ಸುಳ್ಳು ಸುದ್ದಿ ಹಬ್ಬಿಸಿ ಧರ್ಮನಿಂದನೆ ಮಾಡಿ ಧರ್ಮ ಧರ್ಮಗಳ ನಡುವೆ ಕಂದಕ ಸೃಷ್ಟಿಸುತ್ತಿದ್ದಾರೆ. ಅದರಿಂದ ಭವಿಷ್ಯದಲ್ಲಿ ಶಾಂತಿಭಂಗ ಉಂಟಾಗಿ ಆರಾಜಕತೆ ಭುಗಿಲೇಳುವ ಸಾಧ್ಯತೆ ಇರುವುದರಿಂದ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಶಿವಾನಂದ ಬೆಂತೂರ ಮಾತನಾಡಿ, ಅನಾಮಿಕ ವ್ಯಕ್ತಿ ನೀಡಿದ ದೂರಿನ ಆಧಾರದಲ್ಲಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿ ಅದರ ಮೂಲಕ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವುದನ್ನು ಕ್ಷೇತ್ರದ ಭಕ್ತರಾದ ನಾವು ಗೌರವದಿಂದ ಸ್ವಾಗತಿಸುತ್ತಿದ್ದೇವೆ. ಆದರೆ ಈ ತನಿಖೆಯು ಗೊತ್ತು ಗುರಿ ಇಲ್ಲದೆ ಹೋಗಬಾರದು ಎಂದು ಆಗ್ರಹಿಸುತ್ತೇವೆ ಹಾಗೂ ಈ ತನಿಖೆಯನ್ನು ನಿಗದಿತ ಸಮಯದಲ್ಲಿ ಮುಗಿಸಿ ವರದಿ ಪಡೆದು ಎಲ್ಲ ಗೊಂದಲಗಳಿಗೆ ತೆರೆ ಎಳೆಯಬೇಕು ಎಂದರು.

ಅನಾಮಿಕ ದೂರುದಾರ ಮತ್ತು ಆತನ ಹಿಂದೆ ಇರುವವರಿಗೆ ಯಾರಿಂದ ಧನಸಹಾಯವಾಗುತ್ತಿದೆ ಹಾಗೂ ಸುಳ್ಳು ಆರೋಪ ಮಾಡಲು ಅವರಿಗೆ ಯಾರು ಪ್ರಚೋದನೆ ಮಾಡುತ್ತಿದ್ದಾರೆ ಎಂಬುದನ್ನು ಕಂಡುಹಿಡಿಯಬೇಕು. ಅವರ ಬ್ಯಾಂಕ್ ಖಾತೆಗಳನ್ನು ತನಿಖೆಗೊಳಪಡಿಸಬೇಕು. ನನ್ನ ಬಳಿ ಸಾಕ್ಷ್ಯಾಧಾರಗಳು ಇವೆ ಎಂದು ಘಂಟಾಘೋಷವಾಗಿ ಸಾರುತ್ತಿರುವ ಗಿರೀಶ ಮಟ್ಟೆಣ್ಣವರ ಹಾಗೂ ಇತರರು ವಿರುದ್ಧದ ತನಿಖೆಯಾಗಬೇಕು ಎಂದರು.

ನೇತೃತ್ವ ವಹಿಸಿದ್ದ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಚಂದ್ರಶೇಖರ ಹುಣಸಿಕಟ್ಟಿ ಮಾತನಾಡಿ, ಈ ಪ್ರತಿಭಟನೆಯಿಂದ ಧರ್ಮಯುದ್ಧ ಆರಂಭವಾಗಿದೆ. ನಾವೆಲ್ಲರೂ ಶ್ರೀಕ್ಷೇತ್ರ ಧರ್ಮಸ್ಥಳ ಪರವಾಗಿ ನಿಲ್ಲುತ್ತೇವೆ. ಮುಂದಿನ ದಿನಗಳಲ್ಲಿ ನ್ಯಾಯಕ್ಕೆ ಜಯ ಸಿಗಲಿದೆ ಎಂದು ಹೇಳಿದರು.

ಮುಕ್ಕಣ್ಣೇಶ್ವರ ಶ್ರೀಮಠದ ಶಂಕರನಾಂದ ಶ್ರೀಗಳು, ಗದಗ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು, ದಿಗಂಬರ ಜೈನ ಸಮಾಜ, ನವಜೀವನ ಸಮಿತಿ ಸದಸ್ಯರು, ಕರ್ನಾಟಕ ರಕ್ಷಣಾ ವೇದಿಕೆ, ಆಟೋ ಚಾಲಕರ ಸಂಘ, ಹುಯಿಲಗೋಳ ಗ್ರಾಪಂ ಸದಸ್ಯರು ಹಾಗೂ ಜಿಲ್ಲೆಯ ಎಲ್ಲ ತಾಲೂಕಿನ ಪ್ರಗತಿಬಂಧು, ಸ್ವಸಹಾಯ ಸಂಘದ ಸದಸ್ಯರು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುನೀತರಾಜಕುಮಾರ ಪುತ್ಥಳಿ ಅನಾವರಣ
ಬೆಂಗಳೂರು ನಗರದಲ್ಲಿ ಮತ್ತೊಂದು ಮೇಲ್ಸೇತುವೆ ನಿರ್ಮಾಣ