ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ನ.25ರಿಂದ ಮೂರು ದಿನಗಳ ಕಾಲ ಸ್ವಾಮಿಗೆ ಕಳಶಾಭಿಷೇಕ, ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.ಪಟ್ಟಣದ ಪ್ರಸಿದ್ಧ ಶ್ರೀರಂಗನಾಥ ದೇವಾಲಯದ ಆಡಳಿತ ಮಂಡಳಿ ಕಚೇರಿಯಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರೊಂದಿಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ನ.25ರಿಂದ ಅಂಕುರಾರ್ಪಣ, ನ.26 ಕಳಶ ಪ್ರತಿಷ್ಠಾಪನೆ, ನ.27 ಸಹಸ್ರ ಕಳಸಾಭಿಷೇಕ ಆಗಮಕ್ಕೆ ಅನುಗುಣವಾಗಿ ಪಂಚಾರಾತ್ರಾಗಮದ ವಿಧಿಯಂತೆ ವಿಶೇಷವಾಗಿ ಧಾರ್ಮಿಕ ಕಾರ್ಯಗಳು ನಡೆಯುತ್ತವೆ.
ಸಾವಿರಾರು ವರ್ಷಗಳ ಇತಿಹಾಸವಿರುವ ಶ್ರೀರಂಗನಾಥ ಸ್ವಾಮಿ ದೇವಾಲಯದ ಭಕ್ತರು ದೇಶವ್ಯಾಪಿ ಇದ್ದು, ಅವರಿಗೆ ಈ ವಿಶೇಷ ಪೂಜಾ ಕಾರ್ಯಕ್ರಮವನ್ನು ಮುಂದಾಗಿ ತಿಳಿಸಬೇಕು. ಜೊತೆಗೆ ನೂರಾರು ವರ್ಷಗಳಿಂದ ಲೋಕಕಲ್ಯಾಣಕ್ಕಾಗಿ ಈ ದೇವಾಲಯದಲ್ಲಿ ಇಂತಹ ಬೃಹತ್ ಪೂಜಾ ಕಾರ್ಯಕ್ರಮಗಳು ನಡೆದಿರಲಿಲ್ಲ. ಈ ಬಾರಿ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಹಾಗೂ ಮುಜರಾಯಿ ಇಲಾಖೆ ಸಹಯೋಗದಲ್ಲಿ ಸ್ಥಳೀಯ ದೇವಾಲಯಗಳ ಆಡಳಿತ ಮಂಡಳಿ ಜೊತೆಗೂಡಿ ಧಾರ್ಮಿಕ ಪೂಜಾ ಕಾರ್ಯಕ್ರಮವನ್ನು ಮೂರು ದಿನಗಳು ಸಹ ಬಹಳ ವಿಜೃಂಭಣೆಯಿಂದ ಜರುಗುವಂತೆ ಎಲ್ಲರೂ ಸಹಕರಿಸಬೇಕು ಎಂದರು.ಮುಂಜಾಗ್ರತವಾಗಿ ದೇವಾಲಯದಲ್ಲಿ ಧಾರ್ಮಿಕ ಪೂಜಾ ವಿಧಾನಗಳಂತೆ ಪೂರ್ವ ಸಿದ್ಧತಾ ಕಾರ್ಯಗಳನ್ನು ಮಾಡಲಾಗುತ್ತದೆ, ದೇವಾಲಯ ಸಮಿತಿ ಸದಸ್ಯರೊಂದಿಗೆ ಆಡಳಿತಾಧಿಕಾರಿಗಳು ತ್ವರಿತವಾಗಿ ಎಲ್ಲಾ ಕಾರ್ಯಗಳನ್ನು ಸಿದ್ಧಗೊಳಿಸಬೇಕು ಎಂದು ಸೂಚನೆ ನೀಡಿದರು.
ಹಿಂದೂ ಧಾರ್ಮಿಕ ದತ್ತಿ ಇಲಾಖೆ ಕೇಂದ್ರ ಆಗಮ ಪಂಡಿತರಾದ ವಿಜಯಕುಮಾರ್, ದೇವಾಲಯ ಸಮಿತಿ ಅಧ್ಯಕ್ಷ ಜೆ. ಸೋಮಶೇಖರ್, ಶ್ರೀನಿಮಿಷಾಂಬೆ ದೇವಾಲಯ ಸಮಿತಿ ಅಧ್ಯಕ್ಷ ದಯಾನಂದ್, ದೇಗುಲದ ಇಒ ಉಮಾ, ದೇವಾಲಯದ ಮುಖ್ಯ ಅರ್ಚಕ ವಿಜಯಸಾರಥಿ, ಶ್ರೀನಿಮಿಷಾಂಬ ದೇವಾಲಯದ ಮುಖ್ಯ ಅರ್ಚಕ ಸೂರ್ಯನಾರಾಯಣ ಭಟ್ ಸೇರಿ ದೇವಾಲಯ ಸಮಿತಿ ಸದಸ್ಯರು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.