ಹಾವೇರಿ: ಜಿಲ್ಲೆಯಲ್ಲಿ ಮಳೆ ತಗ್ಗಿದ್ದರೂ ಮಲೆನಾಡು ಭಾಗದಲ್ಲಿ ಆಗುತ್ತಿರುವ ಮಳೆಯಿಂದಾಗಿ ವರದಾ ನದಿ ಮೈದುಂಬಿ ಹರಿಯುತ್ತಿದೆ. ಹಾನಗಲ್ಲ ತಾಲೂಕಿನ ಕೂಡಲ- ನಾಗನೂರು ಹಾಗೂ ಸವಣೂರು ತಾಲೂಕಿನ ಕಳಸೂರು ಬ್ರಿಜ್ ಕಂ ಬ್ಯಾರೇಜ್ ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ.ಸದ್ಯ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆ ಆಗಿದ್ದರೂ ಮಲೆನಾಡು ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ವರದಾ ನದಿ ಹರಿವು ಹೆಚ್ಚಿದೆ. ಇದರಿಂದಾಗಿ ತಾಲೂಕಿನ ಕೂಡಲ- ನಾಗನೂರು, ಸವಣೂರು ತಾಲೂಕಿನ ಕಳಸೂರು ಬ್ರಿಜ್ ಕಂ ಬ್ಯಾರೇಜ್ ಮೇಲಿನಿಂದ ನೀರು ಹರಿಯುತ್ತಿದೆ. ಕಳಸೂರು ಗ್ರಾಮ ಮತ್ತು ಹಾವೇರಿ ನಡುವಿನ ಸಂಪರ್ಕ ಕಡಿತಗೊಂಡಿದೆ. ಅಲ್ಲದೇ ಕೂಡಲ ಗ್ರಾಮಸ್ಥರು ವರ್ದಿ, ಸಂಗೂರ ಮೂಲಕ ಹಾವೇರಿ ತಲುಪುವಂತಾಗಿದ್ದು, ಜನರು ಸಮಸ್ಯೆ ಎದುರಿಸುವಂತಾಗಿದೆ. ಕಳಸೂರು ಬ್ರಿಡ್ಜ್ ಕಂ ಬ್ಯಾರೇಜ್ ಮುಳುಗಡೆ ಆಗಿದ್ದರಿಂದ ರೈತರು ಸಮಸ್ಯೆ ಎದುರಿಸುವಂತಾಗಿದೆ. ಗ್ರಾಮದ ಬಹುತೇಕ ರೈತರು ತಮ್ಮ ಜಮೀನುಗಳಿಗೆ ತೆರಳಲು ಈ ಬ್ರಿಡ್ಜ್ ಕಂ ಬ್ಯಾರೇಜ್ ಅವಲಂಬಿಸಿದ್ದು, ಬ್ಯಾರೇಜ್ ಮುಳುಗಡೆಯಾಗಿದ್ದರಿಂದ ರೈತರು ಸುಮಾರು 25 ಕಿಮೀ ಸುತ್ತಿ ಬಳಸಿ ಜಮೀನು ತಲುಪುವಂತ ಸ್ಥಿತಿ ನಿರ್ಮಾಣಗೊಂಡಿದೆ.