ಶಿಗ್ಗಾಂವಿ: ಯಾರಿಯೂ ರಸಗೊಬ್ಬರ ಕೊರತೆಯಿಂದ ಆತಂಕಗೊಂಡ ಪಟ್ಟಣದ ಮಹಾನಂದಿ ರೈತ ಉತ್ಪಾದಕರ ಸಂಸ್ಥೆ ಸದಸ್ಯರು ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿದರು.
ಈಗ ಸಸಿಗಳು ಬೆಳೆಯಲಾರಂಭಿಸಿದ್ದು, ವಾಡಿಕೆಗಿಂತ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಭೂಮಿ ಜವಳು ಆಗುತ್ತಿದೆ. ಬೆಳೆಗಳನ್ನು ಉಳಿಸಿಕೊಳ್ಳಲು ಯೂರಿಯಾ ಗೊಬ್ಬರದ ಅಶ್ಯಕತೆ ಇದೆ. ಆದರೆ ಅಗತ್ಯಕ್ಕೆ ತಕ್ಕಂತೆ ಸರಬರಾಜು ಆಗುತ್ತಿಲ್ಲ. ಮಳೆಯಾಶ್ರಿತ ಬೇಸಾಯ ಮಾಡುತ್ತಿರುವ ರೈತರಿಗೆ ಮಳೆಗಾಲದ ಈ ಇಳುವರಿಯೇ ಜೀವನಾಧಾರವಾಗಿದೆ. ಅತಿವೃಷ್ಟಿಯಿಂದ ಮತ್ತು ಗೊಬ್ಬರಗಳ ಕೊರತೆಯಿಂದ ತಾಲೂಕಿನ ರೈತರು ಆತಂಕಕ್ಕೆ ಸಿಲುಕಿದ್ದಾರೆ. ಅಧಿಕಾರಿಗಳು ಯೂರಿಯಾ ಗೊಬ್ಬರವನ್ನು ಸೋಮವಾರದೊಳಗೆ ನೀಡಬೇಕು ಎಂದು ಆಗ್ರಹಿಸಿದರು.
ಹೆಚ್ಚಿನ ಬೆಲೆಗೆ ಮಾರಾಟ ಆರೋಪ: ಖಾಸಗಿ ವ್ಯಾಪಾರಿಗಳಿಗೆ ಬೇಕಾದಷ್ಟು ಗೊಬ್ಬರ ಅವಧಿಗೂ ಮುನ್ನವೆ ಬರುತ್ತದೆ. ರೈತರೆ ಕಟ್ಟಿಕೊಂಡಿರುವ ಎಫ್‌ಪಿಒ, ಸ್ವಸಹಾಯ ಸಂಘ, ಇತರ ಸಂಸ್ಥೆಗಳಿಗೆ ಗೊಬ್ಬರದ ಕೊರತೆ ಉಂಟಾಗುತ್ತಿದೆ. ಬೇರೆ ತಾಲೂಕಿನ ವ್ಯಾಪಾರಿಗಳು ನಮ್ಮ ತಾಲೂಕಿನಲ್ಲಿ ಗೊಬ್ಬರ ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಡಿಎಪಿ ಗೊಬ್ಬರದ ಆನಂತರ ಯೂರಿಯಾ ಗೊಬ್ಬರಕ್ಕೂ ಲಿಂಕ್ ಮಾಡಿ ಮಾರಾಟ ಮಾಡುವ ಕ್ರಮ ತಾಲೂಕಿನಲ್ಲಿ ನಡೆಯುತ್ತಿದೆ ಎಂದು ರೈತರು ಆಪಾದಿಸಿದರು.ಬಸವರಾಜ ಪೂಜಾರ, ಬಸವರಾಜ ಅಜ್ಜಂಪುರ, ಗುಡ್ಡಪ್ಪ ಸುಣಗಾರ, ಈರಣ್ಣ ಬಳಿಗಾರ, ಹುತ್ತನಗೌಡ್ರ ಪಾಟೀಲ, ಸಂತೋಷ ನವಲಗುಂದ, ಉಮಾಶಂಕರ ನವಲಗುಂದ, ಮನೋಜ್ ದ್ಯಾಮಣ್ಣವರ, ಸಿದ್ದಪ್ಪ ಮಿಳ್ಳಳ್ಳಿ, ಖಾದರಬಾಷಾ, ಸಂತೋಷ ಕಟಗಿ, ಸೂರಜ್ ಮರಿದ್ಯಾಮಣ್ಣನವರ, ವಿನಯಕುಮಾರ ಗೊಜನೂರ ಇತರರಿದ್ದರು.
ಗೊಬ್ಬರ ಪೂರೈಸುವ ಭರವಸೆಶಿಗ್ಗಾಂವಿಯ ಸಹಾಯಕ ಕೃಷಿ ನಿರ್ದೇಶಕ ಕೊಟ್ರೆಶ ಗೆಜ್ಲಿ ಅವರು ಅಪರ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್ಲ ಅವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ದಾಸ್ತಾನಿನ ಬಗ್ಗೆ ಮಾಹಿತಿ ಪಡೆದರು. ಆದ್ಯತೆ ಮೇರೆಗೆ ಮಹಾನಂದಿ ಎಫ್‌ಪಿಒಗೆ ಯೂರಿಯಾ ಗೊಬ್ಬರ ಪೂರೈಕೆ ಮಾಡುವ ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.