ಬೆಳೆ ವಿಮೆಗೆ ನೋಂದಾಯಿಸಲು ಬತ್ತ ಕೃಷಿಕರಿಗೆ ಸೂಚನೆ

KannadaprabhaNewsNetwork |  
Published : Jun 28, 2025, 12:18 AM IST
32 | Kannada Prabha

ಸಾರಾಂಶ

2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರು ತಮ್ಮ ಹೆಸರು ನೊಂದಾಯಿಸಿಕೊಳ್ಳುವಂತೆ ಕೃಷಿ ಇಲಾಖೆ ತಿಳಿಸಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರು ತಮ್ಮ ಹೆಸರು ನೊಂದಾಯಿಸಿಕೊಳ್ಳುವಂತೆ ಕೃಷಿ ಇಲಾಖೆ ತಿಳಿಸಿದೆ.ಪ್ರಸಕ್ತ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಈ ಯೋಜನೆಯನ್ನು ಅನುಷ್ಠಾನ ಮಾಡಲು ಅಗ್ರಿಕಲ್ಚರ್ ಇನ್ಸೂರೆನ್ಸ್ ಕಂಪೆನಿಯನ್ನು ನಿಗದಿಪಡಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಬತ್ತವು ನೊಂದಾಯಿತ ಬೆಳೆಯಾಗಿದ್ದು, ಬತ್ತ ಬೆಳೆಯುವ ರೈತರು ನೊಂದಾಯಿಸಿಕೊಳ್ಳಬಹುದು.ಈ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ ಅಧಿಸೂಚಿತ ಘಟಕದಲ್ಲಿ ಯಾವುದೇ ಪ್ರಕೃತಿ ವಿಕೋಪ/ ಹವಾಮಾನ ವೈಪರೀತ್ಯದಿಂದ ಶೇ.75ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡರೆ ವಿಮಾ ಮೊತ್ತದ ಗರಿಷ್ಠ ಶೇ.25ರ ಭಾಗವನ್ನು, ಬಿತ್ತನೆಯಿಂದ ಕಟಾವು ಹಂತದವರೆಗಿನ ಮಧ್ಯದ ಅವಧಿಯಲ್ಲಿ ಶೇ.50ಕ್ಕಿಂತ ಹೆಚ್ಚು ಬೆಳೆ ನಷ್ಟ ಸಂಭವಿಸಿದರೆ ಮುಂಚಿತವಾಗಿ ಅಂದಾಜು ಮಾಡಲಾದ ಬೆಳೆ ವಿಮಾ ನಷ್ಟ ಪರಿಹಾರದಲ್ಲಿ ಶೇ.25ರಷ್ಟು ಹಣವನ್ನು ಪರಿಹಾರವಾಗಿ ನೀಡಲಾಗುತ್ತದೆ. ಕಟಾವಿನ ನಂತರದ ಸಮಯದಲ್ಲಿ ಬೆಳೆಯನ್ನು ಒಣಗಿಸಲು ಬಿಟ್ಟ ಸಂದರ್ಭ 2 ವಾರದೊಳಗೆ ಅಕಾಲಿಕ ಮಳೆ/ ಚಂಡಮಾರುತ ಸಹಿತ ಮಳೆಯಿಂದಾಗಿ ಕಟಾವು ಮಾಡಲಾದ ಬೆಳೆಯು ನಾಶವಾದರೆ ವಿಮಾ ಸಂಸ್ಥೆಯು ವೈಯಕ್ತಿಕವಾಗಿ ಬೆಳೆ ನಷ್ಟ ನಿರ್ಧಾರ ಮಾಡಿ ಬೆಳೆ ಪರಿಹಾರವನ್ನು ಇತ್ಯರ್ಥಪಡಿಸುತ್ತದೆ.

ನೋಂದಣಿಗೆ ಆಗಸ್ಟ್ 16 ಕೊನೆಯ ದಿನ. ಪ್ರತಿ ಎಕರೆಗೆ ವಿಮಾ ಮೊತ್ತ 25,800 ರು., ವಿಮಾ ಕಂತು (ರೈತರ ಪಾಲು) ಒಂದು ಎಕರೆಗೆ 516 ರು. ಆಗಿರುತ್ತದೆ. ಅರ್ಹ ರೈತರು ಹತ್ತಿರದ ಬ್ಯಾಂಕ್‌ಗಳಲ್ಲಿ ನಿಗದಿತ ದಿನಾಂಕದೊಳಗೆ ವಿಮಾ ಕಂತಿನ ಮೊತ್ತವನ್ನು ಪಾವತಿಸಬೇಕು. ಬೆಳೆ ನಷ್ಟದ ಬಗ್ಗೆ ಸಂಬಂಧಿಸಿದ ಹಣಕಾಸು ಸಂಸ್ಥೆ ಅಥವಾ ವಿಮಾ ಸಂಸ್ಥೆ ಕಚೇರಿಗಳಿಗೆ ನಷ್ಟ ಸಂಭವಿಸಿದ 72 ಗಂಟೆಯೊಳಗೆ ವಿಮೆ ಮಾಡಿಸಲಾದ ಬೆಳೆ ವಿವರ, ಹಾನಿಯ ವ್ಯಾಪ್ತಿ ಹಾಗೂ ಹಾನಿಯ ಕಾರಣವನ್ನು ತಿಳಿಸಬೇಕಾಗುತ್ತದೆ.

ಬೆಳೆ ಸಾಲ ಪಡೆದ/ ಪಡೆಯದ ರೈತರಿಗೆ ಬೆಳೆ ವಿಮೆ ಐಚ್ಛಿಕ. ರೈತರು ನೋಂದಣಿಗಾಗಿ ಕಡ್ಡಾಯವಾಗಿ ಫ್ರೂಟ್ಸ್ ಐ.ಡಿ. ಹೊಂದಿರಬೇಕು. ಬೆಳೆ ಸಾಲ ಪಡೆದ ರೈತರು ಬೆಳೆ ವಿಮೆಯಲ್ಲಿ ಭಾಗವಹಿಸಲು ಇಚ್ಚಿಸದಿದ್ದರೆ ಬ್ಯಾಂಕಿನ ವ್ಯವಸ್ಥಾಪಕರಿಗೆ ಕೊನೆಯ ದಿನಾಂಕದ ಒಂದು ವಾರದ ಮೊದಲು ಈ ಕುರಿತು ಮುಚ್ಚಳಿಕೆ ಪತ್ರ ನೀಡಬೇಕು. ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ