ಶಿವಮೊಗ್ಗ: ಜಿಲ್ಲೆಯಲ್ಲಿ ಪಿಎಂಜೆಜೆಬಿವೈ ಯೋಜನೆಯ ಪ್ರಗತಿ ಆಶಾದಾಯಕವಾಗಿಲ್ಲ. ಅತ್ಯಂತ ಪ್ರಯೋಜನಕಾರಿಯಾಗಿರುವ ಈ ಯೋಜನೆಗೆ ನಿರೀಕ್ಷಿತ ಪ್ರಮಾಣದಲ್ಲಿ ಜನರು ಹೆಸರು ನೋಂದಾಯಿಸಿಕೊಳ್ಳದಿರುವುದು ವಿಷಾದನೀಯ ಎಂದು ಜಿಪಂ ಸಿಇಒ ಎನ್.ಹೇಮಂತ್ ಹೇಳಿದರು.
ಜನಸಾಮಾನ್ಯರ ಭವಿಷ್ಯದ ಬದುಕಿಗೆ ಭದ್ರತೆ ನೀಡುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪ್ರಧಾನಮಂತ್ರಿ ಜೀವನಜ್ಯೋತಿ ನವೀಕರಿಸಬಹುದಾದ ವಿಮಾ ಯೋಜನೆಯಡಿ ಜಿಲ್ಲೆಯ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳ ಜನರನ್ನು ಅದರಲ್ಲೂ ವಿಶೇಷವಾಗಿ ಕೂಲಿ-ಕಾರ್ಮಿಕ ಸಮುದಾಯದವರನ್ನು ವಿಮಾ ವ್ಯಾಪ್ತಿಗೊಳಪಡಿಸಲು ಎಲ್ಲಾ ಬ್ಯಾಂಕುಗಳ ವ್ಯವಸ್ಥಾಪಕರು ಕೂಡಲೇ ಕ್ರಮಕೈಗೊಳ್ಳುವಂತೆ ತಿಳಿಸಿದರು.
ಜಿಲ್ಲೆಯ ಎಲ್ಲಾ ಬ್ಯಾಂಕುಗಳ ವ್ಯವಸ್ಥಾಪಕರು ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಗೊಳಪಡುವ ಗ್ರಾಮಗಳಲ್ಲಿ ಸಮುದಾಯ ಸಂಘಟಕರ ಸಹಯೋಗದೊಂದಿಗೆ ಕಾರ್ಯಕ್ರಮಗಳನ್ನು ರೂಪಿಸಿ, ಜನರಿಗೆ ಪ್ರೇರೇಪಿಸಿ, ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.ವಿಶೇಷವಾಗಿ ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಾಗಿರುವ ಎಲ್ಲರನ್ನೂ ಈ ಯೋಜನೆಯ ವ್ಯಾಪ್ತಿಗೊಳಪಡಿಸಬೇಕು ಎಂದ ಅವರು, ನಿಗದಿಪಡಿಸಿದ ಅವಧಿಯೊಳಗಾಗಿ ನವೀಕರಿಸಲು ಹಾಗೂ ನೂತನವಾಗಿ ವಿಮೆ ಮಾಡಿಸಲು ಕ್ರಮ ಕೈಗೊಳ್ಳಬೇಕು. ಆಭರಣದ ಮೇಲಿನ ಸಾಲ, ಸ್ವಸಹಾಯ ಗುಂಪುಗಳ ಪ್ರತಿನಿಧಿಗಳಿಗೆ ನೀಡುವ ಸಾಲ ಮತ್ತಿತರ ವಲಯಗಳ ಸಾಲವನ್ನು ಆದ್ಯತಾ ವಲಯ ಕೃಷಿ ಕ್ಷೇತ್ರದ ವ್ಯಾಪ್ತಿಗೊಳಪಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇವುಗಳನ್ನು ಬೇರ್ಪಡಿಸಿ, ಕೃಷಿ, ಆಹಾರ ಸಂಸ್ಕರಣೆ, ಕೃಷಿ ಉತ್ಪಾದಕ ಚಟುವಟಿಕೆಗಳು, ಪಶುಸಂಗೋಪನೆ ಮತ್ತಿತರ ವಿಷಯಗಳನ್ನು ಬೇರ್ಪಡಿಸಿ, ಆಯಾ ಕ್ಷೇತ್ರಗಳಲ್ಲಿ ಬ್ಯಾಂಕುಗಳು ಸಾಧಿಸಿರುವ ಪ್ರಗತಿಯನ್ನು ಗುರುತಿಸಬೇಕು ಎಂದರು.
ಜಿಲ್ಲೆಯ ಹೊಸನಗರ, ತೀರ್ಥಹಳ್ಳಿ ಮತ್ತು ಸಾಗರ ತಾಲೂಕುಗಳ ಗ್ರಾಮೀಣ ಪ್ರದೇಶಗಳಲ್ಲಿನ ಜನರು ಸರ್ಕಾರದ ವಿವಿಧ ವಸತಿ ಯೋಜನೆಗಳಡಿಯಲ್ಲಿ ತಮ್ಮ ಕನಸಿನ ಮನೆಯನ್ನು ಕಟ್ಟಿಕೊಳ್ಳಲು ಸಾಲಸೌಲಭ್ಯಕ್ಕಾಗಿ ಇಂದಿಗೂ ಖಾಸಗಿ ವ್ಯಕ್ತಿಗಳನ್ನು ಅವಲಂಬಿಸಿರುವುದು ಕಂಡುಬರುತ್ತಿದೆ. ಇಷ್ಟೆಲ್ಲಾ ಬ್ಯಾಂಕುಗಳು ನಿರಂತರವಾಗಿ ಸೇವೆ ಸಲ್ಲಿಸುತ್ತಿರುವಾಗ ಜನರು ತಮ್ಮ ಸೌಲಭ್ಯಗಳಿಗಾಗಿ ಬ್ಯಾಂಕುಗಳಿಗೆ ಬರುವಂತೆ ಮಾಡಲು ಬ್ಯಾಂಕುಗಳ ವ್ಯವಸ್ಥಾಪಕರು ಕಾರ್ಯಕ್ರಮಗಳನ್ನು ರೂಪಿಸಿ, ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಲೀಡ್ ಬ್ಯಾಂಕ್‌ನ ಉಪಮಹಾಪ್ರಬಂಧಕ ಆರ್.ದೇವರಾಜ್, ನಬಾರ್ಡ್‌ನ ಶರತ್, ಆರ್‌ಬಿಐನ ವ್ಯವಸ್ಥಾಪಕರ ಬಾಬುಲ್ ಬಾರ್ಡೋಲಿ ಹಾಗೂ ಲೀಡ್ ಬ್ಯಾಂಕ್‌ನ ವ್ಯವಸ್ಥಾಪಕ ಪಿ.ಹನುಮಂತಪ್ಪ ಸೇರಿದಂತೆ ಜಿಲ್ಲೆಯ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳ ವ್ಯವಸ್ಥಾಪಕರು ಉಪಸ್ಥಿತರಿದ್ದರು.