ಕಲಘಟಗಿ: ಶೇಕಡಾ 85ರಷ್ಟು ಬೆಳೆ ಸಮೀಕ್ಷೆ ಪೂರ್ಣ

KannadaprabhaNewsNetwork |  
Published : Aug 06, 2026, 02:00 AM IST
ಕಲಘಟಗಿ ತಾಲೂಕು ಪಂಚಾಯಿತಿಯಲ್ಲಿ ಬುಧವಾರ ಬರ ಪರಿಸ್ಥಿತಿ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವ ಸಂತೋಷ ಲಾಡ್‌. | Kannada Prabha

ಸಾರಾಂಶ

ಬೆಳೆ ದರ್ಶಕ ಆ್ಯಪ್‌ನಲ್ಲಿ ದಾಖಲಿಸಿದ ಮಾಹಿತಿ ಖಚಿತಪಡಿಸಿಕೊಳ್ಳಬೇಕು. ರೈತರು ಸಹ ತಪ್ಪಾದ ಮಾಹಿತಿ ಕಂಡು ಬಂದಲ್ಲಿ ಸರಿಪಡಿಸಲು ಅಧಿಕಾರಿಗಳಿಗೆ ತಿಳಿಸಬೇಕು ಎಂದು ಸಚಿವ ಸಂತೋಷ ಲಾಡ್‌ ಹೇಳಿದರು.

ಕಲಘಟಗಿ:

ಕಲಘಟಗಿ ತಾಲೂಕಿನಲ್ಲಿ ಶೇ. 85ರಷ್ಟು ಬೆಳೆ ಸಮೀಕ್ಷೆ ಪೂರ್ಣಗೊಂಡಿದ್ದು, ಇನ್ನುಳಿದ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಲು ಸಚಿವ ಸಂತೋಷ ಲಾಡ್‌ ಹೇಳಿದರು.

ತಾಲೂಕು ಪಂಚಾಯಿತಿಯಲ್ಲಿ ಬುಧವಾರ ಬರ ಪರಿಸ್ಥಿತಿ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಬೆಳೆ ದರ್ಶಕ ಆ್ಯಪ್‌ನಲ್ಲಿ ದಾಖಲಿಸಿದ ಮಾಹಿತಿ ಖಚಿತಪಡಿಸಿಕೊಳ್ಳಬೇಕು. ರೈತರು ಸಹ ತಪ್ಪಾದ ಮಾಹಿತಿ ಕಂಡು ಬಂದಲ್ಲಿ ಸರಿಪಡಿಸಲು ಅಧಿಕಾರಿಗಳಿಗೆ ತಿಳಿಸಬೇಕು ಎಂದರು.

ಸಿಸಿ ಟಿವಿ ಇರಲಿ:

ಅಂಗನವಾಡಿ ಕೇಂದ್ರ, ರಸಗೊಬ್ಬರ ವಿತರಣಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದ ಸಚಿವರು, ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆಯಲ್ಲಿ ಯಾವುದೇ ರೀತಿಯಲ್ಲಿ ಕೊರತೆಯಾಗದಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ತಿಳಿಸಿದರು.

ಅಡಕೆ ಬೆಳೆಯಿರಿ:

ತಾಲೂಕಿನಲ್ಲಿ ರೈತರು ಅಡಕೆ ಬೆಳೆ ಬೆಳೆಯುವ ಜತೆಗೆ ಬಾಳೆ, ಕಬ್ಬು, ಗೋವಿನಜೋಳ, ಕಾಳು ಮೆಣಸು ಸೇರಿದಂತೆ ವಿವಿಧ ಬೆಳೆ ಬೆಳೆಯುವಂತೆ ರೈತರಿಗೆ ಕರೆ ನೀಡಿದರು. ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಎಚ್ಚರ ವಹಿಸಿ. 16 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, 11 ಗ್ರಾಮದಲ್ಲಿ ಬೋರ್‌ವೆಲ್ ಕೊರೆಸಲಾಗಿದೆ ಎಂದ ಸಚಿವರು, ಪಟ್ಟಣಕ್ಕೆ ಅಗತ್ಯವಿರುವ ಕುಡಿಯುವ ನೀರನ್ನು ಬೆಣಚಿ ಕೆರೆಯಿಂದ ಪೂರೈಸಲಾಗುತ್ತಿದೆ. ಪೈಪ್‌ಲೈನ್ ಸೋರಿಕೆ ಕುರಿತು ದೂರು ಬಂದಿದ್ದು ಕೂಡಲೇ ಸರಿಪಡಿಸಲು ಅಧಿಕಾರಿಗಳು ಕ್ರಮವಹಿಸಬೇಕು ಎಂದರು.

ಬೀಳುವ ಹಂತದಲ್ಲಿರುವ ಶಾಲೆ-ಅಂಗನವಾಡಿ ಕಟ್ಟಡಗಳ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಈ ಹಿಂದೆ ತಾಲೂಕಿನ 140 ಶಾಲೆ ಹಾಗೂ 22 ಅಂಗನವಾಡಿಗಳಿಗೆ ಮೇಲ್ಚಾವಣಿಗೆ ತಗಡು ಅಳವಡಿಸಲು ಸೂಚಿಸಲಾಗಿತ್ತು. ಈ ಬಗ್ಗೆ ನಿಗಾ ಇಡಬೇಕೆಂದರು.

ಜಿಪಂ ಸಿಇಒ ಭುವನೇಶ ಪಾಟೀಲ ಮಾತನಾಡಿದರು. ತೆರಿಗೆ ವಸೂಲಾತಿಯಲ್ಲಿ ಸಾಧನೆ ಮಾಡಿದ ಗ್ರಾಪಂ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು. ಸಚಿವರು ಸಾರ್ವಜನಿಕರ ಅಹವಾಲು ಆಲಿಸಿದರು. ಎಸ್ಪಿ ಗುಂಜನ್ ಆರ್ಯ, ಎಸ್.ಆರ್. ಪಾಟೀಲ, ಬಸವರಾಜ ಭಾವಕರ, ಕೆಸಿಸಿ ಬ್ಯಾಂಕಿನ ನಿರ್ದೇಶಕ ಮಂಜುನಾಥ ಮುರಳ್ಳಿ, ತಹಸೀಲ್ದಾರ್‌ ಬಸವರಾಜ ಹೊಂಕಣದವರ, ತಾಪಂ ಅಧಿಕಾರಿ ಪರಶುರಾಮ ಸಾವಂತ, ಸರಸ್ವತಿ ಮಲಕನಕೊಪ್ಪ, ಯಲ್ಲಪ್ಪ ಹುಲಿಮನಿ, ಶಿವಾನಂದ ಗಾಣಿಗೇರ, ಜೈಲಾನಿ ಅಂಗಡಿ, ಗುರಲಿಂಗಪ್ಪ ಕಂಪ್ಲಿಕೊಪ್ಪ, ಮಂಜುನಾಥ ಬಾಗೋಡಿ ಇದ್ದರು.ತೆರಿಗೆ ವಸೂಲಾತಿಯಲ್ಲಿ 2ನೇ ಸ್ಥಾನ

ತೆರಿಗೆ ವಸೂಲಾತಿಯಲ್ಲಿ ಕಲಘಟಗಿ ತಾಲೂಕು ಜಿಲ್ಲೆಯಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ. 20 ಗ್ರಾಮ ಪಂಚಾಯಿತಿಗಳು ಶೇ. 100ರಷ್ಟು ತೆರಿಗೆ ವಸೂಲಾತಿ ಸಾಧನೆ ಮಾಡಿವೆ. ಎಂಟು ಗ್ರಾಪಂ ಶೇ. 90ಕ್ಕಿಂತ ಹೆಚ್ಚು ತೆರಿಗೆ ವಸೂಲಾತಿ ಮಾಡಿವೆ. ಅಳ್ನಾವರ ತಾಲೂಕು ಮೊದಲ ಸ್ಥಾನದಲ್ಲಿದೆ.

ಸಂತೋಷ ಲಾಡ್‌, ಸಚಿವ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮೀಕ್ಷೆ ನಂತರ ಬೆಳೆಹಾನಿ ಪರಿಹಾರ ಮೊತ್ತ ನಿರ್ಧಾರ: ಸಚಿವ ಲಾಡ್‌
ಬರ ನಿರ್ವಹಣೆಗೆ ಸಿದ್ಧರಾಗಿ: ಸಚಿವ ಸಂತೋಷ ಲಾಡ್‌