ಕನ್ನಡಪ್ರಭ ವಾರ್ತೆ ತುಮಕೂರು
ಕಳೆದ ವರ್ಷ ಒಂದರ್ಥದಲ್ಲಿ ಬಂಪರ್. ಕಾರಣವಿಷ್ಟೇ, ತುಮಕೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ, ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಒಂದು ಮುಕ್ಕಾಲು ಲಕ್ಷ ಮತಗಳಿಂದ ಗೆದ್ದ ವಿ. ಸೋಮಣ್ಣ ಅವರಿಗೆ ಕೇಂದ್ರ ರೈಲ್ವೆ ಸಚಿವ ಸ್ಥಾನ ದೊರೆಯಿತು. ಜಿಲ್ಲೆಯಿಂದ ಆಯ್ಕೆಯಾದ ಸಂಸದರೊಬ್ಬರಿಗೆ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನ ದೊರೆಯುವಂತಾಯಿತು. ತುಮಕೂರು- ರಾಯದುರ್ಗ ರೈಲು ಮಾರ್ಗ, ತುಮಕೂರು- ದಾವಣಗೆರೆ ಮಾರ್ಗಕ್ಕೆ ಸೋಮಣ್ಣ ಅವರಿಗೆ ರೈಲ್ವೆ ಖಾತೆ ದೊರೆತಿದ್ದರಿಂದ ನೆನೆಗುದಿಗೆ ಬಿದ್ದಿದ್ದ ಈ ಯೋಜನೆಗಳಿಗೆ ಮತ್ತೆ ಚಾಲನೆ ಸಿಗುವಂತಾಯಿತು. ತುಮಕೂರು, ತಿಪಟೂರು ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸುವ ಯೋಜನೆಗಳು ಕೂಡ ಸಾಕಾರಗೊಳ್ಳುವ ಹಂತಕ್ಕೆ ಬಂದಿವೆ. ಹಾಗೆಯೇ ತುಮಕೂರು- ಯಶವಂತಪುರ ಎಲೆಕ್ಟ್ರಿಕ್ ಮೆಮೋ ರೈಲಿಗೆ ಚಾಲನೆ ಸಿಗುವಂತಾಯಿತು. ಫೆಬ್ರವರಿ ತಿಂಗಳಿನಲ್ಲಿ ಹೆಸರಾಂತ ಕವಿ ಕವಿತಾ ಕೃಷ್ಣ ಅವರು ಅನಾರೋಗ್ಯದಿಂದ ನಿಧನರಾಗಿದ್ದು, ತುಮಕೂರು ಜಿಲ್ಲೆಗೆ ಅತ್ಯಂತ ನೋವು ತರುವ ಸಂಗತಿಯಾಯಿತು. 100ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದ ಹಾಗೂ ಕವಿತಾ ಕೃಷ್ಣ ಸಾಹಿತ್ಯ ಮಂದಿರದ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಕವಿತಾ ಕೃಷ್ಣ ಅವರು ರೂಪಿಸಿದ್ದರು.
ಇನ್ನು ಹೇಮಾವತಿ ಲಿಂಕ್ ಕೆನಾಲ್ ಯೋಜನೆಗೆ ಜಿಲ್ಲೆಯಲ್ಲಿ ಬಹು ದೊಡ್ಡ ಪ್ರತಿರೋಧ ಉಂಟಾಯಿತು. ಮಾಜಿ ಸಚಿವ ಸೊಗಡು ಶಿವಣ್ಣ, ಶಾಸಕರಾದ ಸುರೇಶಗೌಡ, ಜ್ಯೋತಿ ಗಣೇಶ್, ಎಂ.ಟಿ. ಕೃಷ್ಣಪ್ಪ ಮತ್ತಿತರರೊಂದಿಗೆ ದೊಡ್ಡ ಹೋರಾಟ ರೂಪುಗೊಂಡಿತು. ಈಗಲೂ ಕೂಡ ಹೋರಾಟದ ಕಾವು ಕಡಿಮೆಯಾಗಿಲ್ಲ.ಕಳೆದ ವರ್ಷ ಸೆಪ್ಟಂಬರ್ ತಿಂಗಳಿನಲ್ಲಿ ತುಮಕೂರಿನ ಮೈದಾಳ ಕೆರೆಯಲ್ಲಿ ಸೆಲ್ಫಿ ತೆಗೆಯುವಾಗ ಆಕಸ್ಮಿಕವಾಗಿ ಯುವತಿಯೊಬ್ಬಳು ಕಾಲು ಜಾರಿ ಕೆರೆಗೆ ಬಿದ್ದು ಕೊಚ್ಚಿ ಹೋದಳು. ಆಶ್ಚರ್ಯಕರವಾಗಿ ಬಂಡೆಯ ಮಧ್ಯೆ ಸಿಲುಕಿಕೊಂಡಿದ್ದ ಈಕೆ ಇಡೀ ರಾತ್ರಿ ಅಲ್ಲೇ ಕಳೆದಳು. ಮರು ದಿವಸ ಬೆಳಗ್ಗೆ ಆಕೆ ಜೀವಂತವಾಗಿ ಪತ್ತೆಯಾಗುವ ಮೂಲಕ ಈ ಘಟನೆ ರಾಜ್ಯದ ಗಮನಸೆಳೆಯಿತು.
ಸ್ವಾಮೀಜಿಯೊಬ್ಬರು ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ ಆರೋಪದ ಮೇಲೆ ಜೈಲು ಸೇರಿದ ಕಹಿ ಘಟನೆಯೂ ಕೂಡ ನಡೆಯಿತು. ಹಾಗೆಯೇ ತುಮಕೂರು ಬಳಿಯ ಕುಚ್ಚಂಗಿಯಲ್ಲಿ ಕಾರೊಂದರಲ್ಲಿ ಮೂವರ ಮೃತದೇಹ ಪತ್ತೆಯಾಗಿದ್ದವು. ಮೂಲತಃ ಮಂಗಳೂರಿನ ಕಡೆಯುವರಾದ ಇವರನ್ನು ನಿಧಿಯ ಆಸೆಗಾಗಿ ಕೊಲೆ ಮಾಡಲಾಗಿತ್ತು. ಮಧುಗಿರಿ ತಾಲೂಕಿನಲ್ಲಿ ಕಲೂಷಿತ ನೀರು ಸೇವಿಸಿ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ ದಾರುಣ ಘಟನೆಯೂ ನಡೆಯಿತು.