ಡಾ. ಯತೀಂದ್ರ ಕೂಡ ತಂದೆ ರೀತಿ ವೈಚಾರಿಕ ಗಟ್ಟಿತನ ಬೆಳೆಸಿಕೊಳ್ಳಲಿ:ಮೋಕ್ಷಪತಿ ಸ್ವಾಮೀಜಿ

KannadaprabhaNewsNetwork | Published : Jun 28, 2024 12:50 AM

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಾದಿಯಲ್ಲಿ ಅವರ ಮಗ ಡಾ. ಯತೀಂದ್ರ ಸಾಗುತ್ತಿರುವುದು ಖುಷಿ ವಿಷಯ.

ಕನ್ನಡಪ್ರಭ ವಾರ್ತೆ ಮೈಸೂರು

ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಕೂಡ ತಂದೆ ರೀತಿ ವೈಚಾರಿಕ ಗಟ್ಟಿತನ ಬೆಳೆಸಿಕೊಳ್ಳಲಿ ಎಂದು ರಾವಂದೂರು ಮಹಾಮಠದ ಶ್ರೀ ಮೋಕ್ಷಪತಿ ಸ್ವಾಮೀಜಿ ಆಶಿಸಿದರು.

ಮೈಸೂರು ವಿಶ್ವವಿದ್ಯಾನಿಲಯ ಹಿರಿಯ ವಿದ್ಯಾರ್ಥಿಗಳ ಒಕ್ಕೂಟ ವತಿಯಿಂದ ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹುಟ್ಟುಹಬ್ಬವನ್ನು ಅಂಗವಾಗಿ ಕ್ರಾಫರ್ಡ್ ಹಾಲ್ ಮುಂಭಾಗ 1 ಸಾವಿರ ಕುಟುಂಬಗಳಿಗೆ ಕಲ್ಪವೃಕ್ಷ ವಿತರಿಸುವ ಕಾರ್ಯಕ್ರಮಕ್ಕೆ ಅವರು ಗುರುವಾರ ಚಾಲನೆ ನೀಡಿ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಾದಿಯಲ್ಲಿ ಅವರ ಮಗ ಡಾ. ಯತೀಂದ್ರ ಸಾಗುತ್ತಿರುವುದು ಖುಷಿ ವಿಷಯ. ಹಾಗೆಯೇ ಮಗ ಕೂಡ ತಂದೆ ರೀತಿ ವೈಚಾರಿಕ ಗಟ್ಟಿತನವನ್ನು ಬೆಳೆಸಿಕೊಳ್ಳಲಿ. ರಾಜಕಾರಣ ದಿನದಿಂದ ದಿನಕ್ಕೆ ಕಲುಷಿತವಾಗುತ್ತಿರುವ ಈ ಸಂದರ್ಭದಲ್ಲಿ ಸಮಾಜಮುಖಿ ಹಾಗೂ ಸೈದ್ಧಾಂತಿಕ ಗಟ್ಟಿತನದ ಯುವ ವಿದ್ಯಾವಂತರು ರಾಜಕಾರಣಕ್ಕೆ ಪಾದಾರ್ಪಣೆ ಮಾಡಿ, ದೇಶವನ್ನು ಮುನ್ನಡೆಸುವ ಜವಾಬ್ದಾರಿ ನಿರ್ವಹಿಸುವುದು ವಿದ್ಯಾವಂತರ ಆದ್ಯ ಕರ್ತವ್ಯ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಧಿಕಾರ ಅವರಿಗೆ ದೊರಕಿ ನಾಡಿನ ಸೇವೆ ಮಾಡಬೇಕು ಎಂದು ಅವರು ಆಶೀರ್ವದಿಸಿದರು.

ಇತ್ತೀಚಿನ ದಿನಗಳಲ್ಲಿ ಹುಟ್ಟು ಹಬ್ಬವನ್ನು ಆಡಂಬರದಿಂದ ವೈಭವಯುತವಾಗಿ ಆಚರಿಸಿಕೊಳ್ಳುವುದು ಸಾಮಾನ್ಯವಾಗಿ ನೋಡುತ್ತೇವೆ. ಆದರೆ, ಈ ರೀತಿ ಪರಿಸರಸ್ನೇಹಿ ಹುಟ್ಟು ಹಬ್ಬದ ಆಚರಣೆ ಬಹಳ ಅಪರೂಪಕ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಮಾತನಾಡಿ, ಸಾವಿರ ಕಲ್ಪವೃಕ್ಷಗಳನ್ನು ನೀಡುತ್ತಿರುವುದು ಸಂತಸದ ವಿಚಾರ. ಪ್ರತಿಯೊಬ್ಬರ ಹುಟ್ಟುಹಬ್ಬವು ಈ ರೀತಿಯಾಗಿ ಆಚರಿಸಿದರೇ ಪರಿಸರದ ಸಂರಕ್ಷಣೆ ಸಾಧ್ಯವಾಗುತ್ತದೆ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್ ಮಾತನಾಡಿ, ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹುಟ್ಟು ಹಬ್ಬದ ಅಂಗವಾಗಿ ಪ್ರತಿ ತಾಲೂಕಿಗೆ 100 ಕಲ್ಪವೃಕ್ಷಗಳನ್ನು ನೀಡುತ್ತಿದ್ದು, ಸಾವಿರ ಕುಟುಂಬಗಳಿಗೆ ಸಾವಿರ ಕಲ್ಪವೃಕ್ಷಗಳನ್ನು ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ಮೈಸೂರು ವಿವಿ ಕುಲಸಚಿವೆ ವಿ.ಆರ್. ಶೈಲಜಾ, ಸಿಂಡಿಕೇಟ್ ಸದಸ್ಯರಾದ ಜಟ್ಟಿಹುಂಡಿ ಬಸವರಾಜು, ನಟರಾಜ್ ಶಿವಣ್ಣ, ಮಾದೇಶ್, ಕೋಟೆ ನಾಗರಾಜ್, ಮೈಸೂರು ವಿವಿ ವಿಶ್ವಮಾನವ ನೌಕರರ ಒಕ್ಕೂಟದ ಅಧ್ಯಕ್ಷ ವಾಸುದೇವ ಮೂರ್ತಿ, ಕೆಪಿಸಿಸಿ ಕಾರ್ಯದರ್ಶಿ ಭಾಸ್ಕರ್, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಪ್ರೊ. ಶಿವಕುಮಾರ್, ಮಲ್ಲೇಶ್ ಕೋಟೆ, ಈಶ್ವರ್ ಚಕ್ಕಡಿ, ತಿಮ್ಮಯ್ಯ, ಸುರೇಶ್ ಪಾಳ್ಯ, ಪ್ರೇಮ್, ಗಂಗಾಧರ್, ಕಾಂತರಾಜ್, ಚರಣರಾಜ್, ಮನೋನ್ಮಣಿ, ಶಾಮ್ ಯೋಗೇಶ್, ಜಮೀರ್, ಲಕ್ಷ್ಮಣ್, ನಾಗರಾಜ್, ಡಾ. ವೆಂಕಟೇಶ್, ನಾಗರಾಜ್, ಮಹೇಶ್, ದ್ಯಾವಪ್ಪನಾಯಕ, ಅಪ್ಪು, ಹರೀಶ್ ಮೊಗಣ್ಣ, ಪುಟ್ಟಸ್ವಾಮಿ, ಪ್ರವೀಣ್ ತೇಜ ಮೊದಲಾದವರು ಇದ್ದರು.

Share this article